ಕೋಡಿಮಠದ ಶ್ರೀಗಳು ನೇಪಾಳದಂತೆ ದಕ್ಷಿಣ ಭಾರತದಲ್ಲೂ ಪ್ರವಾಹದಂತಹ ಭೀಕರ ಘಟನೆಗಳು ನಡೆಯುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸಮುದ್ರಗಳು ನುಗ್ಗಿ ಊರುಗಳು ಮುಳುಗುವ ಎಚ್ಚರಿಕೆ ನೀಡಿದ ಅವರು, ಹಿಂಗಾರು ಮಳೆ ಸಮೃದ್ಧವಾಗಿ ರೈತರಿಗೆ ಪರಿಹಾರ ಸಿಗಲಿದೆ ಎಂದೂ ತಿಳಿಸಿದ್ದಾರೆ.
ಹಾಸನ: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬೆನ್ನಲ್ಲೇ ಭೀಕರ ಭವಿಷ್ಯ ನುಡಿದಿರುವ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು, ಉತ್ತರ ಭಾರತದ ನೇಪಾಳದಲ್ಲಿ ನಡೆದ ಘಟನೆಯಂತೆ ದಕ್ಷಿಣ ಭಾರತದಲ್ಲೂ ಆಗುವ ಲಕ್ಷಣ ಇದೆ. ಸಾವು-ನೋವು, ದುಃಖ, ಊರುಗಳು ಕೊಚ್ಚಿ ಹೋಗುವ ಘಟನೆಗಳು ಇವೆ. ಅದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದ್ದಾರೆ.
ಕೋಡಿ ಶ್ರೀಗಳ ಭೀಕರ ಭವಿಷ್ಯ: ದಕ್ಷಿಣ ಭಾರತಕ್ಕೆ ಎಚ್ಚರಿಕೆ?
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಮಠದ ಶ್ರೀಗಳು, ಈ ವರ್ಷದ ಭವಿಷ್ಯವನ್ನು ನಾನು ಮೊದಲೇ ಹೇಳಿದ್ದೆ. ಮುಂಗಾರು ಮಳೆ ವಿರಳ, ಹಿಂಗಾರು ಮಳೆ ಆಗುತ್ತದೆ. ಜನ ಜಂಗುಳಿಯಾಗುತ್ತದೆ, ಅನ್ನ, ಆಹಾರ, ನೀರಿಗೆ ಕೊರತೆಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
'ಹಿಂಗಾರು ಮಳೆ ಆಗುತ್ತೆ, ಶೇ.90 ಜನರಿಗೆ ಪರಿಹಾರ ಸಿಗುತ್ತೆ'
ಅಲ್ಲದೇ, ಸಾವು-ನೋವುಗಳು ಹೆಚ್ಚಾಗುತ್ತದೆ. ವಿಪರೀತವಾದ ಪ್ರವಾಹ ಆಗುತ್ತೆ ಅಂಥ ಹೇಳಿದ್ದೆ, ಈಗ ಅದು ನಡೆಯುತ್ತಿದೆ. ಈಗ ಇಲ್ಲಿಂದ ಕಷ್ಟ ಮುಂದುವರೆಯುತ್ತೆ, ಆದರೂ ಹಿಂಗಾರು ಮಳೆ ಶುಭವಾಗುವ ಲಕ್ಷಣ ಇದೆ. ಕೆರೆ, ಕಟ್ಟೆಗಳು ತುಂಬುತ್ತವೆ, ಅದರ ಬಗ್ಗೆ ತೊಂದರೆಯಿಲ್ಲ. ಹಿಂಗಾರು ಮಳೆ ಸಮೃದ್ದಿಯಾಗುತ್ತದೆ. ಹಿಂಗಾರು ಮಳೆ ಆಗುತ್ತೆ, ಶೇಕಡಾ 90 ಜನರಿಗೆ ಪರಿಹಾರ ಸಿಗುತ್ತೆ ಎಂದು ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ನಾನು ಎರಡ್ಮೂರು ವರ್ಷಗಳಿಂದ ಹೇಳುತ್ತಲೇ ಇದ್ದೇನೆ. ದೇಶಗಳು ಮುಳುಗುತ್ತವೆ, ವಿಪರೀತವಾದ ನೀರು, ಜನಜಂಗುಳಿ, ಯುದ್ಧವಾಗುತ್ತದೆ. ಜನನಿಯಂತ್ರಣ ತಪ್ತಾರೆ, ಆಳುವವರು ಅತೃಪ್ತರಾಗುತ್ತಾರೆ. ದಿನ ಕ್ರಮೇಣ ಪ್ರಕೃತಿ ವಿರೋಧವಾಗಿದ್ದರಿಂದ ನೀರು ಸಿಗಲಿಲ್ಲ. ಜಗತ್ತಿನಾದ್ಯಾಂತ ಮಿಲಿಯನ್‌ಗಟ್ಟಲೆ ಬೋರ್‌ವೆಲ್‌ಗಳನ್ನು ಕೊರೆದರು. ಬಂಡೆ ಮೇಲೆ ಭೂಮಿ ನಿಂತಿರುವುದು, ಅದರಿಂದ ಬೇಸ್‌ಮೆಂಟ್ ಲೂಸ್ ಆಯಿತು. ಇದರಿಂದ ಪ್ರವಾಹ, ಭೂಮಿ ಕಂಪನ ಜಾಸ್ತಿಯಾಯಿತು. ಯಾವುದೇ ವಿಚಾರ ಮಾಡಬೇಕಾದರೂ ನೈಜ ಕಾರಣ ಬೇಕು. ಯಾವುದೇ ಮನೆ ಕಟ್ಟುವಾಗ ಭೂಮಿ ನಿಲ್ಲಬೇಕಾದರೆ ತಳಪಾಯ ಮುಖ್ಯ ಎಂದು ವಿವರಿಸಿದರು.
'ನಾವು ನಂಬಿರುವ ಭಗವಂತನನ್ನು ಪ್ರಾರ್ಥನೆ ಮಾಡಬೇಕು'
ಕಾಲಜ್ಞಾನದಲ್ಲಿ ಒಂದು ಮಾತಿದೆ, ಕಟ್ಟೆ ಇಲ್ಲದ ಬಾವಿ ಹುಟ್ಟಿ, ನೆಟ್ಟ ನೀ ಸುರಂಗವ ಕೊರೆದು, ಗಟ್ಟಿ ಭೂಮಿ ಬಟ್ಟ ಬಯಲಾಯಿತು. ಹಿಂದಿನ ಕಾಲದಲ್ಲಿ ನಲವತ್ತು, ಐವತ್ತು ಅಡಿ ಬಾವಿ ತೆಗೆಯುತ್ತಿದ್ದರು, ಅದನ್ನು ಜಿನುಗುವ (ಸೀಪೇಜ್ ವಾಟರ್) ಅಂಥ ಕರೆಯುತ್ತಿದ್ದರು. ಆ ನೀರು ತಂದು ಕುಡಿದರೆ ಮನುಷ್ಯನಿಗೆ ಆರೋಗ್ಯವಿತ್ತು, ಈಗ ಸಾವಿರಾರು ಅಡಿ ಕೊರೆದು ಗಡಸು ನೀರು. ಮನುಷ್ಯನಿಗೆ ಆರೋಗ್ಯ ಇಲ್ಲ, ನರಗಳ ಕೊರತೆ, ಹಲ್ಲುಗಳು ಬಿದ್ದು ಹೋದವು, ಜ್ಞಾನ ಇಲ್ಲ, ಊಟ ಮಾಡಲು ಆಗಲ್ಲ, ಬಾರಿ ಹೊಡೆತ ಬಿದ್ದಿತು ಎಂದು ತಿಳಿಸಿದರು.
ಭೂಮಿ ಕೊರೆದಿದ್ದರಿಂದ ಗಟ್ಟಿ ಭೂಮಿ ಬಟ್ಟ ಬಯಲಾಯಿತು. ನೀರು ಸ್ಥಿರವಾಗಲಿಲ್ಲ, ಅದು ಎಲ್ಲಿ ಬೇಕು ಹರಿದುಬಂತು, ಹಾಗಾಗಿ ಸಾವು-ನೋವುಗಳಾದವು. ಇದಕ್ಕೆ ಪರಿಹಾರ ಎಂದರೆ ನಾವು ನಂಬಿರುವ ಭಗವಂತನನ್ನು ಪ್ರಾರ್ಥನೆ ಮಾಡುವುದು. ಆ ಭಗವಂತನ ಪ್ರಾರ್ಥನೆಯಿಂದ ಮುಂದೆ ಆಗುವುದು ತಪ್ಪಲಿ ಎಂದು ಪ್ರಾರ್ಥನೆ ಮಾಡಲು ಸೂಚಿಸಿದರು.
ದಕ್ಷಿಣ ಭಾರತ, ಇಲ್ಲಿಯೂ ಆಗುವ ಲಕ್ಷಣ ಇದೆ. ಸಮುದ್ರಗಳು ನುಗ್ಗ್ಯಾವು, ಊರುಗಳು ಮುಳುಗ್ಯಾವು, ಅದೇ ರೀತಿ ಆಗುತ್ತೆ. ಇಲ್ಲಿಯೂ ಜನ ಜಂಗುಳಿ ಆಗುತ್ತದೆ. ಅದೆಲ್ಲಾ ಅಳಿಯಲಿ ಎಂದು ಭಗವಂತನ ಪ್ರಾರ್ಥನೆ ಮಾಡಬೇಕು ಎಂದರು.
'ಮುಖ್ಯಮಂತ್ರಿ ಆಗ್ತೀಯಾ ಎಂದು ಹೇಳಿದ್ದೆ'
ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಆಗಿರುವುದು ಒಳ್ಳೆಯದು, ಪ್ರೋತ್ಸಾಹ ಕೊಡಬೇಕು. ಯುವಕರು, ಅನುಭವಿಗಳಿಗೆ, ಅಧಿಕಾರ ಸಿಕ್ಕಿದೆ, ಅದು ಯಾವ ಜನ್ಮದ ಪುಣ್ಯ. ಅದಕ್ಕೆ ನಾವು ಹೆಚ್ಚು ಪ್ರೋತ್ಸಾಹ ಕೊಡಬೇಕು, ಆಶೀರ್ವಾದ ಮಾಡಬೇಕು. ಇವರು ಮುಖ್ಯಮಂತ್ರಿ ಆದಮೇಲೆ ಬದಲಾವಣೆ ಕಾಣುತ್ತಿದೆ. ಸರಳವಾಗಿದ್ದಾರೆ, ಸಜ್ಜನರಾಗಿದ್ದಾರೆ, ಬಡವರ ನೋಡುವ ಶಕ್ತಿ ಮೊದಲಿಗೂ ಇತ್ತು, ಮುಂದುವರೆಯಲಿ ಎಂದು ಹಾರೈಸುತ್ತೇವೆ. ನಮ್ಮ ಬಳಿ ಬಂದಾಗ ಮುಖ್ಯಮಂತ್ರಿ ಆಗ್ತೀಯಾ ಎಂದು ಹೇಳಿದ್ದೆ, ಹಾಗಾಗಿ ಅವರಿಗೆ ಆಶೀರ್ವಾದ ಕೊಡೋಣ, ಅಶುಭ ಹೇಳುವುದು ಬೇಡ ಎಂದು ಹೇಳಿದರು.


