ಜುಲೈ 1 ರಿಂದ ಜಾರಿಗೆ ಬಂದ 'ವಿಕ್ಸಿತ್ ಭಾರತ್ ಉದ್ಯೋಗ ಮಿಷನ್-ಗ್ರಾಮೀಣ' ಯೋಜನೆಯು, ಹಿಂದಿನ ಉದ್ಯೋಗ ಖಾತರಿ ಯೋಜನೆಯ ಸ್ಥಾನವನ್ನು ತುಂಬುವಲ್ಲಿ ವಿಫಲವಾಗಿದೆ. ಆಡಳಿತಾತ್ಮಕ ಗೊಂದಲ, ಅನುದಾನದ ಕೊರತೆ ಮತ್ತು ತಾಂತ್ರಿಕ ದೋಷಗಳಿಂದಾಗಿ ಗ್ರಾಮೀಣ ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ವಲಸೆಯ ಭೀತಿ ಎದುರಿಸುತ್ತಿದ್ದಾರೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MGNREGA) ಯೋಜನೆಯ ಜಾಗಕ್ಕೆ ಜುಲೈ 1 ರಿಂದ ಜಾರಿಗೆ ಬಂದಿರುವ 'ವಿಕ್ಸಿತ್ ಭಾರತ್ ಉದ್ಯೋಗ ಮತ್ತು ಆಜೀವಿಕಾ ಮಿಷನ್-ಗ್ರಾಮೀಣ' (VB-G RAM G) ಯೋಜನೆ ಕಾಗದದಲ್ಲಷ್ಟೇ ಸದ್ದು ಮಾಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಅನುಷ್ಠಾನದ ಕುರಿತು ಅಧಿಕಾರಿಗಳಲ್ಲೇ ಸ್ಪಷ್ಟತೆ ಇಲ್ಲದಿರುವುದು ಮತ್ತು ಆಡಳಿತಾತ್ಮಕ ದೌರ್ಭಲ್ಯದಿಂದಾಗಿ ಬಡ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದಿ ಹಿಂದೂ ವರದಿ ಪ್ರಕಾರ ಕರ್ನಾಟಕದ ಪ್ರಮುಖ ಅಂಕಿ-ಅಂಶಗಳು!

ಗ್ರಾಮ ಪಂಚಾಯತಿಗಳು: 5,958

ಒಟ್ಟು ಜಾಬ್ ಕಾರ್ಡ್‌ಗಳು; 69.51 ಲಕ್ಷ | ಸಕ್ರಿಯ ಜಾಬ್ ಕಾರ್ಡ್‌ಗಳು: 36.94 ಲಕ್ಷ

ಒಟ್ಟು ನೋಂದಾಯಿತ ಕಾರ್ಮಿಕರು; 1.44 ಕೋಟಿ | ಸಕ್ರಿಯ ಕಾರ್ಮಿಕರು: 63.62 ಲಕ್ಷ

ದೈನಂದಿನ ಸರಾಸರಿ ಕೂಲಿ; ₹336.04

ದೈಹಿಕ ವಿಕಲಚೇತನ ಉದ್ಯೋಗಿಗಳು: 4,151

ಪ್ರತಿ ಕುಟುಂಬಕ್ಕೆ ದೊರೆತ ಸರಾಸರಿ ಉದ್ಯೋಗ ದಿನಗಳು; ಕೇವಲ 11.67 ದಿನಗಳು

ಕೈಗೆತ್ತಿಕೊಂಡ ಒಟ್ಟು ಕಾಮಗಾರಿಗಳು: 4.28 ಲಕ್ಷ (ಪ್ರಗತಿಯಲ್ಲಿರುವ ಕಾಮಗಾರಿಗಳು; 4.22 ಲಕ್ಷ, ಪೂರ್ಣಗೊಂಡವು: ಕೇವಲ 6,768)

ಶೂನ್ಯ ವೆಚ್ಚ ದಾಖಲಿಸಿದ ಗ್ರಾಮ ಪಂಚಾಯತಿಗಳು: 805

ಸಾಮಾನ್ಯ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳು!

ಕೂಲಿಯ ಅಭಾವ ಹಾಗೂ ಕಾಯುವಿಕೆ!

ಹಳೆಯ ಉದ್ಯೋಗ ಖಾತರಿ ಯೋಜನೆಯು ಸಂಪೂರ್ಣವಾಗಿ ಕಾರ್ಮಿಕರ ಬೇಡಿಕೆ ಆಧಾರಿತವಾಗಿತ್ತು ಎಂದು ಇಂದು ಕಾರ್ಮಿಕರು ಹೇಳುತ್ತಿದ್ದಾರೆ. ಆದರೆ ಹೊಸ ಯೋಜನೆಯಡಿ ಕೇಂದ್ರದಿಂದ ಅನುಮೋದನೆ ಮತ್ತು ನಿಧಿ ಬಿಡುಗಡೆಯಾಗುವವರೆಗೆ ಪಂಚಾಯತಿಗಳು ಕೆಲಸ ಆರಂಭಿಸುತ್ತಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಉದ್ಯೋಗ ಸಿಗದೆ ಕಾರ್ಮಿಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ.

ಕಡಿಮೆ ಮಾನವ ದಿನಗಳು!

ಎಲ್ ನಿನೋ ಪೀಡಿತ ಬರಗಾಲದಲ್ಲೂ ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ ರಾಜ್ಯದಲ್ಲಿ ಅನುಕ್ರಮವಾಗಿ 1.69 ಲಕ್ಷ ಹಾಗೂ 2.83 ಲಕ್ಷ ಕುಟುಂಬಗಳಿಗೆ ಕೆಲಸ ಸಿಕ್ಕಿತ್ತು. ಆದರೆ ಈ ಬಾರಿ ನೂತನ ಯೋಜನೆಯಡಿ ಜುಲೈನಲ್ಲಿ 4.95 ಲಕ್ಷ ಕುಟುಂಬಗಳು ಹಾಗೂ ಆಗಸ್ಟ್‌ನಲ್ಲಿ ಕೇವಲ 2.78 ಲಕ್ಷ ಕುಟುಂಬಗಳಿಗೆ ಮಾತ್ರ ಉದ್ಯೋಗ ಸಿಕ್ಕಿದೆ. ಜುಲೈ-ಆಗಸ್ಟ್ ತಿಂಗಳಲ್ಲಿ ಮಾನವ ದಿನಗಳ ಸೃಷ್ಟಿ 61.48 ಲಕ್ಷದಿಂದ 17.98 ಲಕ್ಷಕ್ಕೆ ಹಾಗೂ 36.15 ಲಕ್ಷದಿಂದ 26.27 ಲಕ್ಷಕ್ಕೆ ಕುಸಿದಿದೆ.

ವಲಸೆಯ ಭೀತಿ: ಉದ್ಯೋಗದ ಅಭಾವದಿಂದಾಗಿ ಬೀದರ್, ಯಾದಗಿರಿ, ರಾಯಚೂರು, ಕಲಬುರಗಿಯಂತಹ ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಂದ ಬಡ ಶ್ರಮಿಕರು ಬೃಹತ್ ನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆ ಎದುರಾಗಿದೆ.

ಆಡಳಿತದ ದೌರ್ಭಲ್ಯ ಮತ್ತು ಲೋಪದೋಷಗಳು!

ಅಧಿಕಾರಿಗಳ ಗೊಂದಲ ಮತ್ತು ಸಿದ್ಧತೆಯಿಲ್ಲದಿರುವಿಕೆ!

ಯೋಜನೆ ಜಾರಿಯಾಗಿ ಎರಡು ತಿಂಗಳಾದರೂ ಅಂತಿಮ ನಿಯಮಾವಳಿಗಳು ಹಾಗೂ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಸ್ಪಷ್ಟತೆಯಿಲ್ಲ. ತಾಂತ್ರಿಕ ತೊಂದರೆಗಳು ಮತ್ತು ಸಮನ್ವಯದ ಕೊರತೆ: 'ಮಾಸ್ಟರ್ ರೋಲ್' ಸೃಷ್ಟಿಸಲು ತಾಂತ್ರಿಕ ಅಡೆತಡೆಗಳು ಎದುರಾಗುತ್ತಿವೆ. ಅಲ್ಲದೆ, ಪಂಚಾಯತ್ ರಾಜ್, ಎಂಜಿನಿಯರಿಂಗ್, ಅರಣ್ಯ ಮತ್ತು ನೀರಾವರಿ ಇಲಾಖೆಗಳ ನಡುವೆ ಸರಿಯಾದ ಸಮನ್ವಯವಿಲ್ಲ.

ಕೇಂದ್ರ-ರಾಜ್ಯ ಅನುದಾನ ಹಂಚಿಕೆ ಗೊಂದಲ!

ಕೇಂದ್ರ ನತ್ತು ರಾಜ್ಯ ಸರ್ಕಾರದ ನಡುವಿನ ಅನುದಾನ ಹಂಚಿಕೆಯ ಪ್ರಮಾಣ ಬದಲಾಗಿದ್ದು, ರಾಜ್ಯ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ. ಇದಲ್ಲದೇ ನಿಧಿ ಬಿಡುಗಡೆಯ ಹಂತದಲ್ಲಾಗುತ್ತಿರುವ ವಿಳಂಬದಿಂದಾಗಿ ದುಡಿದ ಕಾರ್ಮಿಕರಿಗೆ ಕೂಲಿ ಹಣ ಸಮಯಕ್ಕೆ ತಲುಪುತ್ತಿಲ್ಲ.

ಕಾರ್ಮಿಕರ ಆಗ್ರಹವೇನು?

ಸರ್ಕಾರ ಮತ್ತು ಅಧಿಕಾರಿಗಳು ಬರೀ 'ತಾಂತ್ರಿಕ ದೋಷ' ಅಥವಾ 'ಮಾರ್ಗದರ್ಶಿ ಸೂತ್ರಗಳ ಕೊರತೆ' ಎಂದು ಸಬೂಬು ಹೇಳಿ ಕಾಲಹರಣ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕಿದೆ. ಕಾಗದದ ಮೇಲಿನ ತಾಂತ್ರಿಕ ಕಾರಣಗಳು ಬಡ ಕೂಲಿ ಕಾರ್ಮಿಕರ ಹಸಿವನ್ನುಂಗಿಸಲು ಸಾಧ್ಯವಿಲ್ಲ. ಯೋಜನೆಗಳು ಬದಲಾದಾಗ ಆರಂಭಿಕ ಸಮಸ್ಯೆಗಳು ಸಹಜವಾದರೂ, ಆಡಳಿತ ಯಂತ್ರವು ಕೇವಲ ಲೋಪಗಳನ್ನು ಎತ್ತಿ ತೋರಿಸುವ ಬದಲು ತಳಮಟ್ಟದಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಬೇಕು ಎಂದು ಕಾರ್ಮಿಕರು ಆಗ್ರಹಿಸುತ್ತಿದ್ದಾರೆ.