- Home
- Business
- ಚಿಪ್ಸ್, ಬಿಸ್ಕತ್ತು, ಲಿಪ್‌ಸ್ಟಿಕ್ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ? ಭಾರತದ ಮುಂದೆ ಮತ್ತೊಂದು ಸಂಕಷ್ಟ
ಚಿಪ್ಸ್, ಬಿಸ್ಕತ್ತು, ಲಿಪ್‌ಸ್ಟಿಕ್ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ? ಭಾರತದ ಮುಂದೆ ಮತ್ತೊಂದು ಸಂಕಷ್ಟ
ಇಂಡೋನೇಷ್ಯಾ ರಫ್ತು ನೀತಿಯನ್ನು ಬದಲಾಯಿಸುತ್ತಿರುವುದರಿಂದ ಭಾರತದಲ್ಲಿ ಅಡುಗೆ ಎಣ್ಣೆಯಿಂದ ಹಿಡಿದು ಸೋಪು, ಶಾಂಪೂ, ಬಿಸ್ಕತ್ತುಗಳಂತಹ ಅನೇಕ ದೈನಂದಿನ ಬಳಕೆಯ ವಸ್ತುಗಳ ಬೆಲೆ ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆಯಿದೆ.

ಬೆಲೆ ಏರಿಕೆಯ ಹೊಡೆತ
ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಯುದ್ಧ ಸಾರಿದ್ದರಿಂದ ವಿಶ್ವದ ಹಲವು ರಾಷ್ಟ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಭಾರದಲ್ಲಂತೂ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯುಂಟಾಗಿದ್ದು, ಹಾಗೆಯೇ ವಿವಿಧ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ ಭಾರತವು ಈಗಾಗಲೇ ಕಚ್ಚಾ ತೈಲ ಪೂರೈಕೆಯ ಕೊರತೆಯನ್ನು ಎದುರಿಸುತ್ತಿದೆ. ಈ ಬೆನ್ನಲ್ಲೇ ಭಾರತೀಯರ ಮೇಲೆ ಮತ್ತೊಂದು ಬೆಲೆ ಏರಿಕೆ ಹೊಡೆತ ಬೀಳಲಿದೆ.
ಪಾಮ್ ಆಯಿಲ್ ಬಿಕ್ಕಟ್ಟು
ಇದೀಗ ದೇಶದಲ್ಲಿ ಪಾಮ್ ಆಯಿಲ್ ಬಿಕ್ಕಟ್ಟು ಎದುರಾಗಿದ್ದು, ಮುಂದಿನ ದಿನಗಳಲ್ಲಿ ಹಲವು ಉತ್ಪನ್ನಗಳ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ. ಭಾರತವು ವಿಶ್ವದ ಅತಿದೊಡ್ಡ ಪಾಮ್ ಆಯಿಲ್ ಆಮದು ಮಾಡಿಕೊಳ್ಳುವ ದೇಶವಾಗಿದೆ. ಭಾರತ ವಾರ್ಷಿಕವಾಗಿ ಸುಮಾರು 9.5 ಮಿಲಿಯನ್ ಟನ್ ಪಾಮ್ ಎಣ್ಣೆ ಬಳಕೆ ಮಾಡುತ್ತದೆ. ಆದ್ರೆ ನಮ್ಮ ದೇಶಿಯ ಉತ್ಪಾದನೆ ಪ್ರಮಾಣ 400,000 ಟನ್‌ಗಳಿಗಿಂತ ಕಡಿಮೆಯಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಆಮದು ಪ್ರಮಾಣ ಸಹ ಹೆಚ್ಚಳವಿದೆ.
ತಾಳೆ ಮರ
ತಾಳೆ ಮರಗಳಿಂದ ಪಾಮ್ ಆಯಿಲ್ ಸಿಗುತ್ತದೆ. ಸ್ಥಿರವಾದ ಮಳೆ ಮತ್ತು ಹೇರಳವಾದ ನೀರಿನ ಲಭ್ಯತೆಯಿದ್ರೆ ಮಾತ್ರ ತಾಳೆಮರದಿಂದ ಉತ್ಪನ್ನ ಸಿಗುತ್ತದೆ. ಆಗ್ನೇಯ ಏಷ್ಯಾ ಭಾಗದಿಂದಲೇ ಅತ್ಯಧಿಕವಾಗಿ ಪಾಮ್ ಆಯಿಲ್ ಉತ್ಪಾದನೆಯಾಗುತ್ತಿದ್ದು, ವಿಶ್ವದ ಅರ್ಧ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ಭಾರತ ಅತ್ಯಧಿಕವಾಗಿ ಪಾಮ್ ಆಯಿಲ್‌ನ್ನು ಆಮದು ಮಾಡಿಕೊಳ್ಳುತ್ತದೆ.
ಇಂಡೋನೇಷ್ಯಾದ ಮಹತ್ವದ ನಿರ್ಧಾರ
ಭಾರತ ತನ್ನ ಅಗತ್ಯದ ಶೇ.90ರಷ್ಟು ಪಾಮ್ ಆಯಿಲ್ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಅರ್ಧದಷ್ಟು ತೈಲವನ್ನು ಇಂಡೋನೇಷ್ಯಾದಿಂದಲೇ ಖರೀದಿಸುತ್ತದೆ. ಇಂಡೋನೇಷ್ಯಾ ಪಾಮ್ ಎಣ್ಣೆಯನ್ನು ರಫ್ತು ಮಾಡುವ ಬದಲು ದೇಶೀಯವಾಗಿ ಬಯೋಡೀಸೆಲ್ (B50) ಉತ್ಪಾದಿಸಲು ಬಳಕೆ ಮಾಡಿಕೊಳ್ಳುತ್ತದೆ. ಇಂಡೋನೇಷ್ಯಾದ ಈ ನಿರ್ಧಾರ ಜಾಗತಿಕ ಮಾರುಕಟ್ಟೆಯಲ್ಲಿ ವಾರ್ಷಿಕವಾಗಿ 1.5-2 ಮಿಲಿಯನ್ ಟನ್ ಪಾಮ್ ಎಣ್ಣೆಯ ಕಡಿತಕ್ಕೆ ಕಾರಣವಾಗಲಿದೆ ಎಂದು ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಈ UPI ಯುಗದಲ್ಲೂ ಭಾರತೀಯರು ಹೆಚ್ಚು 'ಕ್ಯಾಶ್' ಇಟ್ಟುಕೊಳ್ಳಲು ಕಾರಣವೇನು? ಈ ಸೀಕ್ರೆಟ್ ರಿವೀಲ್ ಆಯ್ತು!
ಯಾವ ವಸ್ತುಗಳ ಬೆಲೆ ಏರಿಕೆ?
ತಾಳೆಎಣ್ಣೆಯನ್ನು ಅಡುಗೆ, ಅಡುಗೆ ಉತ್ಪನ್ನ, ಲಿಪ್‌ಸ್ಟಿಕ್‌ನಿಂದ ಹಿಡಿದು ಕ್ರೀಮ್‌ಗಳು, ಲೋಷನ್ ಸೋಪುಗಳು ಮತ್ತು ಶಾಂಪೂಗಳಲ್ಲಿ ಬಳಕೆ ಮಾಡಲಾಗುತ್ತದೆ. ಪಾಮ್ ಆಯಿಲ್ ಕೊರತೆಯು ಅನೇಕ ಸರಕುಗಳ ಬೆಲೆಯನ್ನು ಶೇಕಡಾ 5-10 ರಷ್ಟು ಹೆಚ್ಚಿಸುತ್ತದೆ. ಬೇಡಿಕೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಪೂರೈಕೆ ಪ್ರಮಾಣ ಕಡಿಮೆಯಾದ್ರೆ ಸಹಜವಾಗಿಯೇ ಬೆಲೆ ಏರಿಕೆಯಾಗುವ ಸಾಧ್ಯತೆಗಳಿರುತ್ತವೆ.
ಚಿಪ್ಸ್, ಬಿಸ್ಕತ್ತು ಮತ್ತು ಫ್ರೈ ಮಾಡಿರುವ ಆಹಾರಗಳಲ್ಲಿ ಅತ್ಯಧಿಕವಾಗಿ ಪಾಮ್ ಆಯಿಲ್ ಅತ್ಯಧಿಕವಾಗಿ ಬಳಕೆಯಾಗುತ್ತದೆ. ಪಾಮ್ ಎಣ್ಣೆಯ ಕೊರತೆಯು ಪಾರ್ಲೆ ಮತ್ತು ಬ್ರಿಟಾನಿಯಂತಹ ಕಂಪನಿಗಳ ಉತ್ಪನ್ನಗಳನ್ನು ಹೆಚ್ಚು ದುಬಾರಿಯಾಗಿಸಬಹುದು. ಹೆಚ್ಚುತ್ತಿರುವ ವೆಚ್ಚಗಳು HUL ಮತ್ತು ಗೋದ್ರೇಜ್ ಕನ್ಸ್ಯೂಮರ್‌ನಂತಹ ಕಂಪನಿಗಳ ಮೇಲೆ ಒತ್ತಡ ಹೇರಬಹುದು.
ಇದನ್ನೂ ಓದಿ: ಉಳ್ಳವರು ರಾಮೇಶ್ವರಂ ಕೆಫೆಗೆ ಹೋಗುವವರಯ್ಯ, ಈ ಬಿಲ್ ನೋಡಿದ್ರೆ ನಿಮಗೂ ತಲೆ ತಿರುಗುವುದಯ್ಯಾ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

