ಕಾರವಾರದ ಮಲ್ಲಾಪುರದಲ್ಲಿ ಕಾಂಪೌಂಡ್ ಮೇಲೆ ಕುಳಿತು ಆತಂಕ ಸೃಷ್ಟಿಸಿದ್ದ 10 ಅಡಿಯ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳಾದ ಬಿಲಾಲ್ ಶೇಖ್ ಮತ್ತು ರಾಯಪ್ಪ ರೋಚಕವಾಗಿ ಸೆರೆಹಿಡಿದಿದ್ದಾರೆ. ನೂರಾರು ಜನರ ಸಮ್ಮುಖದಲ್ಲಿ ನಡೆದ ಈ ಕಾರ್ಯಾಚರಣೆಯ ನಂತರ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಉತ್ತರ ಕನ್ನಡ: ಜಿಲ್ಲೆಯ ಕಾರವಾರ ಅಂದಾಕ್ಷಣ ನಮಗೆ ನೆನಪಾಗುವುದು ಸುಂದರ ಸಮುದ್ರ ಮತ್ತು ದಟ್ಟ ಅರಣ್ಯ. ಆದರೆ, ಇದೇ ಅರಣ್ಯದ ರಾಜ 'ಕಾಳಿಂಗ ಸರ್ಪ' ಜನವಸತಿ ಪ್ರದೇಶಕ್ಕೆ ಬಂದರೆ ಹೇಗಿರುತ್ತೆ? ಅಂತಹದ್ದೇ ಒಂದು ಮೈನವಿರೇಳಿಸುವ ಘಟನೆ ಕಾರವಾರದ ಮಲ್ಲಾಪುರದಲ್ಲಿ ನಡೆದಿದೆ. ಕಾಂಪೌಂಡ್ ಮೇಲೆ ಕುಳಿತು ಸುತ್ತಮುತ್ತಲಿನ ಜನರಲ್ಲಿ ನಡುಕ ಹುಟ್ಟಿಸಿದ್ದ ಬರೋಬ್ಬರಿ 10 ಅಡಿಯ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸಿನಿಮೀಯ ಶೈಲಿಯಲ್ಲಿ ಸೆರೆ ಹಿಡಿದಿದ್ದಾರೆ.
ಕಾಂಪೌಂಡ್ ಮೇಲೆ ಕಾಳಿಂಗ ಪ್ರತ್ಯಕ್ಷ
ಕಾರವಾರ ತಾಲೂಕಿನ ಮಲ್ಲಾಪುರ ಸಮೀಪದ ಕುರ್ನಿಪೇಟೆಯಲ್ಲಿ ಘಟನೆ ನಡೆದಿದೆ. ಗುರುವಾರ ಸಂಜೆ ಸಾರ್ವಜನಿಕರು ಓಡಾಡುವ ಜಾಗದಲ್ಲಿರುವ ಮನೆಯೊಂದರ ಕಾಂಪೌಂಡ್ ಮೇಲೆ ಸುಮಾರು 10 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ಪ್ರತ್ಯಕ್ಷವಾಯಿತು. ಸಾಧಾರಣ ಹಾವನ್ನೇ ಕಂಡು ಹೆದರುವ ಜನರಿಗೆ, ಸಾಕ್ಷಾತ್ ನಾಗರಹಾವಿನ ರಾಜ 'ಕಾಳಿಂಗ' ಕಂಡೊಡನೆ ಇಡೀ ಏರಿಯಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿಯುತ್ತಿದ್ದಂತೆ ನೂರಾರು ಜನರು ಈ ಹಾವನ್ನು ನೋಡಲು ಜಮಾಯಿಸಿದರು.
ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಬಿಲಾಲ್ ಶೇಖ್ ಮತ್ತು ರಾಯಪ್ಪ ಅವರು ಸ್ಥಳಕ್ಕೆ ಧಾವಿಸಿದರು. ಅಷ್ಟರಲ್ಲಿ ಕಾಳಿಂಗ ಸರ್ಪ ಕಾಂಪೌಂಡ್‌ನಿಂದ ಕೆಳಗಿಳಿಯಲು ಪ್ರಯತ್ನಿಸುತ್ತಿತ್ತು. ಜನಜಂಗುಳಿಯ ನಡುವೆಯೂ ಅತ್ಯಂತ ಸಂಯಮ ಮತ್ತು ಧೈರ್ಯದಿಂದ ಬಿಲಾಲ್ ಮತ್ತು ರಾಯಪ್ಪ ಅವರು ಕಾರ್ಯಾಚರಣೆ ಆರಂಭಿಸಿದರು.
ಬಾಕ್ಸ್‌ನಲ್ಲಿ ಸೆರೆಯಾದ ಕಾಳಿಂಗ
ಕಾಳಿಂಗ ಸರ್ಪವು ಸಿಬ್ಬಂದಿ ಮೇಲೆ ಎರಗಲು ಪ್ರಯತ್ನಿಸಿದರೂ ಯಾವುದೇ ಭಯವಿಲ್ಲದೆ ತಮ್ಮಲ್ಲಿರುವ ಹಾವನ್ನು ಹಿಡಿಯುವ ಉಪಕರಣಗಳನ್ನು ಬಳಸಿ ಅತ್ಯಂತ ಕೌಶಲ್ಯದಿಂದ ಅದನ್ನು ಸೆರೆ ಹಿಡಿಯಲಾಯಿತು. ಹತ್ತಿರ ಹತ್ತಿರ 10 ಅಡಿ ಉದ್ದವಿದ್ದ ಈ ಸರ್ಪವನ್ನು ಹಿಡಿಯುವ ದೃಶ್ಯವನ್ನು ಜನರು ಉಸಿರು ಬಿಗಿಹಿಡಿದು ನೋಡುತ್ತಿದ್ದರು. ಅಂತಿಮವಾಗಿ ಹಾವನ್ನು ಸುರಕ್ಷಿತವಾಗಿ ಪ್ಲಾಸ್ಟಿಕ್ ಡಬ್ಬಿಯಲ್ಲಿ ತುಂಬಿದಾಗ ಜನರು ನಿಟ್ಟುಸಿರು ಬಿಟ್ಟರು.
ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಜನವಸತಿ ಪ್ರದೇಶದಿಂದ ದೂರವಿರುವ ದಟ್ಟ ಕಾಡಿಗೆ ಕೊಂಡೊಯ್ದು ಸುರಕ್ಷಿತವಾಗಿ ಬಿಟ್ಟಿದ್ದಾರೆ. ಸಮಯಪ್ರಜ್ಞೆ ಮೆರೆದ ಬಿಲಾಲ್ ಶೇಖ್ ಮತ್ತು ರಾಯಪ್ಪ ಅವರ ಧೈರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


