ಮಳೆಯ ಕೊರತೆಯಿಂದ ಸಾಂಪ್ರದಾಯಿಕ ಬೆಳೆಗಳಲ್ಲಿ ನಷ್ಟ ಅನುಭವಿಸುವ ರೈತರಿಗೆ ಸಪೋಟಾ ಕೃಷಿ ಅತ್ಯುತ್ತಮ ಹಾಗೂ ಲಾಭದಾಯಕ ಪರ್ಯಾಯವಾಗಿದೆ. ಒಂದು ಎಕರೆ ಸಪೋಟಾ ಬೆಳೆಯಲು ಆರಂಭಿಕ ವೆಚ್ಚ 40 ರಿಂದ 50 ಸಾವಿರ ರೂಪಾಯಿಗಳು ತಗಲುತ್ತದೆ. ಈ ಬೆಳೆಯಿಂದ ರೈತರು ಪ್ರತಿ ವರ್ಷ ಎಕರೆಗೆ 2 ರಿಂದ 2.5 ಲಕ್ಷ ಗಳಿಸಬಹುದು!
ಇತ್ತೀಚಿನ ವರ್ಷಗಳಲ್ಲಿ ಮಳೆಯ ಕೊರತೆಯಿಂದ ವರ್ಷ ವರ್ಷ ಬೆಳೆಯುವ ಬೆಳೆಗಳಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹತ್ತಿ, ಜೋಳ ಬೆಳೆಯುವ ರೈತರು ಮುಂಗಾರು ಮಳೆ ಕೈಕೊಟ್ಟರೆ ಅ ವರ್ಷದ ಬೆಳೆಯೇ ನಷ್ಟವಾದಂತೆಯೇ ಲೆಕ್ಕ . ಇದರಿಂದ ರೈತರಿಗೆ ಕೃಷಿ ಸಾಲ ಜೊತೆಗೆ ಆರ್ಥಿಕ ಸಂಕಷ್ಟಕ್ಕೂ ಸಿಲುಕುವಂತಾಗುತ್ತೆ. ಹೀಗಾಗಿ ಪದೇಪದೆ ಬೆಳ ಬಿತ್ತುವ ಬದಲು ಒಮ್ಮೆ ನಾಟಿ ಮಾಡಿ ಹಲವು ವರ್ಷಗಳವರೆಗೆ ಲಾಭ ಪಡೆಯುವ ಬೇರೆ ಯಾವುದಾದರೂ ಬೆಳೆ ಬೆಳೆಯುವುದು ಉತ್ತಮ, ಲಾಭದಾಯ. ನೀವು ಈ ಬಗ್ಗೆ ಯೋಚಿಸುತ್ತಿದ್ದರೆ, ಯಾವ ಕೃಷಿ ಮಾಡಬೇಕು ಅನ್ನೋ ಯೋಚನೆಯಲ್ಲಿದ್ದರೆ ಈ ಲೇಖನ ಪೂರ್ತಿ ಓದಿದರೆ ಒಂದು ನಿರ್ಧಾರಕ್ಕೆ ಬರುತ್ತೀರಿ.
ಸಪೋಟಾ ಬೆಳೆಯಿರಿ, ಯಾಕೆ ಗೊತ್ತಾ?
ವರ್ಷಕ್ಕೊಮ್ಮೆ ನಿಯಮಿತ ಆದಾಯ ಬರಬೇಕೆಂದರೆ, ಸಪೋಟಾ ಬೆಳೆಯಿರಿ. ಸಪೋಟಾ ಪದೇಪದೆ ಬೆಳೆಯಬೇಕಿಲ್ಲ. ಸಂಪ್ರಾದಾಯಿಕ ಬೆಳೆಗಳಿಗೆ ಹೋಲಿಸಿದರೆ ಇದರಲ್ಲಿ ಲಾಭ ಹೆಚ್ಚು ಹೀಗಾಗಿ ನಮ್ಮ ದೇಶದ ರೈತರು ಸಂಪ್ರಾದಾಯಿಕ ಕೃಷಿಯಿಂದ ತೋಟಗಾರಿಕೆ ಕೃಷಿಯತ್ತ ಆಸಕ್ತಿವಹಿಸಿದ್ದಾರೆ. ಕರ್ನಾಟಕ ಸೇರಿ ಅನೇಕ ಪ್ರದೇಶಗಳಲ್ಲಿ ಸಪೋಟಾ ಬೆಳೆದು ಸಿಕ್ಕಾಪಟ್ಟೆ ಲಾಭ ಗಳಿಸುತ್ತಿದ್ದಾರೆ. ಅವರಿಗೆ ಬರಗಾಲ, ನಷ್ಟ ಎಂಬುದೇ ಇಲ್ಲ. ಏಕೆಂದರೆ ಇದು ಇತರ ಬೆಳೆಗಳಿಗಿಂತ ಹೆಚ್ಚಿನ ಲಾಭವನ್ನು ನೀಡುತ್ತದೆ. ಸಪೋಟಾ ವರ್ಷಪೂರ್ತಿ ಬೇಡಿಕೆಯಲ್ಲಿರುವ ನಿತ್ಯಹರಿದ್ವರ್ಣ ಹಣ್ಣು ಎಂಬುದು ಗೊತ್ತೇ?
ಸಂಪ್ರಾದಾಯಿಕ ಬೆಳೆಗಳಿಗೆ ಹೋಲಿಸಿದರೆ ಸಪೋಟಾ ಗಿಡಗಳಿಗೆ ಹೆಚ್ಚಿನ ಆರೈಕೆ ಬೇಕಿಲ್ಲ. ಒಮ್ಮೆ ಬೆಳೆದ ನಂತರ ಹಲವು ವರ್ಷಗಳವರೆಗೆ ನಿರಂತರವಾಗಿ ಇಳುವರಿ ಕೊಡುವುದರಿಂದ ವರ್ಷಪೂರ್ತಿ ಲಾಭವೇ. ಇದಕ್ಕಾಗಿ ಹತ್ತಾರು ಎಕರೆ ಹೊಲ ಇರಬೇಕೆಂದೇನೂ ಇಲ್ಲ, ನಿಮ್ಮ ಬಳಿ ಒಂದು ಎಕರೆ ಇದ್ದರೂ ಬೆಳೆಯಬಹುದು. ಹಾಗಾದರೆ ಒಂದು ಎಕರೆಯಲ್ಲಿ ಸಪೋಟಾ ಬೆಳೆದರೆ ಎಷ್ಟು ಖರ್ಚು ಬರಬಹುದು? ಅದರಿಂದ ಬರುವ ಲಾಭವಷ್ಟು? ಸಪೋಟಾ ಕೃಷಿಯ ಸಂಪೂರ್ಣ ಲೆಕ್ಕಾಚಾರ ಕೆಳಗೆ ಕೊಡಲಾಗಿದೆ.
ಸಪೋಟಾ ಬೆಳೆಗೆ ಹೊಲ ಸಿದ್ಧಪಡಿಸುವುದು
ಸಪೋಟಾ ಕೃಷಿಯಿಂದ ಉತ್ತಮ ಲಾಭ ಗಳಿಸಲು ಗಿಡಗಳನ್ನು ಸರಿಯಾಗಿ ನೆಡುವಿಕೆ ಮತ್ತು ಅದಕ್ಕೂ ಮುನ್ನ ಹೊಲ ಸಿದ್ಧಪಡಿಸುವುದಿಕೆ ಬಹಳ ಮುಖ್ಯ. ಒಂದು ಎಕರೆ ಭೂಮಿ ಇದ್ದರೆ ಪ್ರತಿ ಮರವು ಸಾಕಷ್ಟು ಸೂರ್ಯನ ಬೆಳಕು, ಜಾಗವನ್ನು ಪಡೆಯುವ ರೀತಿಯಲ್ಲಿ ನಾಟಿ ಮಾಡಬೇಕು. ರೈತರು ಸಾಮಾನ್ಯವಾಗಿ ಒಂದು ಎಕರೆಯಲ್ಲಿ ನೂರರಿಂದ ನೂರ ಇಪ್ಪತ್ತು ಗಿಡ ನೆಡುತ್ತಾರೆ.
ತೋಟಗಾರಿಕೆ ಇಲಾಖೆಯಿಂದ ಅಥವಾ ಯಾವುದೇ ಪ್ರಾಮಾಣಿಕೃತ ನರ್ಸರಿಯಿಂದಲೂ ಉತ್ತಮ ಗುಣಮಟ್ಟದ ಸಪೋಟಾ ಸಸ್ಯಗಳನ್ನ ಖರೀದಿಸಬಹುದು. ಬಳಿಕ ಹೊಲವನ್ನು ಚೆನ್ನಾಗಿ ಉಳುಮೆ ಮಾಡಿ ಹಸುವಿನ ಸೆಗಣಿಯ ಗೊಬ್ಬರ, ಫಲವತ್ತಾದ ಮಣ್ಣು ಇದ್ದರೆ ಬೆಳೆ ಬೇಗ ಬೆಳೆಯುತ್ತದೆ. ಆರಂಭಿಕ ದಿನಗಳಲ್ಲಿ ಬೇರುಗಳು ಬಲಗೊಳ್ಳಲು ಇದು ಸಹಾಯಕ.
ಸಪೋಟಾ ಬೆಳೆಗೆ ಎಷ್ಟು ಖರ್ಚಾಗುತ್ತೆ?
ಸಪೋಟಾ ಬೆಳೆಯುವ ಆರಂಭದಲ್ಲಿ ಗಿಡಗಳನ್ನು ಬೆಳೆಸಲು ಸಮಯ ತೆಗೆದುಕೊಳ್ಳುತ್ತದೆ. ನಾಟಿ ಮಾಡಿದ ಮೂರುನಾಲ್ಕು ತಿಂಗಳಲ್ಲಿ ಫಲ ನೀಡುವುದಿಲ್ಲ. ಹೀಗಾಗಿ ಕಾಯುವ ತಾಳ್ಮೆ ಮುಖ್ಯ. ನೆಟ್ಟ ಸಸಿಗಳು ಮರವಾಗಲು ಫಲ ಕೊಡಲು ಮೂರರಿಂದ ನಾಲ್ಕು ವರ್ಷಗಳಾದರೂ ಬೇಕಾಗುತ್ತೆ. ಸರಿಯಾದ ವಿಧಾನದಲ್ಲಿ ಬೆಳೆದರೆ ಬೇಗನೇ ಫಲ ಕೊಡಲು ಆರಂಭಿಸಬಹುದು. ಆರಂಭಿಕ ವರ್ಷಗಳಲ್ಲಿ ಇಳುವರಿ ಸಾಧಾರಣವಾಗಿದ್ದರೂ, ಮರಗಳು ಬೆಳೆದಂತೆ, ಹಣ್ಣುಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತೆ.
ಒಂದು ಎಕರೆ ಸಪೋಟಾ ಬೆಳೆಯಲು 40,000 ರಿಂದ 50,000 ಖರ್ಚಾಗುತ್ತೆ
ಒಂದು ಎಕರೆ ಹಣ್ಣಿನ ತೋಟವನ್ನು ಅಭಿವೃದ್ಧಿಪಡಿಸಲು ಸುಮಾರು 40,000 ರಿಂದ 50,000 ರೂಪಾಯಿಗಳ ಖರ್ಚು ಬರುತ್ತೆ, ಇದರಲ್ಲಿ ಸಸ್ಯಗಳ ಖರೀದಿ, ಹನಿ ನೀರಾವರಿ ವ್ಯವಸ್ಥೆ, ರಸಗೊಬ್ಬರಗಳು ಮತ್ತು ಆರಂಭಿಕ ಕಾರ್ಮಿಕರ ವೆಚ್ಚವೂ ಸೇರಿದೆ. ಇದಲ್ಲದೆ, ಸಸ್ಯಗಳ ನಡುವಿನ ಸ್ಥಳಗಳಲ್ಲಿ ಆಯಾ ಕಾಲಕ್ಕೆ ತಕ್ಕ ತರಕಾರಿಗಳನ್ನು ಬೆಳೆಯುವ ಮೂಲಕ ನೀವು ಸಪೋಟಾ ಬೆಳೆ ಕೈಗೆ ಬರುವವರೆಗೆ ಸ್ವಲ್ಪ ಆದಾಯವನ್ನು ಗಳಿಸಬಹುದು. ಇದು ನಿಮ್ಮ ಖರ್ಚುಗಳಿಗೆ ಸಹಾಯಕ್ಕೆ ಬರುತ್ತೆ.
ಸಪೋಟಾದಿಂದ ಆದಾಯ ಎಷ್ಟು?
ಸಪೋಟಾ ಕೃಷಿಯಿಂದ ಎಷ್ಟು ಆದಾಯ ಗಳಿಸಬಹುದು? ಅದರಿಂದ ಎಷ್ಟು ಲಾಭ ಗಳಿಸಬಹುದು? ಈ ಲೆಕ್ಕಾಚಾರ ತಿಳಿಯಲು ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಒಂದು ಸಪೋಟಾ ಮರವು ಸಂಪೂರ್ಣವಾಗಿ ಬೆಳೆದಾಗ, ಒಂದು ಮರವು ವಾರ್ಷಿಕವಾಗಿ ಕ್ವಿಂಟಾಲ್ ಹಣ್ಣುಗಳನ್ನು ನೀಡುತ್ತದೆ. ಸರಾಸರಿ, ಒಂದು ಎಕರೆಯಲ್ಲಿ ನೆಟ್ಟ ಎಲ್ಲಾ ಮರಗಳಿಂದ ಹಲವಾರು ಟನ್ ಸಪೋಟಾವನ್ನು ಸುಲಭವಾಗಿ ಕೈಗೆ ಬರುತ್ತೆ. ಸ್ಥಳೀಯ ಮಾರುಕಟ್ಟೆಯಲ್ಲಿ ಅಥವಾ ಸಗಟು ಬೆಲೆಯಲ್ಲಿ ಸಪೋಟಾದ ಬೆಲೆ ಕೆಜಿಗೆ 20 ರಿಂದ 30 ರೂಪಾಯಿಗಳಾಗಿದ್ದರೂ ಸಹ, ಅದು ಇನ್ನೂ ಒಳ್ಳೆಯದು.
ಪ್ರತಿ ವರ್ಷಕ್ಕೆ ಮೂರು ನಾಲ್ಕು ಆದಾಯ!
ಹಾಗಾಗಿ, ರೈತರು ವರ್ಷಕ್ಕೆ ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು. ವಾರ್ಷಿಕ ವೆಚ್ಚಗಳನ್ನು ಕಳೆದರೂ ಸಹ, ಲಾಭವು ಇನ್ನೂ ಎಕರೆಗೆ ಎರಡರಿಂದ ಎರಡೂವರೆ ಲಕ್ಷ ರೂಪಾಯಿಗಳಲ್ಲಿಯೇ ಇರುತ್ತದೆ. ಆದಾಗ್ಯೂ, ಲಾಭ ಮತ್ತು ಆದಾಯದ ಅಂಕಿಅಂಶಗಳು ಮಾರುಕಟ್ಟೆ ಬೆಲೆಗಳನ್ನು ಅವಲಂಬಿಸಿ ಬದಲಾಗಬಹುದು, ಆದ್ದರಿಂದ ಈ ಅಂಕಿಅಂಶಗಳು ಅಂತಿಮವೆಂದು ಭಾವಿಸಬೇಡಿ.
ಸಪೋಟಾ ಕೃಷಿ ಪ್ರಾರಂಭಿಸಿ. ಮೊದಲು, ನಿಮ್ಮ ಜಿಲ್ಲೆಯಲ್ಲಿ ಅದರ ಬೇಡಿಕೆ ಮತ್ತು ಬೆಲೆ ಹೇಗಿದೆ ಎಂಬುದು ತಿಳಿದು ಕೃಷಿಯಲ್ಲಿ ಮುಂದುವರಿಯಿರಿ.


