ಗಾಳಿಯಾಡಿ ಮೆತ್ತಗಾದ ಬಿಸ್ಕತ್ತುಗಳನ್ನು ಎಸೆಯುವ ಬದಲು, ಪ್ಯಾನ್, ಫ್ರಿಡ್ಜ್, ಅಕ್ಕಿ ಅಥವಾ ಹೇರ್ ಡ್ರೈಯರ್ ಬಳಸಿ ಮತ್ತೆ ಗರಿಗರಿಯಾಗಿಸಬಹುದು. ಅಲ್ಲದೆ, ಗಾಳಿಯಾಡದ ಡಬ್ಬಿಯಲ್ಲಿ ಟಿಶ್ಯೂ ಪೇಪರ್ ಬಳಸಿ ಇಡುವುದರಿಂದ ಬಿಸ್ಕತ್ತುಗಳು ಮೆತ್ತಗಾಗುವುದನ್ನು ತಡೆಯಬಹುದು.
ಮಕ್ಕಳಿದ್ದ ಮನೆಯಲ್ಲಿ ಬಿಸ್ಕತ್ತು ಇರಲೇಬೇಕು. ಆದರಲ್ಲೂ ಭಾರತೀಯರಿಗೆ ಮುಂಜಾನೆ, ಸಂಜೆ ಚಹಾ ಕುಡಿಯುವಾಗ ಪಾರ್ಲೆ ಬಿಸ್ಕತ್ತು ತಿಂದರೇನೇ ಪೂರ್ಣ. ಹೀಗಾಗಿ ಶಾಪಿಂಗ್ ಮಾಡುವಾಗ ಮರೆಯದೇ ಬಿಸ್ಕತ್ತು ಪಾಕೆಟ್‌ಗಳನ್ನು ಖರೀಸಲಾಗುತ್ತೆ. ಮನೆಯಲ್ಲಿ ಬಿಸ್ಕತ್ತು ತಿನ್ನುವಾಗ ದೊಡ್ಡ ಪಾಕೆಟ್ ಓಪನ್ ಮಾಡಲಾಗುತ್ತೆ. ಓಪನ್ ಮಾಡಿದ ನಂತರ ಗರಿ ಗರಿ ಬಿಸ್ಕೆಟ್ ಚಹದೊಂದಿಗೆ ತಿನ್ನಲಾಗುತ್ತೆ. ಮರುದಿನ ಬೆಳಗ್ಗೆ ತಿನ್ನಲು ಪಾಕೆಟ್ ತೆರೆದಾಗ ಬಿಸ್ಕತ್ತು ಮೆತ್ತಗಾಗಿರುತ್ತೆ. ಮೆತ್ತಗಾದ ಬಿಸ್ಕತ್ತು ತಿನ್ನಲು ರುಚಿ ಎನಿಸದೆ ಮಕ್ಕಳು ಮೆತ್ತನೆ ಬಿಸ್ಕತ್ತು ಕೊಟ್ಟಾಗ ತಿನ್ನದಿರುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಮೆತ್ತಾಗದ ಬಿಸ್ಕತ್ತುಗಳನ್ನು ಯಾರೂ ತಿನ್ನದೇ ಹಾಗೆ ಉಳಿದು ವೇಸ್ಟ್ ಎಂದು ಬಹಳಷ್ಟು ಪೋಷಕರು ಎಸೆದುಬಿಡ್ತಾರೆ.
ಬಿಸ್ಕತ್ತು ಮೆತ್ತಗಾಗುವುದೇಕೆ? ಮೆತ್ತಗಾದ ಬಿಸ್ಕತ್ತು ಮತ್ತೆ ಗರಿಗರಿಯಾಗುವಂತೆ ಮಾಡುವುದು ಹೇಗೆ? ಈ ಐಡಿಯಾ ತಿಳಿದರೆ ನೀವು ಮೆತ್ತಗಾದ ಬಿಸ್ಕತ್ತು ಎಸೆಯುವುದು ತಪ್ಪಬಹುದು. ಗರಿಗರಿಯಾಗಿಸುವುದು ಹೇಗೆ ಅನ್ನೋದು ಇಲ್ಲಿ ತಿಳಿಸಲಾಗಿದೆ.
ಬಿಸ್ಕತ್ತು ಮೆತ್ತಗಾದರೆ ಏನು ಮಾಡಬೇಕು?
ಸಾಮಾನ್ಯವಾಗಿ ಬಿಸ್ಕತ್ತು ಪಾಕೆಟ್ ಓಪನ್ ಮಾಡಿದಾಗ ಪಾಕೆಟ್ ಒಳಗಡೆ ಗಾಳಿ ಹೋಗುತ್ತದೆ. ಬಿಸ್ಕತ್ತು ಗಾಳಿಯ ಸಂಪರ್ಕಕ್ಕೆ ಬಂದು ಮೆತ್ತಗಾಗುತ್ತೆ. ಹೀಗೆ ಬಿಸ್ಕತ್ತುಗಳನ್ನು ಎಸೆಯುವ ಬದಲು ಮೈಕ್ರೋವೇವ್, ಪ್ಯಾನ್ ಅಥವಾ ಏರ್ ಫ್ರೈಯರ್ ಬಳಸಿ ಒಂದೇ ನಿಮಿಷದಲ್ಲಿ ಅವುಗಳನ್ನು ಗರಿಗರಿಯಾಗಿ ಮಾಡಬಹುದು. ಈ ಸುಲಭವಾದ ಅಡುಗೆಮನೆ ತಂತ್ರಗಳನ್ನು ತಿಳಿದುಕೊಳ್ಳಿ.
ಮೆತ್ತಗಾದ ಬಿಸ್ಕತ್ತು ಗರಿಗರಿಯಾಗಿಸಲು ಹೀಗೆ ಮಾಡಿ
ನಿಮ್ಮ ಮನೆಯಲ್ಲಿ ಮೈಕ್ರೋವೇವ್ ಇಲ್ಲದಿದ್ದರೆ ನೀವು ಗ್ಯಾಸ್ ಸ್ಟೌವ್ ಬಳಸಬಹುದು. ಮೊದಲಿಗೆ ಒಲೆಯ ಮೇಲೆ ದಪ್ಪ ತಳವಿರುವ ಪ್ಯಾನ್ ಅಥವಾ ನಾನ್-ಸ್ಟಿಕ್ ಬಾಣಲೆಯನ್ನು ಇರಿಸಿ. ಈಗ ಕಡಿಮೆ ಉರಿಯ ಮೇಲೆ ಬಾಣಲೆ ಬಿಸಿ ಮಾಡಿ. ಬಿಸ್ಕತ್ತುಗಳನ್ನು ನೇರವಾಗಿ ಪ್ಯಾನ್ ಅಥವಾ ಬಾಣಲೆಯ ಮೇಲೆ ಇರಿಸಿ. ಕಡಿಮೆ ಉರಿಯಲ್ಲಿ ಇರಿಸಿ, ಇಲ್ಲದಿದ್ದರೆ ಬಿಸ್ಕತ್ತುಗಳು ಕೆಳಭಾಗದಲ್ಲಿ ಉರಿದು ಕಪ್ಪಾಗಬಹುದು. ಬಿಸ್ಕತ್ತುಗಳನ್ನು ಆಗಾಗ ತಿರುಗಿಸಿ ಎರಡೂ ಬದಿಗಳಲ್ಲಿ ಬಿಸಿಯಾಗುತ್ತೆ. ಇದೇ ರೀತಿ 1-2 ನಿಮಿಷಗಳ ಕಾಲ ಹುರಿಯಿರಿ, ನಂತರ ಉರಿಯನ್ನು ಆಫ್ ಮಾಡಿ. ಅವು ತಣ್ಣಗಾದ ನಂತರ ಮತ್ತೆ ಗರಿಗರಿಯಾಗುತ್ತವೆ.
ಮೆತ್ತಗಾದ ಬಿಸ್ಕತ್ತು ಬಿಸಿ ಮಾಡದೆಯೇ ಗರಿಗರಿಯಾಗಿಸುವುದು ಹೇಗೆ?
ಇನ್ನೊಂದು ಟ್ರಿಕ್ಸ್ ಇದೆ. ನಿಮಗಿದು ವಿಚಿತ್ರವೆನಿಸಬಹುದು, ಅರೇ.. ಇದು ನಮಗೆ ಹೊಳೆಯಲೇ ಇಲ್ವಲ್ಲ ಅಂತಾ ಅನಿಸಬಹುದು. ಆದರೆ ಇದು ತುಂಬಾ ಪರಿಣಾಮಕಾರಿ. ರೆಫ್ರಿಜರೇಟರ್ ತುಂಬಾ ಒಣಗಿರುತ್ತದೆ, ತೇವಾಂಶವನ್ನು ಹೀರಿಕೊಳ್ಳುತ್ತದೆ. ಸೀಲ್ ಮಾಡಿದ ಬಿಸ್ಕತ್ತುಗಳನ್ನು ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ನಂತರ ಅವುಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ಅಥವಾ ಜಿಪ್-ಲಾಕ್ ಬ್ಯಾಗ್‌ನಲ್ಲಿ ಇರಿಸಿ ನಂತರ ಫ್ರೀಜರ್‌ನಲ್ಲಿ 1 ರಿಂದ 2 ಗಂಟೆಗಳ ಕಾಲ ಇರಿಸಿ. ರೆಫ್ರಿಜರೇಟರ್‌ನ ಶೀತವು ಯಾವುದೇ ತೇವಾಂಶವನ್ನು ಹೀರಿಕೊಳ್ಳುತ್ತದೆ. ಮೆತ್ತಗಾದ ಬಿಸ್ಕತ್ತುಗಳನ್ನು ಬಿಸಿ ಮಾಡದೆಯೇ ಮತ್ತೆ ಗರಿಗರಿಯಾಗುತ್ತವೆ
ಬಿಸ್ಕತ್ತುಗಳನ್ನು ಮತ್ತೆ ಬಿಸಿ ಮಾಡಲು ಇಷ್ಟವಿಲ್ಲದಿದ್ರೆ ಇನ್ನೊಂದು ಟ್ರಿಕ್ಸ್ ಇದೆ. ನೀವು ಈ ಮನೆಮದ್ದನ್ನು ಪ್ರಯತ್ನಿಸಿ ನೋಡಿ. ಒಂದು ಗಾಜು ಅಥವಾ ಪ್ಲಾಸ್ಟಿಕ್ ಗಾಳಿಯಾಡದ ಡಬ್ಬಿ ತೆಗೆದುಕೊಂಡು ಕೆಳಭಾಗದಲ್ಲಿ 1 ರಿಂದ 2 ಚಮಚ ಅಕ್ಕಿಯನ್ನು ಹಾಕಿ. ಅದರ ಮೇಲೆ ಟಿಶೂ ಪೇಪರ್ ಇರಿಸಿ ನಂತರ ಮುಚ್ಚಿದ ಬಿಸ್ಕತ್ತುಗಳನ್ನು ಅದರಲ್ಲಿ ಇರಿಸಿ. ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ. ಅಕ್ಕಿ ನೈಸರ್ಗಿಕವಾಗಿ ತೇವಾಂಶ ಹೀರಿಕೊಳ್ಳುವ ಗುಣ ಹೊಂದಿದೆ. ಇದು ರಾತ್ರಿಯಿಡೀ ಬಿಸ್ಕತ್ತುಗಳಿಂದ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ. ಬೆಳಗ್ಗೆ ತೆರೆದರೆ ಮೆತ್ತಗಾದ ಬಿಸ್ಕತ್ತು ಮತ್ತೆ ಗರಿಗರಿಯಾಗಿರುತ್ತವೆ.
ಹೇರ್ ಡ್ರೈಯರ್ ಬಳಸಿಯೂ ಬಿಸ್ಕತ್ತು ಗರಿಗರಿಯಾಗಿಸಬಹುದು
ಮೆತ್ತಾಗದ ಬಿಸ್ಕತ್ತುಗಳನ್ನು ಗರಿಗರಿಯಾಗಿಸಲು ನೀವು ಹೇರ್ ಡ್ರೈಯರ್ ಅನ್ನು ಸಹ ಬಳಸಬಹುದು. ಬಿಸ್ಕತ್ತುಗಳನ್ನು ಸ್ವಚ್ಛವಾದ ತಟ್ಟೆಯಲ್ಲಿ ಹರಡಿ. ಹೇರ್ ಡ್ರೈಯರ್ ಅನ್ನು ಬಿಸಿ ಗಾಳಿಯ ಮೋಡ್‌ಗೆ ಹೊಂದಿಸಿ ಮತ್ತು 1 ರಿಂದ 2 ನಿಮಿಷಗಳ ಕಾಲ ಬಿಸ್ಕತ್ತುಗಳ ಮೇಲೆ ಬಿಸಿ ಗಾಳಿ ಬಿಡಿ. ಬಿಸಿ ಗಾಳಿಯು ತಗುಲಿದಂತೆ ಬಿಸ್ಕತ್ತಿನಲ್ಲಿ ತೇವಾಂಶ ತಕ್ಷಣ ಆವಿಯಾಗುತ್ತದೆ. ಸ್ವಲ್ಪ ಸಮಯದವರೆಗೆ ಬಿಟ್ಟರೆ ಮತ್ತೆ ಗರಿಗರಿಯಾಗಿರುತ್ತದೆ.
ಬಿಸ್ಕತ್ತುಗಳು ಮೆತ್ತಗಾಗುವುದಕ್ಕೆ ತಡೆಯಲು, ನೀವು ಪ್ಯಾಕೇಜ್ ತೆರೆದ ನಂತರ ಅವುಗಳನ್ನು ತಕ್ಷಣ ಸ್ವಚ್ಛ ಮತ್ತು ಸಂಪೂರ್ಣವಾಗಿ ಒಣಗಿದ ಗಾಜಿನ ಡಬ್ಬಿಯಲ್ಲಿ ಹಾಕಿಟ್ಟರೆ ತೇವಗೊಳ್ಳುವುದಿಲ್ಲ. ಗಾಜಿನ ಡಬ್ಬಿಯೊಳಗೆ ಬಿಸ್ಕತ್ತು ಹಾಕುವ ಮುನ್ನ ಕೆಳಗೆ ಟಿಶೂ ಪೇಪರ್ ಇರಿಸಿ. ಇದು ಪಾತ್ರೆಯೊಳಗೆ ತೇವಾಂಶ ಬರುವುದು ತಡೆಯುತ್ತದೆ. ಇನ್ನೊಂದು ಗಮನಿಸಿ; ತಿಂಡಿಗಳು ಬಿಸ್ಕತ್ತುಗಳನ್ನು ಎಂದಿಗೂ ಒಂದೇ ಪಾತ್ರೆಯಲ್ಲಿ ಒಟ್ಟಿಗೆ ಸೇರಿಸಬೇಡಿ ಏಕೆಂದರೆ ಎರಡೂ ಬೇಗನೆ ಹಾಳಾಗಬಹುದು.


