ಕೇಂದ್ರ ಸರ್ಕಾರವು ರಾಜ್ಯದೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಕಾಯ್ದೆ ಜಾರಿಗೊಳಿಸಲು ಮುಂದಾಗಿದ್ದು, ಇದು ಸಂವಿಧಾನ ವಿರೋಧಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಅಲ್ಲದೆ, ರಾಜ್ಯಪಾಲರ ಕಚೇರಿಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಚೇರಿಗಳಂತೆ ಬಳಕೆಯಾಗುತ್ತಿವೆ ಎಂದು  ಆಕ್ರೋಶ.

  • ಕೇಂದ್ರದ್ದು ಸಂವಿಧಾನ ವಿರೋಧಿ ನಿರ್ಧಾರ
  • ಯೋಜನೆ ಬಗ್ಗೆ ಕೇಂದ್ರ ಮಾಹಿತಿ ನೀಡೇ ಇಲ್ಲ

ಬೆಂಗಳೂರು (ಮೇ.9): ವಿಬಿ ಜಿ ರಾಮ್‌ ಜಿ ಕಾಯ್ದೆ ತರುವುದಕ್ಕೂ ಮುಂಚೆ ನಮ್ಮೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿಲ್ಲ. ಸಂವಿಧಾನ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಆರ್ಥಿಕ ಹೊರೆಯಾಗುವುದಾದರೆ ನಮ್ಮ ಗಮನಕ್ಕೆ ತರಬೇಕು. ಆದರೆ, ಅದನ್ನು ಮಾಡಿಲ್ಲ. ಇದು ಸಂವಿಧಾನ ವಿರೋಧಿ ನಿರ್ಧಾರವಾಗಿದ್ದು, ಅದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಆರ್ಥಿಕ ಹೊರೆಯಾಗುವಂಥ ಯೋಜನೆ ತರುವುದಕ್ಕೂ ಮುನ್ನ ಆ ರಾಜ್ಯದ ಗಮನಕ್ಕೆ ತರಬೇಕು. ಆದರೆ, ಸಂವಿಧಾನ ವಿರೋಧಿಯಾಗಿ ವಿಬಿ ಗ್ರಾಮ್‌ ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಜಾರಿಗೊಳಿಸಲು ಮುಂದಾಗಿದೆ. ಕಾಯ್ದೆ ತರುವುದಕ್ಕೂ ಮುನ್ನ ನಮ್ಮೊಂದಿಗೆ ಮಾತುಕತೆ ನಡೆಸಿಲ್ಲ. ಈ ಎಲ್ಲದರ ಕುರಿತು ನಾವು ಹೋರಾಟ ಮಾಡುತ್ತೇವೆ ಎಂದರು.

ರಾಜಭವನ ಬಿಜೆಪಿ ಕಚೇರಿಗಳಾಗುತ್ತಿವೆ:

ತಮಿಳುನಾಡು ಸರ್ಕಾರ ರಚನೆಯಲ್ಲಿ ರಾಜ್ಯಪಾಲರ ನಡೆ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್‌, ಕಳೆದೊಂದು ದಶಕದಿಂದ ರಾಜ್ಯಪಾಲರ ಕಚೇರಿಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಚೇರಿಯಾಗಿ ಬಳಕೆಯಾಗುತ್ತಿವೆ. ಸಂವಿಧಾನಿಕ ಹುದ್ದೆಯಲ್ಲಿದ್ದು ರಾಜಕೀಯ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರು ಅಡ್ಡಿಪಡಿಸಿದ್ದರು. ಬೇರೆ ರಾಜ್ಯಗಳಲ್ಲಿ ಈ ರೀತಿ ಸನ್ನಿವೇಶವಿದ್ದಾಗ ಸರ್ಕಾರ ರಚನೆಗೆ ಅನುಮತಿಸಲಾಗಿತ್ತು. ಬಹುಮತವನ್ನು ರಾಜ್ಯಪಾಲರ ಬಳಿ ಸಾಬೀತುಪಡಿಸುವ ಅವಶ್ಯಕತೆಯಿಲ್ಲ. ಸದನದ ಒಳಗೆ ಅದನ್ನು ಸಾಬೀತುಪಡಿಸಬೇಕು. ಅದಕ್ಕೂ ಮುಂಚೆಯೇ ಶಾಸಕರ ಬೆಂಬಲವಿರುವ ಪತ್ರ ನೀಡಿದೆ ಎನ್ನುವುದು ಸರಿಯಲ್ಲ.