ಶಿವರಾಜ್‌ಕುಮಾರ್ ಅವರಿಗೆ ಬಂದ ಸಿನಿಮಾದ ಅವಕಾಶ ಡಾ.ರಾಜ್‌ಕುಮಾರ್ ಅವರ ಪಾಲಾಗಿತ್ತು. ಈ ಚಿತ್ರ ಬಿಡುಗಡೆಯಾಗಿ ಇತಿಹಾಸ ಸೃಷ್ಟಿಸಿದ್ದು ಮಾತ್ರವಲ್ಲದೆ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. 1993ರಲ್ಲಿ ಬಿಡುಗಡೆಯಾದ ಈ ಸಿನಿಮಾದ ಹಾಡುಗಳು ಇಂದಿಗೂ ಜೀವಂತವಾಗಿವೆ.

ಬೆಂಗಳೂರು: ವರನಟ ಡಾ.ರಾಜ್‌ಕುಮಾರ್ ಸಿನಿಮಾಗಳು ಅಂದ್ರೆ ಜನರು ಬಿಡುಗಡೆ ಒಂದು ದಿನದ ಮುಂಚೆಯೇ ಥಿಯೇಟರ್ ಮುಂದೆ ಕ್ಯೂ ನಿಲ್ಲುತ್ತಿದ್ದರು. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ನಟಿಸುತ್ತಿದ್ದ ವೇಳೆಯಲ್ಲಿಯೂ ಡಾ.ರಾಜ್‌ಕುಮಾರ್ ಸಿನಿಮಾ ಉದ್ಯಮದಲ್ಲಿ ಸಕ್ರಿಯರಾಗಿದ್ದರು. ಕೆಲವೊಮ್ಮೆ ದೊಡ್ಮನೆಗೆ ನಿರ್ಮಾಪಕರು ಮತ್ತು ನಿರ್ದೇಶಕರು ಬಂದ್ರೆ ಯಾರನ್ನು ಭೇಟಿಯಾಗಲು ಬಂದಿದ್ದಾರೆ ಅನ್ನೋ ಗೊಂದಲ ಇರುತ್ತಿತ್ತಂತೆ. ಹಿರಿಯ ಮಗ ಶಿವರಾಜ್‌ಕುಮಾರ್‌ ಅವರಿಗೆ ಸಿನಿಮಾದ ಆಫರ್ ಬಂದಿತ್ತು. ಆದ್ರೆ ಕೆಲವು ಕಾರಣಗಳಿಂದ ಈ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್ ನಟಿಸಿದರು. ಈ ಸಿನಿಮಾ ಬಿಡುಗಡೆ ನಂತರ ಆಗಿದ್ದು ಇತಿಹಾಸ.

ಅಂದು ಶಿವಣ್ಣನ ವಯಸ್ಸು ಕೇವಲ 30!

ಈ ಸಿನಿಮಾದ ಆಫರ್ ಬಂದಾಗ ಶಿವರಾಜ್‌ಕುಮಾರ್ ವಯಸ್ಸು ಇನ್ನು 30 ಆಗಿತ್ತು. ಈ ಸಂದರ್ಭದಲ್ಲಿ ಶಿವರಾಜ್‌ಕುಮಾರ್ ಯಂಗ್ ಆಂಡ್ ಎನರ್ಜೆಟಿಕ್ ಹೀರೋ ಆಗಿದ್ದರು. ಬಹುತೇಕ ಪ್ರೇಮಕಥೆಯ ಸಿನಿಮಾಗಳಲ್ಲಿ ಶಿವರಾಜ್‌ಕುಮಾರ್ ನಟಿಸುತ್ತಿದ್ದರು. ಹಾಗಾಗಿ ಈ ಸಿನಿಮಾದ ಕಥೆ ಕೇಳಿದಾಗ ಶಿವರಾಜ್‌ಕುಮಾರ್‌ಗಿಂತ ಅಣ್ಣಾವರು ನಟಿಸಿದ್ರೆ ಉತ್ತಮ ಅಭಿಪ್ರಾಯ ಕೇಳಿ ಬಂದಿತ್ತು. ಪಾರ್ವತಮ್ಮ ಅವರು ಸಹ ಈ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದರಂತೆ.

1993ರಲ್ಲಿ ಬಿಡುಗಡೆಯಾದ ಸಿನಿಮಾ

1993ರಲ್ಲಿ ಬಿಡುಗಡೆಯಾದ ಈ ಸಿನಿಮಾಗೆ ಟಿ.ಎಸ್.ನಾಗಭರಣ ಆಕ್ಷನ್ ಕಟ್ ಹೇಳಿದ್ರೆ, ಎಸ್. ಎ. ಗೋವಿಂದರಾಜು ಬಂಡವಾಳ ಹಾಕಿದ್ದರು. ಡಾ.ರಾಜ್‌ಕುಮಾರ್ ಅವರ ನರಸಿಂಹಮೂರ್ತಿಯಾಗಿ ತೆರೆ ಮೇಲೆ ಅಬ್ಬರಿಸಿದ್ದರು. ಮಾಧವಿ, ಗೀತಾ, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಪಂಡರೀಬಾಯಿ, ಸುಂದರ್‌ರಾಜ್‌ ಸೇರಿದಂತೆ ದೊಡ್ಡ ತಾರಾಬಳಗವನ್ನು ಈ ಸಿನಿಮಾ ಹೊಂದಿತ್ತು. ಹಂಸಲೇಖ ಅವರ ಸಂಗೀತಕ್ಕೆ ಅಣ್ಣಾವರ ಧ್ವನಿ ಈ ಚಿತ್ರದ ಹಾಡುಗಳನ್ನು ಅತ್ಯಂತ ಶ್ರೀಮಂತಗೊಳಿಸಿದ್ದವು.

ಯಾವುದು ಈ ಸಿನಿಮಾ?

ಆಕಸ್ಮಿಕ ಸಿನಿಮಾ ಅಂದ್ರೆ ಕಣ್ಮುಂದೆ 'ಹುಟ್ಟಿದ್ರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು' ಹಾಡು ಬರುತ್ತದೆ. ಈ ಚಿತ್ರದಲ್ಲಿ ಹೀರೋ ಪಾತ್ರ ಮಧ್ಯವಯಸ್ಕ ವ್ಯಕ್ತಿಯಾದಾಗಿತ್ತು ಮತ್ತು ತುಂಬಾ ಮೆಚ್ಯೂರಿಟಿಯನ್ನು ಹೊಂದಿತ್ತು. ಆದ್ರೆ ಶಿವಣ್ಣ ತೆರೆ ಮೇಲೆ 18ರ ಹುಡುಗನಂತೆ ಕಾಣಿಸುತ್ತಿದ್ದರು. ಈ ಕಾರಣದಿಂದ ರಾಜ್‌ಕುಮಾರ್ ಅವರಿಗೆ ಆಕಸ್ಮಿಕ ಸಿನಿಮಾದಲ್ಲಿ ನಟಿಸುವ ಅವಕಾಶ ಬರುತ್ತದೆ.

1993ರಲ್ಲಿ ಬಿಡುಗಡೆಯಾದ ಆಕಸ್ಮಿಕ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಹುಬ್ಬಳ್ಳಿ ರಾಣಿಚೆನ್ನಮ್ಮಾ ಸರ್ಕಲ್‌ನಲ್ಲಿ ನಡೆದ ಹಾಡಿನ ಚಿತ್ರೀಕರಣ ಮಾಡೋದು ಚಿತ್ರತಂಡಕ್ಕೆ ಸವಾಲು ಆಗಿತ್ತು. ಆರಂಭದಲ್ಲಿ ಬೆಂಗಳೂರಿನಲ್ಲಿ ಶೂಟಿಂಗ್ ಮಾಡುವಂತೆ ಪಾರ್ವತಮ್ಮ ಅವರು ಹೇಳಿದ್ರಂತೆ. ಆದ್ರೆ ಅಂತಿಮವಾಗಿ ನಿರ್ದೇಶಕರು ಹುಬ್ಬಳ್ಳಿಯಲ್ಲಿ ಹಾಡಿನ ಶೂಟ್ ಮಾಡುವ ಮೂಲಕ ದಾಖಲೆ ಬರೆದಿದ್ದರು.

ಆಕಸ್ಮಿಕ ಚಿತ್ರಕ್ಕೆ ಸಾಲು ಸಾಲು ಪ್ರಶಸ್ತಿಗಳು

ಎರಡನೇ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಹಿನ್ನೆಲೆ ಗಾಯಕ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದರೆ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ವೇದಿಕೆಯಲ್ಲಿ ಅತ್ಯುತ್ತಮ ಚಿತ್ರ , ಅತ್ಯುತ್ತಮ ನಟ, ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗದಲ್ಲಿ ಪ್ರಶಸ್ತಿಯನ್ನು ಆಕಸ್ಮಿಕ ಪಡೆದುಕೊಂಡಿತ್ತು.