Soap Bar Storage tips : ಸಾಮಾನ್ಯವಾಗಿ ಸಿಂಕ್ ಬಳಿ ಇಟ್ಟ ಸೋಪ್ ಬಹಳ ದಿನ ಬಾಳಿಕೆ ಬರೋದಿಲ್ಲ. ಕೆಲವೇ ದಿನಗಳಲ್ಲಿ ಸೋಪ್ ಕರಗುತ್ತೆ ಇಲ್ಲ ಮುದ್ದೆಯಾಗುತ್ತೆ. ಅದಕ್ಕೆ ಏನು ಮಾಡ್ಬೇಕು ಗೊತ್ತಾ?
ಕೈ ತೊಳೆದ ನಂತ್ರ ಸೋಪ್ ಒದ್ದೆಯಾದ ಬೇಗ ಕರಗುತ್ತೆ. ಹೊಸ ಸೋಪ್ ಬಳಸದ ಕೆಲವೇ ದಿನಗಳಲ್ಲಿ ಸೋಪ್ ಕರಗಿ ಹಾಳಾಗುತ್ತೆ. ಅನೇಕರು ಇದಕ್ಕೆ ಸೋಪ್ ಗುಣಮಟ್ಟವೇ ಕಾರಣ ಅಂದ್ಕೊಳ್ತಾರೆ. ಆದರೆ ಹಲವು ಬಾರಿ ಸೋಪ್ ಬದಲು ನಾವು ಸೋಪ್ ಇಡುವ ಜಾಗ ಹಾಗೂ ವಿಧಾನವಾಗಿರುತ್ತೆ. ಸಿಂಕ್ನಿಂದ ಬರುವ ನೀರಿನ ಹನಿಗಳು, ನಿರಂತರ ತೇವಾಂಶ ಮತ್ತು ಸರಿಯಾಗಿ ಗಾಳಿ ಬೀಸದಿರುವುದರಿಂದ ಸೋಪ್ ಒಣಗಲು ಸಾಧ್ಯವಾಗುವುದಿಲ್ಲ. ಆದರೆ ಕೆಲವು ಸಣ್ಣ ಅಭ್ಯಾಸಗಳನ್ನು ಬದಲಾಯಿಸಿದರೆ ಸೋಪನ್ನು ಹೆಚ್ಚು ದಿನಗಳವರೆಗೆ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು.
ಸೋಪ್ ಬೇಗ ಕರಗಲು ಕಾರಣವೇನು?
ಸೋಪ್ ಬೇಗ ಮೆತ್ತಗಾಗಲು ಪ್ರಮುಖ ಕಾರಣ ಅದು ನಿರಂತರವಾಗಿ ನೀರಿಗೆ ಸಂಪರ್ಕದಲ್ಲಿರುವುದು. ನೀರು ಸಂಗ್ರಹವಾಗುವ ಸೋಪ್ ಬಾಕ್ಸ್ನಲ್ಲಿ ಸೋಪ್ ಇಟ್ಟರೆ ಅದರ ಕೆಳಭಾಗ ಯಾವಾಗಲೂ ಒದ್ದೆಯಾಗಿರುತ್ತದೆ. ಇದರಿಂದ ಸೋಪ್ ನಿಧಾನವಾಗಿ ಕರಗಿ ಮೆತ್ತಗೆ ಮತ್ತು ಅಂಟು ಅಂಟಾಗುತ್ತದೆ. ಸಿಂಕ್ ಬಳಿ ಇಟ್ಟಿರುವ ಸೋಪಿನ ಮೇಲೆ ನಲ್ಲಿಯಿಂದ ನೀರಿನ ಹನಿ ಬೀಳ್ತಿದ್ದರೆ ಅದು ಕೂಡ ಸೋಪು ಬೇಗ ಕರಗಲು ಕಾರಣವಾಗುತ್ತದೆ. ಬಾತ್ರೂಮ್ ಅಥವಾ ಕಿಚನ್ನಲ್ಲಿ ಹೆಚ್ಚು ತೇವಾಂಶ ಇದ್ದರೂ ಸೋಪ್ ಬೇಗ ಮೆತ್ತಗಾಗಬಹುದು. ಮಳೆಗಾಲದಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ.
ಸೋಪ್ ಬಾಕ್ಸ್ ಹೀಗಿರಲಿ
ಸೋಪ್ ಹೆಚ್ಚು ದಿನಗಳ ಕಾಲ ಬಳಸಬೇಕೆಂದರೆ ಅದರ ಕೆಳಗೆ ನೀರು ನಿಲ್ಲದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ನೀರು ಹೊರಹೋಗಲು ಸಣ್ಣ ರಂಧ್ರಗಳು ಅಥವಾ ಡ್ರೈನೇಜ್ ಇರುವ ಸೋಪ್ ಬಾಕ್ಸ್ ಬಳಸಿ. ಸೋಪ್ ಬಾಕ್ಸ್ನಲ್ಲಿ ನೀರು ಸಂಗ್ರಹವಾಗಿದ್ದರೆ ಅದನ್ನು ಖಾಲಿ ಮಾಡಿ, ಸೋಪನ್ನು ಒಣ ಜಾಗದಲ್ಲಿ ಇಡಿ. ಸೋಪ್ ಬಾಕ್ಸ್ ಅನ್ನು ಆಗಾಗ ಸ್ವಚ್ಛಗೊಳಿಸಿ. ಅದರಲ್ಲಿ ಸಂಗ್ರಹವಾಗುವ ಸೋಪ್ ನ ಅಂಟು ಪದರ ನೀರು ಹೊರಹೋಗುವ ರಂಧ್ರಗಳನ್ನು ಮುಚ್ಚಬಹುದು.
ಇಲ್ಲಿ ಇಡಬೇಡಿ
ಸೋಪನ್ನು ನಲ್ಲಿಗೆ ಬಹಳ ಹತ್ತಿರದಲ್ಲಿ ಇಡಬೇಡಿ. ಕೈ ತೊಳೆಯುವಾಗ ನೀರಿನ ಹನಿಗಳು ನೇರವಾಗಿ ಸೋಪ್ ಮೇಲೆ ಬೀಳುವುದರಿಂದ ಅದರ ಮೇಲ್ಮೈ ಬೇಗ ಮೆತ್ತಗಾಗಬಹುದು. ಬಳಸಿದ ನಂತರ ಸೋಪನ್ನು ಸುಲಭವಾಗಿ ಒಣಗುವಂತಹ ಜಾಗಕ್ಕೆ ವರ್ಗಾಯಿಸಿ. ಸಿಂಕ್ನಿಂದ ಕೆಲವೇ ದೂರದಲ್ಲಿ ಇಟ್ಟು ನೀವು ವ್ಯತ್ಯಾಸ ನೋಡ್ಬಹುದು.
ಸೋಪ್ ಒಣಗಲು ಬಿಡಿ
ಸೋಪ್ ಬಳಸಿದ ನಂತರ ತಕ್ಷಣವೇ ನೀರು ಇರುವ ಜಾಗದಲ್ಲಿ ಇಡುವ ಬದಲು, ಸ್ವಲ್ಪ ಒಣಗಲು ಬಿಡುವುದು ಉತ್ತಮ. ಸೋಪಿನ ಮೇಲೆ ಹೆಚ್ಚು ನೀರು ಇದ್ದರೆ ಅದನ್ನು ನಿಧಾನವಾಗಿ ಕೊಡವಿ, ನಂತರ ಗಾಳಿ ಸರಿಯಾಗಿ ಬೀಸುವ ಸೋಪ್ ಬಾಕ್ಸ್ನಲ್ಲಿ ಇಡಿ. ಸೋಪ್ ಯಾವಾಗಲೂ ಒದ್ದೆಯಾಗಿ ಇರುವ ಬದಲು ಒಣಗಲು ಅವಕಾಶ ನೀಡಿದರೆ ಅದು ಹೆಚ್ಚು ದಿನಗಳವರೆಗೆ ಗಟ್ಟಿಯಾಗಿರುತ್ತದೆ.
ಒಂದಕ್ಕಿಂತ ಹೆಚ್ಚು ಸೋಪ್
ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಸೋಪ್ ಬಳಸುತ್ತಿದ್ದರೆ ಅವುಗಳನ್ನು ಬದಲಾಯಿಸಿಕೊಂಡು ಬಳಸಬಹುದು. ಒಂದು ಸೋಪ್ ನಿರಂತರವಾಗಿ ಒದ್ದೆ ಮಾಡುವ ಬದಲು ಮತ್ತೊಂದು ಸೋಪ್ ಬಳಸಿದರೆ ಮೊದಲ ಸೋಪ್ ಒಣಗಲು ಸಾಕಷ್ಟು ಸಮಯ ಸಿಗುತ್ತದೆ. ಆದರೆ ಬಳಸದ ಸೋಪನ್ನು ಸಿಂಕ್ ಅಥವಾ ಬಾತ್ರೂಮ್ ಬಳಿ ತೆರೆದಿಡುವ ಬದಲು ಒಣ ಮತ್ತು ತಂಪಾದ ಜಾಗದಲ್ಲಿ ಇಡುವುದು ಉತ್ತಮ.
ಬಿಸಿಲು ಮತ್ತು ಶಾಖದಿಂದ ದೂರವಿಡಿ
ನೀರಿನ ಜೊತೆಗೆ ಅತಿಯಾದ ಶಾಖವೂ ಸೋಪನ್ನು ಮೆತ್ತಗಾಗಿಸಬಹುದು. ಆದ್ದರಿಂದ ನೇರ ಬಿಸಿಲು ಬೀಳುವ ಅಥವಾ ಹೆಚ್ಚು ಬಿಸಿಯಾಗಿರುವ ಜಾಗದಲ್ಲಿ ಸೋಪ್ ಇಡಬೇಡಿ. ಸಿಂಕ್ ಬಳಿ ಕಿಟಕಿ ಇದ್ದು ಅಲ್ಲಿಂದ ನೇರ ಬಿಸಿಲು ಬರುತ್ತಿದ್ದರೆ ಸೋಪ್ ಇಡಲು ಬೇರೆ ಜಾಗ ಆಯ್ಕೆ ಮಾಡುವುದು ಉತ್ತಮ.


