ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು, ಮುಡಾದಲ್ಲಿ ನಿಯಮ ಉಲ್ಲಂಘಿಸಿ ಹಂಚಲಾಗಿದ್ದ 50:50 ಬದಲಿ ನಿವೇಶನಗಳನ್ನು ರದ್ದುಪಡಿಸಿರುವುದಾಗಿ ತಿಳಿಸಿದ್ದಾರೆ. ವಿಚಾರಣಾ ಆಯೋಗದ ಶಿಫಾರಸಿನಂತೆ, ಸುಮಾರು ₹2000 ಕೋಟಿ ಮೌಲ್ಯದ 1100 ನಿವೇಶನಗಳ ಹಂಚಿಕೆಯನ್ನು ರದ್ದುಗೊಳಿಸಲಾಗಿದೆ.

ಮೈಸೂರು (ಆ.20): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿಯಮಗಳನ್ನು ಉಲ್ಲಂಘಿಸಿ ಮಾಡಲಾದ 50:50 ಬದಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸಿನಂತೆ, ಉನ್ನತ ಮಟ್ಟದ ತಾಂತ್ರಿಕ ಸಮಿತಿ ವರದಿಯನ್ವಯ 2023ರ ಮಾ.14ರ ನಿರ್ದೇಶನವನ್ನು ಉಲ್ಲಂಘಿಸಿ ಮಾಡಲಾದ ಎಲ್ಲಾ ನಿವೇಶನಗಳ ಹಂಚಿಕೆ ರದ್ದುಪಡಿಸಿ ಆದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

2023ರ ಮಾ.14ರ ನಿರ್ದೇಶನಗಳನ್ನು ಉಲ್ಲಂಘಿಸಿ ಹಂಚಿಕೆ ಮಾಡಲಾಗಿತ್ತು

2023ರ ಮಾ.14ರ ನಿರ್ದೇಶನಗಳನ್ನು ಉಲ್ಲಂಘಿಸಿ ಹಂಚಿಕೆ ಮಾಡಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ, ಮುಡಾ ಅಧ್ಯಕ್ಷರು/ ಜಿಲ್ಲಾಧಿಕಾರಿಗಳು, ಆಯುಕ್ತರು ಹಾಗೂ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರವು ಪ್ರಮುಖ ನಿರ್ದೇಶನಗಳನ್ನು ನೀಡಿದೆ.

ನಿಯಮ ಉಲ್ಲಂಘಿಸಿ 50:50 ಬದಲಿ ನಿವೇಶನ

ನಿಯಮ ಉಲ್ಲಂಘಿಸಿ 50:50 ಬದಲಿ ನಿವೇಶನಗಳ ಹಂಚಿಕೆ ರದ್ದತಿಗೆ 2026 ಆ.19ರಂದು ನೀಡಿರುವ ನಿರ್ದೇಶನದನ್ವಯ ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 1100, 50:50 ಬದಲಿ ನಿವೇಶನಗಳನ್ನು ರದ್ದುಪಡಿಸಲು ಸರ್ಕಾರ ನಿರ್ದೇಶನ ನೀಡಿದೆ. ಇದರ ಮೌಲ್ಯ ಸುಮಾರು ₹2000 ಕೋಟಿ ಎಂದು ಅಂದಾಜಿಸಬಹುದಾಗಿದೆ.

ಮೊದಲ ಹಂತದಲ್ಲಿ 2023ರ ಮಾ.14ರ ನಂತರ ನಿಯಮ ಉಲ್ಲಂಘಿಸಿ ಮಾಡಲಾದ ಹಂಚಿಕೆಯನ್ನು ರದ್ದುಪಡಿಸಲಾಗಿದೆ. ಎರಡನೇ ಹಂತದಲ್ಲಿ 2023ರ ಮಾ.14ಕ್ಕೂ ಮೊದಲೂ ಹಂಚಿಕೆ ಮಾಡಲಾಗಿರುವ ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆಯನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಕ್ರಮ ಕಂಡು ಬಂದಲ್ಲಿ ಅವುಗಳ‌ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.