ಹಾಸನದ ಸಕಲೇಶಪುರದ ಲಾಡ್ಜ್‌ವೊಂದರ ಬಾತ್‌ರೂಮ್‌ನಲ್ಲಿ ಬೆಂಗಳೂರು ಮೂಲದ 23 ವರ್ಷದ ವರ್ಷ ಎಂಬ ಯುವತಿಯ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಆಕೆಯೊಂದಿಗೆ ಪ್ರವಾಸಕ್ಕೆ ಬಂದಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಾಸನ: ನಗರದ ಲಾಡ್ಜ್‌ ಒಂದರಲ್ಲಿ ಯುವತಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಹಾಸನದ ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆಯ ಶ್ರೀದೇವಿ ಲಾಡ್ಜ್‌ನಲ್ಲಿ ಘಟನೆ ನಡೆದಿದ್ದು, ಯುವತಿಯ ಮೃತದೇಹ ಬಾತ್ ರೂಮ್‌ನಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು 23 ವರ್ಷದ ವರ್ಷ ಎಂದು ಗುರುತಿಸಲಾಗಿದೆ.

ಸಕಲೇಶಪುರ ಲಾಡ್ಜ್‌ನಲ್ಲಿ ಯುವತಿಯ ನಿಗೂಢ ಸಾವು: ಅಸಲಿಯತ್ತೇನು?

ಮೃತ ವರ್ಷ ಬೆಂಗಳೂರಿನ ಚಿಕ್ಕಬಾಣಾವರ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿ ಎಂದು ತಿಳಿದು ಬಂದಿದೆ. ಈಕೆ ಕಳೆದ ಶುಕ್ರವಾರ ಲಾಡ್ಜ್‌ಗೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇಬ್ಬರು ಯುವಕರೊಂದಿಗೆ ಬಂದು ಕಳೆದ ನಾಲ್ಕೈದು ದಿನಗಳಿಂದ ರೂಮ್‌ನಲ್ಲಿಯೇ ಉಳಿದುಕೊಂಡಿದ್ದರಂತೆ. ಸದ್ಯ ಯುವತಿಯ ಜೊತೆಗೆ ಬಂದಿದ್ದ ಯುವಕರು ಎಸ್ಕೇಫ್ ಆಗಿದ್ದಾರೆ.

ಯುವತಿ ಬೆಂಗಳೂರಿನಿಂದ ರಘು ಮತ್ತು ದರ್ಶನ್ ಎಂಬ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಅಂತ ಬಂದಿದ್ದಳಂತೆ. ಮೂವರು ಲಾಡ್ಜ್‌ನಲ್ಲಿ ರೂಮ್ ಪಡೆದುಕೊಂಡು ಉಳಿದುಕೊಂಡಿದ್ದರಂತೆ. ಕೆಲ ದಿನಗಳ ಸುತ್ತಮುತ್ತಲಿನ ಫಾಲ್ಸ್ ಸೇರಿದಂತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರಂತೆ. ಆದರೆ ಇಂದು ಏಕಾಏಕಿ ಯುವತಿಯ ಮೃತದೇಹ ಬಾತ್‌ ರೂಮ್‌ನಲ್ಲಿ ಕಂಡು ಬಂದಿದ್ದು, ಸಾವಿಗೆ ಕಾರಣ ಏನೆಂದು ಪೊಲೀಸರ ತನಿಖೆಯಲ್ಲಿ ತಿಳಿದು ಬರಬೇಕಿದೆ.

ಯುವತಿಯೊಂದಿಗೆ ಬಂದಿದ್ದ ಯುವಕರಾದ ರಘು, ದರ್ಶನ್ ಇಬ್ಬರು ಆಟೋಚಾಲಕರು ಎಂದು ತಿಳಿದು ಬಂದಿದೆ. ಯುವತಿ ತಂದೆ ಕೂಡ ಬೆಂಗಳೂರಿನಲ್ಲಿ ಆಟೋ ಚಾಲಕರಾಗಿದ್ದು, ತಾಯಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.

ಘಟನೆ ಕುರಿತಂತೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್ಪಿ ಮಾಲತೇಶ್ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆಗೆ ಯುವತಿಯ ಮೃತದೇಹವನ್ನು ಹಾಸನ ಹಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.