ರಣಬೀರ್ ಕಪೂರ್ ಮತ್ತು ಯಶ್ ನಟನೆಯ 'ರಾಮಾಯಣ' ಚಿತ್ರವು ವಿಶ್ವದಾದ್ಯಂತ 1700 ಕೋಟಿ ರೂ. ಗಳಿಸಿದರೂ, ಟ್ರೇಡ್ ಅನಲಿಸ್ಟ್ ಪ್ರಕಾರ ಇದು ಫ್ಲಾಪ್ ಎನಿಸಿಕೊಂಡಿದೆ. ಸೋಲಿಗೆ ಕಾರಣ ಏನು ಗೊತ್ತಾ?
ಬೆಂಗಳೂರು: ನಿತೇಶ್ ತಿವಾರಿ ನಿರ್ದೇಶನದ ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ 2026ರ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ರಾಮಾಯಣ ಥಿಯೇಟರ್ಗಳಲ್ಲಿ ಇನ್ನೂ ಓಡ್ತಿದೆ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆಯುತ್ತಿದೆ. ಇಷ್ಟೆಲ್ಲಾ ಕಲೆಕ್ಷನ್ ಮಾಡಿದರೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಎಂದು ಖ್ಯಾತ ಟ್ರೇಡ್ ಅನಲಿಸ್ಟ್ ಸುಮಿತ್ ಕಡೆಲ್ ಹೇಳಿದ್ದಾರೆ. ಅಲ್ಲದೇ ಅವರು ಕಾರಣವನ್ನೂ ನೀಡಿದ್ದಾರೆ.
Sacnilk ಪ್ರಕಾರ, ರಾಮಾಯಣ ಬಿಡುಗಡೆಯಾದ ಕೇವಲ 20 ದಿನಗಳಲ್ಲಿ ಭಾರತದಲ್ಲಿ 900 ಕೋಟಿ ಗಳಿಸಿದೆ. ವಿದೇಶಿ ಮಾರುಕಟ್ಟೆಯಲ್ಲಿ 575 ಕೋಟಿ ರೂ. ದಾಟಿದೆ. ಆ ಮೂಲಕ ವಿಶ್ವದಾದ್ಯಂತ ಒಟ್ಟು 1700 ಕೋಟಿ ರೂಪಾಯಿ ಹಣ ಬಾಚಿದೆ. ಆ ಮೂಲಕ ಕಲೆಕ್ಷನ್ ಮಾಡುವ ಮೂಲಕ ಜವಾನ್, ಪುಷ್ಪ 2, ಧುರಂಧರ್ 2 ಅಂತಹ ದೊಡ್ಡ, ದೊಡ್ಡ ಸಿನಿಮಾಗಳಿಗೆ ಪೈಪೋಟಿ ನೀಡಿದೆ.
ಸಿನಿಮಾ ಫ್ಲಾಪ್ ಅಂದಿದ್ದೇಕೆ?
ಕಲೆಕ್ಷನ್ ಅಂಕಿ-ಅಂಶಗಳು ಭರ್ಜರಿಯಾಗಿ ಕಂಡರೂ ಸುಮಿತ್ ಕಡೆಲ್ ಪ್ರಕಾರ ಸಿನಿಮಾ ಲಾಸ್ನಲ್ಲಿದೆ. ಅವರು ನೀಡಿದ ಮೂರು ಕಾರಣಗಳು ಹೀಗಿವೆ.
ಹಾಕಿದ ಬಂಡವಾಳ ವಾಪಸ್ ಪಡೆಯುವಲ್ಲಿ ವಿಫಲ: ಎರಡು ಭಾಗಗಳಲ್ಲಿ ಬರುವ ಈ ಸಿನಿಮಾಗೆ ಒಟ್ಟು 4000 ಕೋಟಿ ಬಜೆಟ್ ಹಾಕಲಾಗಿದೆ. ಅಂದರೆ ಮೊದಲ ಭಾಗದಿಂದ ಸಿನಿಮಾ 2500 ಕೋಟಿ ಗಳಿಸಿಬೇಕಿತ್ತು. ಆದರೆ ಇಷ್ಟು ದಿನ ಕಳೆದರೂ ಅದರ ಹತ್ತಿರವೂ ಸುಳಿಯಲಿಲ್ಲ. ಥಿಯೇಟರ್ ಕಲೆಕ್ಷನ್ ಹಾಗೂ ನಾನ್-ಥಿಯೇಟ್ರಿಕಲ್ ರೈಟ್ಸ್ (OTT, ಸ್ಯಾಟಲೈಟ್) ಎಲ್ಲವನ್ನೂ ಸೇರಿಸಿದರೂ 2500 ಕೋಟಿ ಆಗೋದು ಕಷ್ಟ ಎನ್ನಲಾಗುತ್ತಿದೆ.
ಟಿಕೆಟ್ ದರ ಹೆಚ್ಚಳ: ರಾಮಾಯಣ ಸಿನಿಮಾಗೆ Average Ticket Price ₹400. ಹೀಗಾಗಿ ಕಲೆಕ್ಷನ್ ಮೊತ್ತ ದೊಡ್ಡದಾಗಿ ಕಾಣುತ್ತಿದೆ ಅನ್ನೋದು ಅವರ ವಾದ ಆಗಿದೆ.
ಪ್ರೇಕ್ಷಕರ ಸಂಖ್ಯೆ ಕಡಿಮೆ: ಚಿತ್ರಮಂದಿರಕ್ಕೆ ಬಂದ ಜನರ ಸಂಖ್ಯೆ ಕಡಿಮೆ ಇದೆ. ಹಿಂದಿಯಲ್ಲಿ 2.30 ರಿಂದ 2.40 ಕೋಟಿ ಜನ ಮಾತ್ರ ಥಿಯೇಟರ್ಗೆ ಬಂದಿದ್ದಾರೆ. ಜವಾನ್, ಪಠಾಣ್, ಗದರ್ 2 ಮತ್ತು ಧುರಂಧರ್ ಸಿನಿಮಾಗಳಿಗೆ 3 ಕೋಟಿಗೂ ಅಧಿಕ ಪ್ರೇಕ್ಷಕರು ಥಿಯೇಟರ್ಗೆ ಬಂದಿದ್ದರು.
ದಕ್ಷಿಣ ಭಾರತದಲ್ಲಿ ಓಕೆ ಓಕೆ: ಡಬ್ಬಿಂಗ್ ಅವತರಣಿಕೆಗಳು ಚಿತ್ರಕ್ಕೆ ಸ್ವಲ್ಪ ಮಟ್ಟಿಗೆ ಆಸರೆಯಾಗಿವೆ. ವಿಶೇಷವಾಗಿ ತಮಿಳು ಮತ್ತು ಕೇರಳ (ಮಲಯಾಳಂ) ಮಾರುಕಟ್ಟೆಯಲ್ಲಿ ವಿತರಕರಿಗೆ ಲಾಭವಾಗಿದೆ ಎಂದು ಸುಮಿತ್ ತಿಳಿಸಿದ್ದಾರೆ.
ಇದರೊಂದಿಗೆ ಸುಮಿತ್ ಕಡೆಲ್ ಪ್ರಕಾರ.. ರಾಮಾಯಣ ಒಟ್ಟಾರೆ ಲೈಫ್ಟೈಮ್ ಕಲೆಕ್ಷನ್ ಭಾರತದಲ್ಲಿ 1100 ಕೋಟಿ ಆಗಬಹುದು. ವಿದೇಶದಲ್ಲಿ 650 ಕೋಟಿ ಗಳಿಸುವ ಸಾಧ್ಯತೆ ಇದೆ. ಒಟ್ಟು 1750 ಕೋಟಿ ರೂಪಾಯಿ ಆಸುಪಾಸಿನಲ್ಲಿ ಸಿನಿಮಾ ತನ್ನ ಓಟವನ್ನು ನಿಲ್ಲಿಸಬಹುದು ಎನ್ನುತ್ತಾರೆ.
ಮೂರನೇ ವಾರಕ್ಕೆ ಕಾಲಿಟ್ಟಿರುವ ರಾಮಾಯಣ ಚಿತ್ರಕ್ಕೆ ಅಮೆರಿಕದಲ್ಲಿ (US) ದೊಡ್ಡ ಹೊಡೆತ ಬಿದ್ದಿದೆ. ಪ್ರೇಕ್ಷಕರ ಕೊರತೆ ಹಾಗೂ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಅಮೆರಿಕದ ಬರೋಬ್ಬರಿ 800 ಚಿತ್ರಮಂದಿರಗಳಿಂದ ತೆಗೆದುಹಾಕಲಾಗಿದೆ. ಇದು ಚಿತ್ರದ ಗ್ಲೋಬಲ್ ಕಲೆಕ್ಷನ್ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ. ಒಟ್ಟಿನಲ್ಲಿ ರಣಬೀರ್ ಕಪೂರ್ 3 ವರ್ಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಂಡು, ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮಿಂಚಿದರೂ ಸಿನಿಮಾ ನಿರೀಕ್ಷೆಗೆ ತಕ್ಕಂತೆ ಓಡಿಲ್ಲ. ಹೀಗಾಗಿ ರಾಮಾಯಣದ ಬಜೆಟ್ ಸೇಫ್ ಆಗಿಲ್ಲ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.
















