ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ತಮ್ಮ ತಾಯಿಯ ಜನ್ಮದಿನದ ಕಾರ್ಯಕ್ರಮಕ್ಕಾಗಿ ಸರ್ಕಾರಿ ಆಸ್ಪತ್ರೆಯನ್ನು ಮೇಕಪ್ ರೂಂ ಆಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಕಲಾವಿದರು ಆಸ್ಪತ್ರೆಯಲ್ಲೇ ರೀಲ್ಸ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದ್ದು, ಮೂಲ ಸೌಕರ್ಯಗಳಿಲ್ಲದೆ ರೋಗಿಗಳು ಪರದಾಡುತ್ತಿರುವಾಗ ಶಾಸಕರ ಈ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಂಡ್ಯ: ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ನಡೆ ಇದೀಗ ಭಾರಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ, ತಮ್ಮ ತಾಯಿಯ ಜನ್ಮದಿನದ ನೆಪದಲ್ಲಿ ಶಾಸಕರು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನದ ವೇಳೆ ಸರ್ಕಾರಿ ಆಸ್ಪತ್ರೆಯನ್ನು ಅಸಭ್ಯವಾಗಿ ದುರ್ಬಳಕೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರಿ ಆಸ್ಪತ್ರೆಯೇ ಮೇಕಪ್ ರೂಮ್, ರೀಲ್ಸ್ ವೇದಿಕೆ!

ನಾಮಕಾವಸ್ಥೆಗೆ ಆಸ್ಪತ್ರೆಯಲ್ಲಿದ್ದ ಕೊಠಡಿಗಳನ್ನು ನಾಟಕ ಅಭಿನಯಿಸಲು ಬಂದಿದ್ದ ಮಹಿಳಾ ಪಾತ್ರಧಾರಿಗಳಿಗೆ 'ಮೇಕಪ್ ಕೊಠಡಿ'ಗಳನ್ನಾಗಿ ಪರಿವರ್ತಿಸಲಾಗಿತ್ತು. ಅಷ್ಟಕ್ಕೇ ನಿಲ್ಲದೆ, ಈ ಮಹಿಳಾ ಕಲಾವಿದರು ಸಾರ್ವಜನಿಕ ಆರೋಗ್ಯ ಕೇಂದ್ರದ ಆವರಣ ಮತ್ತು ಕೊಠಡಿಗಳಲ್ಲೇ ಅಸಭ್ಯವಾಗಿ ಸೊಂಟ ಬಳುಕಿಸುತ್ತಾ ಡ್ಯಾನ್ಸ್ ಮಾಡಿ, ರೀಲ್ಸ್ ಚಿತ್ರೀಕರಿಸಿದ್ದಾರೆ. ಪ್ರಸ್ತುತ ಈ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಹಾಗೂ ನೆಟ್ಟಿಗರು ಶಾಸಕರ ಕಾರ್ಯಾಚರಣೆಯ ವಿರುದ್ಧ ಕಿಡಿಕಾರುತ್ತಿದ್ದಾರೆ.

ವೈದ್ಯರಿಲ್ಲ, ಸೌಲಭ್ಯಗಳಿಲ್ಲ; ರೋಗಿಗಳಿಗೆ ನಿತ್ಯ ನರಕಯಾತನೆ

ಒಂದೆಡೆ ಶ್ರೀರಂಗಪಟ್ಟಣದ ಈ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ನೂರಾರು ಬಡ ರೋಗಿಗಳಿಗೆ ಮೂಲಭೂತ ಸೌಕರ್ಯಗಳೇ ಸಿಗುತ್ತಿಲ್ಲ. ನುರಿತ ವೈದ್ಯರು ಮತ್ತು ಅಗತ್ಯ ಸಿಬ್ಬಂದಿಯ ಅಭಾವದಿಂದಾಗಿ ರೋಗಿಗಳು ನಿತ್ಯ ಪರದಾಡುವಂತಾಗಿದೆ. ಇರುವ ವೈದ್ಯರು ಸಹ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಾರದೆ ಅಸಡ್ಡೆ ತೋರುತ್ತಿದ್ದಾರೆ ಎಂಬ ಗಂಭೀರ ಆರೋಪಗಳಿದ್ದು, ಸರಿಯಾದ ವೈದ್ಯಕೀಯ ನೆರವು ಸಿಗದೆ ಸಾರ್ವಜನಿಕರು ಆಸ್ಪತ್ರೆಯ ಆಡಳಿತ ಮಂಡಳಿಗೆ ಶಾಪ ಹಾಕುತ್ತಿದ್ದಾರೆ.

ಖಾಸಗಿ ಕಾರ್ಯಕ್ರಮಕ್ಕೆ ಅತಿ ಉತ್ಸಾಹ

ಬಡ ರೋಗಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲು, ಆಸ್ಪತ್ರೆಯ ತೊಂದರೆಗಳನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಳ್ಳದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು, ತಮ್ಮ ವೈಯಕ್ತಿಕ ಮತ್ತು ಕುಟುಂಬದ ಕಾರ್ಯಕ್ರಮಕ್ಕಾಗಿ ಸರ್ಕಾರಿ ಆಸ್ತಿಯನ್ನು ಈ ರೀತಿ ಅಜಾಗರೂಕತೆಯಿಂದ ಬಳಸಿಕೊಂಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಬಡವರ ಆರೋಗ್ಯ ರಕ್ಷಣೆ ಮಾಡಬೇಕಾದ ಆಸ್ಪತ್ರೆಯನ್ನು ಶಾಸಕರು ತಮ್ಮ ತಾಯಿಯ ಹುಟ್ಟುಹಬ್ಬದ ಮೋಜು-ಮಸ್ತಿಗೆ ಮತ್ತು ಮೇಕಪ್ ರೂಮ್ ಆಗಿ ಬಳಸಿರುವುದು ಎಷ್ಟರ ಮಟ್ಟಿಗೆ ಸರಿ? ಇದೇನಾ ನಿಮ್ಮ ಜವಾಬ್ದಾರಿಯುತ ಕಾರ್ಯವೈಖರಿ ಶಾಸಕರೇ?" ಎಂದು ಮಂಡ್ಯ ಹಾಗೂ ಶ್ರೀರಂಗಪಟ್ಟಣದ ಜನತೆ ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ. ಘಟನೆ ಸಂಬಂಧಿಸಿದಂತೆ ವೈರಲ್ ಆಗಿರುವ ವೀಡಿಯೊಗಳು ಕಾಂಗ್ರೆಸ್ ಶಾಸಕರ ನಾಯಕತ್ವದ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದ್ದು, ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿವೆ.