ಸಾಮಾನ್ಯವಾಗಿ ಶಿಕ್ಷಕರು ಬೆಳಗ್ಗೆ ಬೈಕ್, ಕಾರು ಅಥವಾ ಬಸ್‌ನಲ್ಲಿ ಶಾಲೆಗೆ ತೆರಳುತ್ತಾರೆ. ಆದರೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಈ ಶಿಕ್ಷಕರ ಕಥೆಯೇ ವಿಭಿನ್ನ. 55 ವರ್ಷದ ಜೀವನ್ ಮಿಥಾರಿ ಅವರು ಪ್ರತಿದಿನ ಬರೋಬ್ಬರಿ 5 ಕಿಲೋಮೀಟರ್ ದಟ್ಟ ಕಾಡಿನೊಳಗೆ ನಡೆದು ಶಾಲೆಗೆ ತೆರಳುತ್ತಾರೆ.
ಸಾಮಾನ್ಯವಾಗಿ ಶಿಕ್ಷಕರು ಬೆಳಗ್ಗೆ ಬೈಕ್, ಕಾರು ಅಥವಾ ಬಸ್‌ನಲ್ಲಿ ಶಾಲೆಗೆ ತೆರಳುತ್ತಾರೆ. ಆದರೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಈ ಶಿಕ್ಷಕರ ಕಥೆಯೇ ವಿಭಿನ್ನ. 55 ವರ್ಷದ ಜೀವನ್ ಮಿಥಾರಿ ಅವರು ಪ್ರತಿದಿನ ಬರೋಬ್ಬರಿ 5 ಕಿಲೋಮೀಟರ್ ದಟ್ಟ ಕಾಡಿನೊಳಗೆ ನಡೆದು ಶಾಲೆಗೆ ತೆರಳುತ್ತಾರೆ. ಅದೂ ಒಬ್ಬ ವಿದ್ಯಾರ್ಥಿಗೆ ಪಾಠ ಮಾಡಲು. ಕೊಲ್ಹಾಪುರ ಜಿಲ್ಲೆಯ ಗಗನಬಾವಡಾ ತಾಲೂಕಿನಲ್ಲಿ ಮಹಾರಾಷ್ಟ್ರ–ಸಿಂಧುದುರ್ಗ ಗಡಿಯ ಸಮೀಪವಿರುವ ಕಾವಲ್ಟೇಕ್ ಧನಗರ್ವಾಡಾ ಎಂಬ ಕುಗ್ರಾಮದಲ್ಲಿ ಜಿಲ್ಲಾ ಪರಿಷತ್ ಶಾಲೆ ಇದೆ. ಈ ಶಾಲೆಗೆ ರಸ್ತೆ ಸಂಪರ್ಕವೇ ಇಲ್ಲ. ವಾಹನ ಹೋಗಬಹುದಾದ ಸ್ಥಳದಿಂದ ಶಾಲೆ ಸುಮಾರು 2.5 ಕಿ.ಮೀ ದೂರದಲ್ಲಿದೆ. ಹೀಗಾಗಿ ಶಿಕ್ಷಕ ಜೀವನ್ ಮಿಥಾರಿ ಪ್ರತಿದಿನ ಕಾಡಿನ ಹಾದಿಯಲ್ಲೇ ನಡೆದು ಶಾಲೆ ತಲುಪುತ್ತಾರೆ.
13 ವರ್ಷಗಳಿಂದ ಇದೇ ದಿನಚರಿ
ಜೀವನ್ ಮಿಥಾರಿ ಅವರು 2013ರ ಜುಲೈ 26ರಂದು ಈ ಶಾಲೆಗೆ ಸೇರಿದ್ದಾರೆ. ವಿಶೇಷವೆಂದರೆ, ಕಷ್ಟಕರವಾದ ಈ ಸ್ಥಳಕ್ಕೆ ಅವರನ್ನು ವರ್ಗಾವಣೆ ಮಾಡಿರಲಿಲ್ಲ. ಬದಲಾಗಿ, ಅವರೇ ಸ್ವಯಂಪ್ರೇರಣೆಯಿಂದ ಈ ಶಾಲೆಗೆ ವರ್ಗಾವಣೆ ಕೇಳಿಕೊಂಡಿದ್ದರು. ಆ ಸಮಯದಲ್ಲಿ ಅವರು ಕೊಲ್ಹಾಪುರ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು. ಹಿರಿಯ ಅಥವಾ ಪ್ರಭಾವಿ ಶಿಕ್ಷಕರು ಸಾಮಾನ್ಯವಾಗಿ ಕಷ್ಟಕರ ಪ್ರದೇಶಗಳಲ್ಲಿನ ಹುದ್ದೆಗಳನ್ನು ತಪ್ಪಿಸಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಅಭಿಪ್ರಾಯವನ್ನು ಬದಲಿಸಬೇಕು ಎಂಬ ಕಾರಣದಿಂದಲೇ ತಾವೇ ಈ ದೂರದ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಮಿಥಾರಿ ಹೇಳಿದ್ದಾರೆ.
ಒಂದು ಕಾಲದಲ್ಲಿ 70-100 ಕುಟುಂಬಗಳಿದ್ದ ಗ್ರಾಮ
ಒಂದು ಕಾಲದಲ್ಲಿ ಕಾವಲ್ಟೇಕ್ ಧನಗರ್ವಾಡಾದಲ್ಲಿ ಸುಮಾರು 70ರಿಂದ 100 ಕುಟುಂಬಗಳು ವಾಸಿಸುತ್ತಿದ್ದವು. ಆದರೆ ವರ್ಷಗಳು ಕಳೆದಂತೆ ಉದ್ಯೋಗ ಹಾಗೂ ಇತರ ಕಾರಣಗಳಿಂದ ಜನರು ಬೇರೆಡೆಗೆ ವಲಸೆ ಹೋಗಿದ್ದಾರೆ. ಇದರಿಂದ ಗ್ರಾಮದ ಜನಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದೀಗ ಶಾಲೆಯಲ್ಲಿ ಅಧಿಕೃತವಾಗಿ 3ನೇ ತರಗತಿಯ ಒಬ್ಬ ವಿದ್ಯಾರ್ಥಿನಿ ಸ್ವರಾ ಬೋಡಕೆ ಮಾತ್ರ ದಾಖಲಾಗಿದ್ದಾಳೆ. ಆಕೆಯ ತಂಗಿಯೂ ಶಾಲೆಗೆ ಅನೌಪಚಾರಿಕವಾಗಿ ತರಗತಿಗಳಿಗೆ ಹಾಜರಾಗುತ್ತಾಳೆ. ಗ್ರಾಮದಲ್ಲಿ ಅಂಗನವಾಡಿ ಇಲ್ಲದಿರುವುದರಿಂದ ಆಕೆಯ ಶಿಕ್ಷಣಕ್ಕೂ ಇದೇ ಶಾಲೆ ಆಸರೆಯಾಗಿದೆ.
ಕಾಡಿನಲ್ಲಿ ಗೌರ್, ಚಿರತೆಗಳ ಭಯ!
ಶಾಲೆಗೆ ತೆರಳುವ ಮಿಥಾರಿ ಅವರ ದಾರಿ ಸಾಮಾನ್ಯ ರಸ್ತೆಯಲ್ಲ. ದಟ್ಟ ಅರಣ್ಯದ ಮಧ್ಯೆ ಸಾಗುವ ಈ ಹಾದಿಯಲ್ಲಿ ಗೌರ್, ಚಿರತೆ ಸೇರಿದಂತೆ ವಿವಿಧ ಕಾಡುಪ್ರಾಣಿಗಳ ಓಡಾಟ ಇರುತ್ತದೆ. ಗೌರ್‌ಗಳು ಒಂಟಿಯಾಗಿ ಅಥವಾ ಗುಂಪಾಗಿ ಸಂಚರಿಸುವಾಗ ಹೇಗೆ ವರ್ತಿಸಬೇಕು ಎಂಬುದನ್ನು ಸ್ಥಳೀಯ ಗ್ರಾಮಸ್ಥರು ಅವರಿಗೆ ತಿಳಿಸಿಕೊಟ್ಟಿದ್ದಾರೆ. ಒಮ್ಮೆ ಗ್ರಾಮದ ಸಮೀಪವೇ ಚಿರತೆಯೊಂದು ಎಳೆಯ ಎತ್ತನ್ನು ಕೊಂದ ಘಟನೆಯೂ ನಡೆದಿತ್ತು. ಬಳಿಕ ಅರಣ್ಯ ಇಲಾಖೆ ಆ ಪ್ರದೇಶದಲ್ಲಿ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿತ್ತು. ಪ್ರಯಾಣದ ಮಧ್ಯೆ ಎಲ್ಲಿಯೂ ನಿಲ್ಲದಂತೆ ಅಧಿಕಾರಿಗಳು ಮಿಥಾರಿ ಅವರಿಗೆ ಸುರಕ್ಷತಾ ಸಲಹೆಯನ್ನೂ ನೀಡಿದ್ದಾರೆ.
“ಭಯವಾಗುತ್ತದೆ, ಆದರೆ ಈಗ ಅಭ್ಯಾಸವಾಗಿದೆ”
ಕಾಡಿನ ಅಪಾಯಕಾರಿ ಹಾದಿಯಲ್ಲಿ ಪ್ರತಿದಿನ ಸಂಚರಿಸುವುದು ಸುಲಭದ ಕೆಲಸವಲ್ಲ. ಈ ಬಗ್ಗೆ ಮಾತನಾಡಿರುವ ಮಿಥಾರಿ, “ನಾನೂ ಮನುಷ್ಯನೇ. ನನಗೂ ಭಯವಾಗುತ್ತದೆ. ಆದರೆ ಕಾಲ ಕಳೆದಂತೆ ಇದು ಅಭ್ಯಾಸವಾಗಿದೆ” ಎಂದು ಹೇಳಿದ್ದಾರೆ. ಇದೀಗ ಪ್ರತಿದಿನದ ಈ ನಡಿಗೆಯೇ ತಮ್ಮ ಜೀವನದ ಭಾಗವಾಗಿದೆ ಎಂದು ಅವರು ಹೇಳುತ್ತಾರೆ. ಜೊತೆಗೆ, ಈ 5 ಕಿ.ಮೀ ನಡಿಗೆ ಪ್ರತಿದಿನದ ವ್ಯಾಯಾಮವಾಗಿಯೂ ಪರಿಣಮಿಸಿದೆ ಎನ್ನುತ್ತಾರೆ.
ಪರ್ಯಾಯ ಶಾಲೆ 5.5 ಕಿ.ಮೀ ದೂರ!
ಗ್ರಾಮದಲ್ಲಿರುವ ಮಕ್ಕಳಿಗೆ ಬೇರೆ ಶಾಲೆಯ ಆಯ್ಕೆಯೂ ಸುಲಭವಲ್ಲ. ಸಮೀಪದ ಪರ್ಯಾಯ ಶಾಲೆ ಧುಂಧವಾಡೆಯಲ್ಲಿ ಸುಮಾರು 5.5 ಕಿ.ಮೀ ದೂರದಲ್ಲಿದೆ. ಅಂದರೆ ಮಕ್ಕಳು ಪ್ರತಿದಿನ ಸುಮಾರು 11 ಕಿ.ಮೀ ಪ್ರಯಾಣಿಸಬೇಕಾಗುತ್ತದೆ. ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಇಷ್ಟು ದೂರ ಪ್ರತಿದಿನ ತೆರಳಿ ಬರುವುದು ಕಷ್ಟ. ಹೀಗಾಗಿ ಗ್ರಾಮದ ಶಾಲೆ ಸದ್ಯ ಒಬ್ಬ ವಿದ್ಯಾರ್ಥಿಗೆ ಮಾತ್ರ ಇದ್ದರೂ, ಅದರ ಅಗತ್ಯ ಇನ್ನೂ ಇದೆ ಎಂಬುದು ಮಿಥಾರಿ ಅವರ ನಿಲುವು.
ವಿದ್ಯುತ್ ಇಲ್ಲದ ಗ್ರಾಮದಲ್ಲಿ ಶಿಕ್ಷಣದ ಬೆಳಕು
ಕಾವಲ್ಟೇಕ್ ಧನಗರ್ವಾಡಾದಲ್ಲಿ ಇಂದಿಗೂ ವಿದ್ಯುತ್ ಸಂಪರ್ಕವಿಲ್ಲ. ಗ್ರಾಮಸ್ಥರು ಮುಖ್ಯವಾಗಿ ಸಣ್ಣ ಪ್ರಮಾಣದ ಕೃಷಿ, ಕಟ್ಟಿಗೆ ಸಂಗ್ರಹ ಹಾಗೂ ನೇರಳೆ (ಜಾಮೂನ್), ಕರವಂದ ಸೇರಿದಂತೆ ಕಾಡಿನ ಉತ್ಪನ್ನಗಳ ಮೇಲೆ ಅವಲಂಬಿತರಾಗಿದ್ದಾರೆ. ಕಾಡುಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಲು ಗ್ರಾಮಸ್ಥರು ಹೊಲಗಳ ಸುತ್ತ ಎರಡು ಹಂತದ ಬೇಲಿಗಳನ್ನು ನಿರ್ಮಿಸಿಕೊಂಡಿದ್ದಾರೆ.
2029ರವರೆಗೆ ಸೇವೆ
ಜೀವನ್ ಮಿಥಾರಿ ಅವರು 2029ರ ಮೇ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಆದರೆ ಅದುವರೆಗೂ ತಮ್ಮ ಕರ್ತವ್ಯವನ್ನು ಇದೇ ರೀತಿಯಲ್ಲಿ ಮುಂದುವರಿಸುವ ಸಂಕಲ್ಪದಲ್ಲಿದ್ದಾರೆ.
ಶಾಲೆಯ ಸುರಕ್ಷತೆಗಾಗಿ ಕಂಪೌಂಡ್ ಗೋಡೆ ಸೇರಿದಂತೆ ಮೂಲಸೌಕರ್ಯಗಳ ಅಗತ್ಯವಿದೆ ಎಂದು ಅವರು ಒತ್ತಾಯಿಸುತ್ತಾರೆ. ಒಬ್ಬ ವಿದ್ಯಾರ್ಥಿಗಾಗಿ ಪ್ರತಿದಿನ 5 ಕಿ.ಮೀ ಕಾಡಿನ ಹಾದಿ ಕ್ರಮಿಸುವುದು ಸಾಮಾನ್ಯ ವಿಷಯವಲ್ಲ. ಆದರೆ ಜೀವನ್ ಮಿಥಾರಿ ಅವರಿಗೆ ಅದು ಕೇವಲ ಕೆಲಸವಲ್ಲ—13 ವರ್ಷಗಳಿಂದ ನಿರಂತರವಾಗಿ ಪಾಲಿಸಿಕೊಂಡು ಬಂದಿರುವ ಕರ್ತವ್ಯ ಮತ್ತು ಮಕ್ಕಳ ಶಿಕ್ಷಣದ ಮೇಲಿನ ಬದ್ಧತೆ.
