ತಮ್ಮ ಜೀವನದ ಹಳೆಯ ನೆನಪುಗಳನ್ನು ಹಂಚಿಕೊಂಡಿರುವ ರಮೇಶ್ ಭಟ್, ಅಂಗಡಿಯಿಂದ ಸಿನಿಮಾ ಜಗತ್ತಿಗೆ ಬಂದ ರೋಚಕ ಅನುಭವವನ್ನು ವಿವರಿಸಿದ್ದಾರೆ. ಕುಂದಾಪುರದಿಂದ ಚಿಕ್ಕ ವಯಸ್ಸಿನಲ್ಲೇ ಬೆಂಗಳೂರಿಗೆ ಬಂದಿದ್ದ ಅವರು, ಗಾಂಧಿ ಬಜಾರ್ನಲ್ಲಿ ಕುಟುಂಬದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಶಂಕರ್ ನಾಗ್ ಸಹವಾಸದಿಂದ ಸಿನಿಮಾಗೆ ಬಂದರು..
ಅಂಗಡಿ ಬಿಟ್ಟು ಸಿನಿಮಾರಂಗಕ್ಕೆ ಬಂದೆ, ಜೀವನ ನಿರ್ವಹಣೆಗೆ ಏನೇನೋ ಮಾಡಿದೆ; ಶಂಕರ್ನಾಗ್ ಕೊಟ್ಟ ಧೈರ್ಯದ ಬಗ್ಗೆ ರಮೇಶ್ ಭಟ್ ಮಾತು!
ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳ ಮೂಲಕವೇ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ಹಿರಿಯ ನಟ ರಮೇಶ್ ಭಟ್ ಅವರ ಬದುಕಿನ ಪಯಣವೇ ಒಂದು ಕುತೂಹಲಕಾರಿ ಕಥೆ. ಬಾಲ್ಯದಲ್ಲೇ ನಾಟಕದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಅವರು, ಒಂದು ಕಾಲದಲ್ಲಿ ಅಂಗಡಿ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಕಲಾವಿದನಾಗಬೇಕೆಂಬ ಕನಸು ಮಾತ್ರ ಅವರ ಮನಸ್ಸಿನಿಂದ ದೂರವಾಗಿರಲಿಲ್ಲ. ಆ ಕನಸಿಗೆ ರೆಕ್ಕೆ ನೀಡಿದವರು ನಟ ಹಾಗೂ ನಿರ್ದೇಶಕ ಶಂಕರ್ನಾಗ್!
ಇತ್ತೀಚೆಗೆ ಖಾಸಗಿ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಹಳೆಯ ನೆನಪುಗಳನ್ನು ಹಂಚಿಕೊಂಡಿರುವ ರಮೇಶ್ ಭಟ್, ಅಂಗಡಿಯಿಂದ ಸಿನಿಮಾ ಜಗತ್ತಿಗೆ ಬಂದ ರೋಚಕ ಅನುಭವವನ್ನು ವಿವರಿಸಿದ್ದಾರೆ. ಕುಂದಾಪುರದಿಂದ ಚಿಕ್ಕ ವಯಸ್ಸಿನಲ್ಲೇ ಬೆಂಗಳೂರಿಗೆ ಬಂದಿದ್ದ ಅವರು, ಗಾಂಧಿ ಬಜಾರ್ನಲ್ಲಿ ಕುಟುಂಬದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಬಳಿಕ ಆರ್ಥಿಕ ಸಂಕಷ್ಟದಿಂದ ಹೆಚ್ಚಿನ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕುಟುಂಬದ ಅಂಗಡಿಯ ಜವಾಬ್ದಾರಿ ಅವರ ಹೆಗಲೇರಿತ್ತು.
ಆದರೆ ಅಂಗಡಿ ವ್ಯಾಪಾರವೇ ಅವರ ಪ್ರಪಂಚವಾಗಿರಲಿಲ್ಲ. ಶಾಲಾ ದಿನಗಳಿಂದಲೇ ನಾಟಕಗಳ ಮೇಲೆ ಅಪಾರ ಆಸಕ್ತಿ ಹೊಂದಿದ್ದ ರಮೇಶ್ ಭಟ್, ತಮ್ಮ ಅಂಗಡಿಯಲ್ಲಿ ಪ್ರತಿದಿನ ಒಬ್ಬೊಬ್ಬ ನಟ ಅಥವಾ ನಟಿಯ ದೊಡ್ಡ ಫೋಟೋ ಹಾಕುತ್ತಿದ್ದರಂತೆ. ನೆಚ್ಚಿನ ಕಲಾವಿದರ ಫೋಟೋ ನೋಡಲು ಕಾಲೇಜು ವಿದ್ಯಾರ್ಥಿಗಳು ಅಂಗಡಿಗೆ ಬರುತ್ತಿದ್ದರು. ಈ ಮೂಲಕ ಹಲವು ಕಲಾವಿದರು, ಸಾಹಿತಿಗಳ ಪರಿಚಯವೂ ಅವರಿಗೆ ದೊರೆಯಿತು. ಹೀಗೆ ವ್ಯಾಪಾರದ ನಡುವೆಯೇ ಸಿನಿಮಾ ಮತ್ತು ನಾಟಕದ ಲೋಕದೊಂದಿಗೆ ಅವರ ಒಡನಾಟ ಬೆಳೆಯತೊಡಗಿತು.
1978-79ರ ಅವಧಿಯಲ್ಲಿ 'ಸಾಂಕೇತ್' ನಾಟಕ ತಂಡವನ್ನು ಆರಂಭಿಸಿದ ಅವರು, 'ಅಂಜುಮಲ್ಲಿಗೆ' ನಾಟಕದ ಮೂಲಕ ರಂಗಭೂಮಿಗೆ ಅಧಿಕೃತವಾಗಿ ಕಾಲಿಟ್ಟರು. ಇದೇ ಸಮಯದಲ್ಲಿ ಶಂಕರ್ನಾಗ್ ಅವರ ಪರಿಚಯವಾಯಿತು. ರಮೇಶ್ ಭಟ್ ಅವರಲ್ಲಿದ್ದ ನಟನೆಯ ಆಸಕ್ತಿಯನ್ನು ಗುರುತಿಸಿದ ಶಂಕರ್ನಾಗ್, ಸಿನಿಮಾಗಳಲ್ಲಿ ಅಭಿನಯಿಸುವಂತೆ ಪ್ರೋತ್ಸಾಹಿಸಿದರು. ಆದರೆ ಅಂಗಡಿ ಬಿಟ್ಟು ಬಂದರೆ ಜೀವನ ನಿರ್ವಹಣೆ ಹೇಗೆ ಎಂಬ ಆತಂಕ ರಮೇಶ್ ಭಟ್ ಅವರನ್ನು ಕಾಡುತ್ತಿತ್ತು.
ಆಗ ಶಂಕರ್ನಾಗ್ ನೀಡಿದ ಭರವಸೆ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. 'ಅಂಗಡಿಯಲ್ಲಿ ಎಷ್ಟು ಸಂಪಾದಿಸುತ್ತೀಯೋ ಅಷ್ಟನ್ನು ಸಿನಿಮಾದಲ್ಲೂ ಸಂಪಾದಿಸಬಹುದು' ಎಂದು ಧೈರ್ಯ ತುಂಬಿದರಂತೆ. ಅವರ ಮಾತನ್ನು ನಂಬಿ ರಮೇಶ್ ಭಟ್ ಸಿನಿಮಾ ಕ್ಷೇತ್ರಕ್ಕೆ ಹೆಜ್ಜೆಯಿಟ್ಟರು.
ನಂತರ 'ಮಿಂಚಿನ ಓಟ' ಸಿನಿಮಾದಲ್ಲಿ ಶಂಕರ್ನಾಗ್ ಅವರೊಂದಿಗೆ ನಟಿಸುವ ಅವಕಾಶ ದೊರೆಯಿತು. ಬಳಿಕ ಜನಪ್ರಿಯ 'ಮಾಲ್ಗುಡಿ ಡೇಸ್'ನಲ್ಲಿ ಅಭಿನಯಿಸುವುದರ ಜತೆಗೆ ಸಹ-ನಿರ್ದೇಶಕರಾಗಿಯೂ ಕೆಲಸ ಮಾಡಿದರು. ಕಾಲಕ್ರಮೇಣ ಶಂಕರ್ನಾಗ್ ಅವರೊಂದಿಗೆ ಉತ್ತಮ ಸ್ನೇಹ ಬೆಳೆಸಿಕೊಂಡರು. 'ನೋಡಿ ಸ್ವಾಮಿ ನಾವಿರೋದೇ ಹೀಗೆ' ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಂಡರು. 'ಜೀವನ ಚಕ್ರ' ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.
ಕೇವಲ ನಟನೆಯಷ್ಟೇ ಅಲ್ಲ, ಬದುಕಿನ ನಿರ್ವಹಣೆಗಾಗಿ ಹಲವು ರೀತಿಯ ಕೆಲಸಗಳನ್ನು ಮಾಡಿರುವುದಾಗಿ ಅವರು ಹೇಳಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ರಮೇಶ್ ಭಟ್, ಅನಂತ್ನಾಗ್ ಸೇರಿದಂತೆ ಕನ್ನಡದ ಹಲವು ಪ್ರಮುಖ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅವಕಾಶಗಳು ಇಲ್ಲದ ಸಮಯದಲ್ಲಿ 'ಬ್ರಾಂಡ್ ಡಿಸೈನ್' ಮುದ್ರಣ ಸಂಸ್ಥೆಯ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದರು. ಈಗ ಆ ಸಂಸ್ಥೆಯ ಜವಾಬ್ದಾರಿಯನ್ನು ಮಗ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಇಂದು ಪತ್ನಿ, ಮಗ ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿರುವ ರಮೇಶ್ ಭಟ್, ತಮ್ಮ ಜೀವನದಲ್ಲಿ ಮಾಡಿದ ಕೆಲಸಗಳ ಬಗ್ಗೆಯಾಗಲಿ, ಮಾಡಲಾಗದ ಕೆಲಸಗಳ ಬಗ್ಗೆಯಾಗಲಿ ಯಾವುದೇ ಪಶ್ಚಾತ್ತಾಪವಿಲ್ಲ ಎನ್ನುತ್ತಾರೆ. ಅಂಗಡಿಯಿಂದ ಆರಂಭವಾದ ಬದುಕಿನ ಪಯಣ 600ಕ್ಕೂ ಹೆಚ್ಚು ಸಿನಿಮಾಗಳವರೆಗೆ ತಲುಪಿರುವುದು ನಿಜಕ್ಕೂ ಸ್ಫೂರ್ತಿದಾಯಕ. ಅದರ ಹಿಂದೆ ಶಂಕರ್ನಾಗ್ ನೀಡಿದ ಪ್ರೋತ್ಸಾಹ ಮತ್ತು ರಮೇಶ್ ಭಟ್ ಅವರ ಕಲೆಯ ಮೇಲಿನ ಪ್ರೀತಿಯೂ ಇದೆ.














