ಬೆಂಗಳೂರಿನ ವಿಶೇಷ ಭೂಸ್ವಾಧೀನಾಧಿಕಾರಿ ಮಲ್ಲಿಕಾರ್ಜುನ ಬಿ. ಅವರ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಕೇಳಿಬಂದಿದೆ. ದಾಳಿಯ ವೇಳೆ 100 ಎಕರೆ ಕೃಷಿ ಭೂಮಿ, ₹2.53 ಕೋಟಿ ನಗದು ಸೇರಿದಂತೆ ಒಟ್ಟು ₹18 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಬೆಂಗಳೂರು (ಆ.20): ಆದಾಯದಕ್ಕಿಂತಲೂ ಅಧಿಕ ಮೌಲ್ಯದ ಆಸ್ತಿಯನ್ನು ಗಳಿಸಿರುವ ಆರೋಪದ ಮೇಲೆ ಬೆಂಗಳೂರಿನ ವಿಶೇಷ ಭೂಸ್ವಾಧೀನಾಧಿಕಾರಿಗೆ ಸೇರಿದ್ದ 11 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಬರೋಬ್ಬರಿ 18 ಕೋಟಿ ರು.ಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಅಲ್ಲದೇ ಈ ಅಧಿಕಾರಿಯು 100 ಎಕರೆ ಕೃಷಿ ಭೂಮಿ ಹೊಂದಿರುವುದು ಪತ್ತೆಯಾಗಿದೆ.
ಬೆಂಗಳೂರಿನ ವಿಶೇಷ ಭೂಸ್ವಾಧೀನಾಧಿಕಾರಿ ಮಲ್ಲಿಕಾರ್ಜುನ ಬಿ. ಅವರ ಬೆಂಗಳೂರಿನ ಸುಬ್ರಹ್ಮಣ್ಯ ನಗರ, ಗುಡ್ಡದಹಳ್ಳಿ, ಹೆಬ್ಬಾಳ ಸೇರಿದಂತೆ ಹಲವು ಕಡೆಗಳಲ್ಲಿ ತಮ್ಮ ಕಚೇರಿ ಮತ್ತು ನಿವಾಸಗಳನ್ನು ಹೊಂದಿದ್ದಾರೆ. ಇವರಿಗೆ ಸೇರಿದ 11 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅಲ್ಲಿನ ಸಂಪತ್ತಿನ ರಾಶಿ ನೋಡಿ ದಂಗಾಗಿದ್ದಾರೆ. ತಮ್ಮ ಕಾನೂನುಬದ್ಧ ಆದಾಯಕ್ಕಿಂತ ಹಲವು ಪಟ್ಟು ಅಧಿಕ ಆಸ್ತಿಯನ್ನು ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
100 ಎಕರೆ ಕೃಷಿ ಜಮೀನಿನ ಒಡೆಯ:
ಅಧಿಕಾರಿಯು ಎರಡು ಐಷಾರಾಮಿ ವಸತಿ ಮನೆಗಳನ್ನು ಹೊಂದಿದ್ದಾರೆ. ಅಚ್ಚರಿಯ ವಿಷಯವೆಂದರೆ, ಅವರು ಬರೋಬ್ಬರಿ 100 ಎಕರೆ 5 ಗುಂಟೆಯಷ್ಟು ಕೃಷಿ ಜಮೀನನ್ನು ಹೊಂದಿದ್ದಾರೆ. ಈ ಸ್ಥಿರಾಸ್ತಿಯ ಒಟ್ಟು ಮೌಲ್ಯವೇ ಸುಮಾರು 14.28 ಕೋಟಿ ರು. ಎಂದು ಅಂದಾಜಿಸಲಾಗಿದೆ. ಕೇವಲ ಜಮೀನು ಮಾತ್ರವಲ್ಲದೆ, ಚರಾಸ್ತಿಯಲ್ಲೂ ಅವರು ಅಪಾರ ಸಂಪತ್ತು ಗಳಿಸಿದ್ದಾರೆ. 2.53 ಕೋಟಿ ರು. ನಗದು ಪತ್ತೆಯಾಗಿದೆ. 3.10 ಲಕ್ಷ ರು. ಮೌಲ್ಯದ ಚಿನ್ನಾಭರಣಗಳು. 15 ಲಕ್ಷ ರು. ಮೌಲ್ಯದ ಐಷಾರಾಮಿ ವಾಹನಗಳು. ಬ್ಯಾಂಕ್ ಬ್ಯಾಲೆನ್ಸ್ ರೂಪದಲ್ಲಿ 1 ಕೋಟಿ ರು. ಮತ್ತು 33.40 ಲಕ್ಷ ರು. ಮೌಲ್ಯದ ಮನೆಯ ಗೃಹೋಪಯೋಗಿ ವಸ್ತುಗಳು. ಚರಾಸ್ತಿಯ ಒಟ್ಟು ಮೌಲ್ಯ 4.4 ಕೋಟಿ ರು. ಆಗಿದ್ದು, ಒಟ್ಟಾರೆಯಾಗಿ ಈ ಅಧಿಕಾರಿಯು ಗಳಿಸಿರುವ ಅಕ್ರಮ ಆಸ್ತಿಯ ಮೌಲ್ಯವು 18.33 ಕೋಟಿ ರು.ಆಗಿದ್ದು, ಇದರಲ್ಲಿ ಸುಮಾರು 12.95 ಕೋಟಿ ರು. ಅಕ್ರಮ ಆಸ್ತಿ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ದಾಖಲೆಗಳ ಪರಿಶೀಲನೆ:
ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಅಡಿಯಲ್ಲಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಭೂಮಿಯನ್ನು ಮತ್ತು ನಗದು ಹಣವನ್ನು ಸರ್ಕಾರಿ ಸೇವೆಯಲ್ಲಿದ್ದ ವ್ಯಕ್ತಿ ಹೇಗೆ ಸಂಗ್ರಹಿಸಿದನು ಎಂಬ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ. ಕೃಷಿ ಭೂಮಿಯ ದಾಖಲೆಗಳು ಮತ್ತು ಬ್ಯಾಂಕ್ ಖಾತೆಗಳ ಕುರಿತು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಸ್ತುತ ಮಲ್ಲಿಕಾರ್ಜುನ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅವರ ಕುಟುಂಬ ಸದಸ್ಯರ ಹೆಸರಿನಲ್ಲಿರುವ ಆಸ್ತಿಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


