ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಅಧಿಕ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಈ ವರ್ಷ ಮೊದಲ ಬಾರಿಗೆ 1,08,531 ಕ್ಯೂಸೆಕ್‌ ನೀರು ಹರಿದುಬಂದಿದೆ. ಇದರಿಂದ ಜಲಾಶಯದಲ್ಲಿ 53.648 ಟಿಎಂಸಿ ನೀರು ಸಂಗ್ರಹವಾಗಿದ್ದು, ಇದು ಹಲವು ಜಿಲ್ಲೆಗಳ ಕೃಷಿ ಚಟುವಟಿಕೆಗಳಿಗೆ ಆಶಾದಾಯಕವಾಗಿದೆ.

ಹೊಸಪೇಟೆ (ಆ.5): ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳು ಸೇರಿದಂತೆ ಮೂರು ರಾಜ್ಯಗಳ 8 ಜಿಲ್ಲೆಗಳ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ 1,08531 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಈ ವರ್ಷ ಇದೇ ಮೊದಲ ಬಾರಿ ಒಳಹರಿವಿನ ಪ್ರಮಾಣ ಲಕ್ಷ ಕ್ಯೂಸೆಕ್‌ ದಾಟಿದೆ. ಜಲಾಶಯದಲ್ಲಿ 53.648 ಟಿಎಂಸಿ ನೀರು ಸಂಗ್ರವಾಗಿದೆ.

ತುಂಗಭದ್ರಾ ಜಲಾಶಯ ಒಳಹರಿವು ಹೆಚ್ಚಳ

ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡು ಪ್ರದೇಶದಲ್ಲಿ ಅಧಿಕ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಬರುತ್ತಿರುವುದರಿಂದ ಜಲಾಶಯದ ಒಳ ಹರಿವು ಗಣನೀಯವಾಗಿ ಏರಿಕೆ ಕಂಡು ಬರುತ್ತಿದೆ. ಜಲಾಶಯದಲ್ಲಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ನೀರು ಸಂಗ್ರಹವಾದಂತಾಗಿದೆ.

ಕಳೆದ 4-5 ದಿನಗಳಿಂದ ನಿತ್ಯವೂ ಜಲಾಶಯಕ್ಕೆ 1-2 ಟಿಎಂಸಿ ನೀರು ಹೆಚ್ಚಳವಾಗುತ್ತಾ ಬರುತ್ತಿರುದೆ. ಮಂಗಳವಾರ ಬೆಳಗ್ಗೆ 51 ಟಿಎಂಸಿ ಇದ್ದ ನೀರು, ಮಧ್ಯಾಹ್ನ 3ರ ವೇಳೆಗೆ ಸುಮಾರು 3 ಟಿಎಂಸಿ ನೀರು ಹೆಚ್ಚಳವಾಗಿರುವುದರಿಂದ ಈಗ ಜಲಾಶಯದಲ್ಲಿ 54 ಟಿಎಂಸಿ ನೀರು ಸಂಗ್ರಹವಾಗಿದೆ. 1556 ಕ್ಯೂಸೆಕ್‌ ನೀರು ಜಲಾಶಯದಿಂದ ಕಾಲುವೆಗಳ ಮೂಲಕ ಹೊರ ಬಿಡಲಾಗುತ್ತಿದೆ.

ಈ ಅವಧಿಯಲ್ಲಿ ಜಲಾಶಯಕ್ಕೆ ಇಷ್ಟು ದೊಡ್ಡ ಮಟ್ಟದ ಒಳಹರಿವು ದಾಖಲಾಗಿದ್ದು ಅಪರೂಪವಾಗಿದೆ. ಇದೇ ರೀತಿಯಲ್ಲಿ ಒಂದು ವಾರ ನೀರು ಹರಿದು ಬಂದರೆ ಜಲಾಶಯ ಭರ್ತಿಯಾಗುವ ನಿರೀಕ್ಷೆಯಿದೆ. ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ಆಂಧ್ರ ಪ್ರದೇಶದ ಅಚ್ಚುಕಟ್ಟು ಪ್ರದೇಶದ ಕೃಷಿ ಚಟುವಟಿಕೆಗೆ ಹೊಸ ಹುರುಪು ತರಲಿದೆ.

ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?

ಕಬಿನಿ 96% 2284 2282.71

ಹೇಮಾವತಿ 77% 2922 2912.74

ತುಂಗಭದ್ರಾ 48% 1633 1613.13

ಸೂಪಾ(ಮೀ.) 46% 564 541.66

ಕೆಆರ್‌ಎಸ್ 52% 124.80 103.40

ಘಟಪ್ರಭಾ 79% 2175 2160.80

ಲಿಂಗನಮಕ್ಕಿ 43% 1819.12 1785.90

ಭದ್ರಾ 66% 2158 2136.75

ಹಾರಂಗಿ 93% 2859 2857.22

ಆಲಮಟ್ಟಿ(ಮೀ.) 90% 519.60 518.86

ನಾರಾಯಣಪುರ(ಮೀ.) 88% 492.25 491.35

ಮಲಪ್ರಭಾ 47% 2079.50 2061.20