ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ರೈಲುಗಳಲ್ಲಿ ಇಲಿಗಳ ಕಾಟದಿಂದ ಎ.ಸಿ ವ್ಯವಸ್ಥೆ ಹಾಳಾಗುತ್ತಿದ್ದು, ಇದನ್ನು ತಡೆಯಲು ರೈಲ್ವೆ ಇಲಾಖೆ ಮುಂದಾಗಿದೆ. ಸುಮಾರು 371 ಎಲ್‌ಎಚ್‌ಬಿ ಎ.ಸಿ ಕೋಚ್‌ಗಳಲ್ಲಿನ ರಂಧ್ರಗಳನ್ನು ಪಾಲಿ ಕಾರ್ಬೋನೇಟ್ ಶೀಟ್‌ಗಳಿಂದ ಮುಚ್ಚುವ ಮೂಲಕ ಇಲಿಗಳ ಪ್ರವೇಶವನ್ನು ತಡೆಯಲು 84 ಲಕ್ಷ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ.
ಬೆಂಗಳೂರು: ನೈರುತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗದಲ್ಲಿನ ರೈಲುಗಳಲ್ಲಿ ಇಲಿಗಳ ಕಾಟದಿಂದ ಏರ್ ಕಂಡೀಷನ್ಡ್ ಎಲ್‌ಎಚ್‌ಬಿ ಕೋಚ್‌ಗಳಲ್ಲಿ ಪದೇ ಪದೆ ಎ.ಸಿ ವ್ಯವಸ್ಥೆ ಕೈ ಕೊಡುತ್ತಿರುವ ಹಿನ್ನೆಲೆಯಲ್ಲಿ ಇಲಿಗಳ ಕಾಟ ತಡೆಯಲು 371 ಎಲ್‌ಎಚ್‌ಬಿ ಎ.ಸಿ ಕೋಚ್‌ಗಳ ಮಾರ್ಪಾಡು ಮಾಡಲು ಮುಂದಾಗಿದೆ.
ಸ್ವಿಚ್ ಬೋರ್ಡ್ ಕ್ಯಾಬಿನೆಟ್ ಪ್ಯಾನೆಲ್‌ಗಳಲ್ಲಿ ಇಲಿ ಮುಂತಾದ ಸಣ್ಣ ಪ್ರಾಣಿಗಳು ಪ್ರವೇಶಿಸುವುದನ್ನು ತಡೆಯಲು ರೈಲ್ವೆ ಇಲಾಖೆ 84 ಲಕ್ಷ ರು. ವೆಚ್ಚದ ಯೋಜನೆ ರೂಪಿಸಿದೆ. ಹಳೇ ವಿನ್ಯಾಸದ ಎಲ್‌ಎಚ್‌ಬಿ ಎಸಿ ಕೋಚ್‌ಗಳಲ್ಲಿನ ಆರ್ಥಿಂಗ್ ಡಿವೈಸ್ ಮತ್ತು ಸ್ವಿಚ್ ಪ್ಯಾನಲ್‌ಗಳ ಬಳಿ ಇರುವ ಸಣ್ಣ ರಂಧ್ರಗಳ ಮೂಲಕ ಒಳ ಪ್ರವೇಶಿಸುವ ಇಲಿಗಳು ಎ.ಸಿ ವ್ಯವಸ್ಥೆ ಮತ್ತು ಎಲೆಕ್ಟ್ರಿಕಲ್ ಕೇಬಲ್‌ಗಳನ್ನು ಕಡಿದು ಹಾಳು ಮಾಡುತ್ತಿವೆ. ಇದರಿಂದ ಅನೇಕ ಕೋಚ್‌ಗಳಲ್ಲಿನ ಎ.ಸಿ ಕೆಟ್ಟು ಹೋಗಿ ಪ್ರಯಾಣದ ವೇಳೆ ಪ್ರಯಾಣಿಕರು ಪರದಾಡುವಂತಾಗಿದೆ. ಈ ಬಗ್ಗೆ ಪ್ರಯಾಣಿಕರು ರೈಲ್ವೆ ಇಲಾಖೆಯನ್ನು ದೂರುತ್ತಿದ್ದರು.ಈ ಕುರಿತು ರೈಲ್ವೆ ಇಲಾಖೆಯ ‘ರಿಸರ್ಚ್ ಡಿಸೈನ್ಸ್ ಆ್ಯಂಡ್ ಸ್ಟ್ಯಾಂಡರ್ಡ್ ಆರ್ಗನೈಜೇಷನ್’ (ಆರ್‌ಡಿಎಸ್‌ಒ) ಗಮನ ಸೆಳೆಯಲಾಗಿತ್ತು.
ಪರಿಶೀಲನೆ ನಡೆಸಿದ ಆರ್‌ಡಿಎಸ್‌ಒ, ಎಲ್ಲ ಕೋಚ್‌ಗಳ ರೂಪ್ ಟಾಪ್, ಸ್ವಿಚ್ ಬೋರ್ಡ್ ಕ್ಯಾಬಿನೇಟ್ ಸೇರಿ ರಂಧ್ರ ಇರುವ ಕಡೆಗಳಲ್ಲಿ ಪಾಲಿ ಕಾರ್ಬೋನೇಟ್ ಶೀಟ್ ಬಳಸಿ ಇಲಿಗಳ ಪ್ರವೇಶಿಸದಂತೆ ಮುಚ್ಚಿ ಸೀಲ್ ಮಾಡುವಂತೆ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ತನ್ನ 371 ಹಳೇ ವಿನ್ಯಾಸದ ಎಲ್‌ಎಚ್‌ಬಿ ಎ.ಸಿ ಕೋಚ್‌ಗಳಲ್ಲಿ ಲಘು ಮಾರ್ಪಾಡುಗಳನ್ನು ಮಾಡುತ್ತಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ವಂದೇ ಭಾರತ್ ಅಧಿಕಾರಿಗಳಿಂದ ಆಹಾರ ಗುಣಮಟ್ಟ ಪರಿಶೀಲನೆ
ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಆಹಾರ ಪೂರೈಸುವ ಕೇಟರಿಂಗ್ ವಾಹನವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಗುರುವಾರ ತಪಾಸಣೆ ನಡೆಸಿದರು.
ರೈಲಿನಲ್ಲಿ ಪ್ರಯಾಣಿಕರಿಗೆ ಪೂರೈಸುವ ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಆಹಾರ ತಯಾರಿಕೆ ಮತ್ತು ಸಾಗಣೆ ವೇಳೆ ಪಾಲಿಸಬೇಕಾದ ಸುರಕ್ಷತಾ ನಿಯಮಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಆಹಾರವನ್ನು ಸಾಗಿಸುವ ವಾಹನದಲ್ಲಿ ಸ್ವಚ್ಛತೆ ಕಾಪಾಡಲಾಗಿದೆಯೇ, ಆಹಾರವನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಲಾಗಿದೆಯೇ ಹಾಗೂ ನಿಗದಿತ ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಯಿತು.
ಆಹಾರ ಮತ್ತು ಔಷಧ ಸುರಕ್ಷತೆ ಉಲ್ಲಂಘನೆಗಳ ಕುರಿತು ಸಾರ್ವಜನಿಕರು ನೇರವಾಗಿ ದೂರು ನೀಡಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತಂದಿರುವ ಬೆನ್ನಲ್ಲೇ ರೈಲ್ವೆ ಕೇಟರಿಂಗ್ ವ್ಯವಸ್ಥೆಯ ಮೇಲೂ ತಪಾಸಣೆ ವಿಸ್ತರಿಸಲಾಗಿದೆ.
ವಿವಿಧ ಸ್ಥಳಗಳಲ್ಲಿ ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ
ಇತ್ತೀಚೆಗೆ ರಾಜ್ಯಾದ್ಯಂತ ಆಹಾರ ಮತ್ತು ಔಷಧ ಸುರಕ್ಷತೆ ಕುರಿತು ವಿಶೇಷ ತಪಾಸಣೆ ನಡೆಸಲಾಗುತ್ತಿದ್ದು, ಪಿಜಿ, ಹಾಸ್ಟೆಲ್, ಶಿಕ್ಷಣ ಸಂಸ್ಥೆಗಳು, ಹೊಟೇಲ್, ರೈಲ್ವೆ ಕ್ಯಾಂಟಿನ್ ಹಾಗೂ ವಿಮಾನಗಳಲ್ಲಿ ಪೂರೈಸುವ ಆಹಾರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಆಹಾರ ಮತ್ತು ಔಷಧ ಸುರಕ್ಷತೆ ಉಲ್ಲಂಘನೆಗಳ ಕುರಿತು ಸಾರ್ವಜನಿಕರು ನೇರವಾಗಿ ದೂರು ನೀಡಲು ಅನುಕೂಲವಾಗುವಂತೆ ಕ್ಯೂಆರ್‌ಕೋಡ್ ವ್ಯವಸ್ಥೆಯನ್ನು ಸೋಮವಾರ ಉದ್ಘಾಟಿಸಿದ್ದ ಆರೋಗ್ಯ ಸಚಿವ ಯು.ಟಿ. ಖಾದರ್, ಇನ್ನು ಮುಂದೆ ಪಿಜಿ, ಹಾಸ್ಟೆಲ್, ಶಿಕ್ಷಣ ಸಂಸ್ಥೆಗಳು, ರೈಲ್ವೆ ಕ್ಯಾಂಟಿನ್‌ಗಳು, ವಿಮಾನಗಳಲ್ಲಿ ನೀಡುವ ಆಹಾರ ಸೇರಿದಂತೆ ಎಲ್ಲೆಡೆ ತಪಾಸಣೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದರು.


