ಮದುವೆಯಾಗಿ ನಾಲ್ಕು ವರ್ಷವಾದರೂ ಹೆಂಡತಿಗೆ ತುಂಬಾ ಅನುಮಾನ. ನಾನು ಮೊದಲಿನಿಂದಲೂ ಹೆಚ್ಚು ಸ್ನೇಹಿತರ ವಲಯದಲ್ಲೇ ಬೆಳೆದವನು. ಇದರಲ್ಲಿ ಹುಡುಗಿಯರೂ ಇದ್ದರು. ಈಗ ಎಲ್ಲರೂ ಅವರವರ ಸಂಸಾರ ಎಂದು ಬೇರೆ ಬೇರೆ ಕಡೆ ಬದುಕುತ್ತಿದ್ದಾರೆ. ತಿಂಗಳಿಗೋ, ಎರಡು ತಿಂಗಳಿಗೋ ನಾವೆಲ್ಲಾ ಒಟ್ಟಾಗಿ ಸೇರುತ್ತೇವೆ. ಸಂತೋಷದಿಂದ ಇರುತ್ತೇವೆ. ಆದರೆ ನನ್ನ ಹೆಂಡತಿಗೆ ಇದೆಲ್ಲಾ ಇಷ್ಟವಾಗುತ್ತಿಲ್ಲ. ಇದೇ ಕಾರಣಕ್ಕೆ ಜಗಳ ಮಾಡುತ್ತಾಳೆ. ನನ್ನ ಕ್ಯಾರೆಕ್ಟರ್ ಬಗ್ಗೆ ಸಂಶಯ ಪಡುತ್ತಾಳೆ ಎಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದ ಬೆಂಗಳೂರಿನ
ಶ್ರೀನಿವಾಸ್ ಮೂರ್ತಿ ಅವರ ಪತ್ರಕ್ಕೆ ಬಂದ ಉತ್ತರಗಳಿವು.

ಪ್ರೀತಿಯಿಂದ ವರ್ತಿಸಿ, ಹೊರಗೆ ಸುತ್ತಾಡಿ
ನಿಮ್ಮದು ಬಗೆಹರಿಯದಂತ ಸಮಸ್ಯೆ ಏನಲ್ಲ, ತಾಳ್ಮೆ ಮತ್ತು ಜಾಣತನದಿಂದ ಬಗೆಹರಿಸಿ. ನಿಮ್ಮ ಪತ್ನಿಯೊಂದಿಗೆ ಪ್ರೀತಿ, ವಿಶ್ವಾಸ ಹಾಗೂ ಸ್ನೇಹದಿಂದ ಮಾತನಾಡಿ. ನಿಮ್ಮ ಸ್ನೇಹಿತರೊಂದಿಗೆ ನೀವು ಭೇಟಿಯಾಗುವಾಗ ಅವರನ್ನು ಕರೆದುಕೊಂಡು ಹೋಗಿ. ಅದು ನಿಮ್ಮ ಪತ್ನಿಗೆ ಇಷ್ಟವಾಗದಿದ್ದರೆ ತಿಂಗಳಿಗೊಮ್ಮೆ ನೀವಿಬ್ಬರೇ ಹೊರಗಡೆ ಸುತ್ತಾಡಿಕೊಂಡು ಬನ್ನಿ. ಇದರಿಂದ ನಿಮ್ಮ ಮೇಲೆ ಅವರಿಗೆ ಪ್ರೀತಿಯೊಂದಿಗೆ ವಿಶ್ವಾಸವು ಹೆಚ್ಚಾಗಬಹುದು.

- ಕಿರಣ ಪ. ನಾಯ್ಕನೂರ ಯಾವಗಲ್ಲ

ಅವರಿಗಾಗಿ ಸಾಕಷ್ಟು ಸಮಯ ಮೀಸಲಿಡಿ
ನಿಮ್ಮ ಪತ್ನಿ ನಿಮ್ಮನ್ನು ಹೆಚ್ಚಾಗಿ ಪ್ರೀತಿಸುವುದು, ನಿಮ್ಮ ಸಾಮಿಪ್ಯವನ್ನು ಹೆಚ್ಚಾಗಿ ಬಯಸುವುದೇ ಈ ರೀತಿ ಅನುಮಾನ ಉಂಟಾಗಲು ಕಾರಣ. ಇದನ್ನು ಸರಿ ಮಾಡಿಕೊಳ್ಳುವ ಶಕ್ತಿ ಇರುವುದು ನಿಮ್ಮಲ್ಲಿಯೇ. ನೀವು ಅವರಿಗಾಗಿ ಸಾಕಷ್ಟು ಸಮಯ ಮೀಸಲಿಡಿ. ಅವರ ಭಾವನೆಗಳಿಗೆ ಬೆಲೆ ಕೊಡಿ. ನಿಮ್ಮ ಸ್ನೇಹಿತರನ್ನು ಅವರಿಗೂ ಪರಿಚಯ ಮಾಡಿಸಿ. ಆಗ ಅನುಮಾನ ಕಡಿಮೆಯಾಗುತ್ತದೆ. ಅವರ ಇಷ್ಟ-ಕಷ್ಟಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ.

- ಕುಸುಮಾ ದೊಡ್ಡಮನಿ ಬೀದರ್

ಹೆಚ್ಚು ಪ್ರೀತಿ ತೋರಿಸಿ
ಎಲ್ಲಾ ಹೆಂಡತಿಯರು ತನ್ನ ಗಂಡ ತಮ್ಮದೇ ತೆಕ್ಕೆಯಲ್ಲಿ ಇರಬೇಕು ಎಂದು ಬಯಸುತ್ತಾರೆ. ಒಂದು ವೇಳೆ ಅವರ ಮನಸ್ಸು ಬೇರೆ ಕಡೆ ವಾಲುತ್ತಿದೆ, ನನ್ನ ಜೊತೆಗೆ ಮನಸಾರೆ ಮಾತಾಡುತ್ತಿಲ್ಲ ಎನ್ನಿಸಿದಾಗಲೇ ಅನುಮಾನ ಪಡುವುದು, ಜಗಳ ಮಾಡುವುದು ಮಾಡುತ್ತಾರೆ. ಆಗ ಗಂಡಸು ಇದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ಸಮಸ್ಯೆ ಪರಿಹರಿಸಿಕೊಳ್ಳಬೇಕು. ಇಲ್ಲವಾದರೆ ಜೀವನ ನರಕವಾಗುತ್ತೆ. ನೀವು ಮೊದಲು ಮಾಡಬೇಕಿರುವುದು ನಿಮ್ಮ ಹೆಂಡತಿಗೆ ಹೆಚ್ಚು ಪ್ರೀತಿ ತೋರಿಸುವ ಕೆಲಸ.

- ಡಾ. ಗಜಾನನ ಭಟ್ ಚಿಕ್ಕಮಗಳೂರು

ಈ ಸುದ್ದಿಗಳನ್ನೂ ಓದಿ

> ಅತ್ತೆ ಉಪಟಳ ಸಹಿಸೋದು ಹೇಗೆ?

> ಮಗುವಿಗಾಗಿ ಹಂಬಲಿಸುವವರಿಗೆ ಈ ಡಯೆಟ್

> ಶೀರೂರು ಸ್ವಾಮೀಜಿಗೂ ಇತ್ತಾ ಅಕ್ರಮ ಸಂಬಂಧ

> ಅನುಷ್ಕಾ ಜತೆ ಪ್ರಭಾಸ್ ಮದುವೆ: ಅನುಷ್ಕಾ ಅಮ್ಮ ಹೇಳೋದೇನು?

> ಮದುವೆ ಎಂದರೆ ಹೆಂಡತಿ ಅದಕ್ಕೆ ಸದಾ ಸಿದ್ಧಳಿರಬೇಕು ಎಂದಲ್ಲ