- Home
- Karnataka Districts
- ಧಾರವಾಡ ವೈದ್ಯ ಪತಿ ಕೊಂದ ವೈದ್ಯೆ ಪತ್ನಿ; ರಕ್ತ ಹರಿದು ಒದ್ದಾಡುತ್ತಿದ್ದ ಮಗನ ಪಕ್ಕ ಕೂತು ರೀಲ್ಸ್ ನೋಡ್ತಿದ್ದ ತಾಯಿ!
ಧಾರವಾಡ ವೈದ್ಯ ಪತಿ ಕೊಂದ ವೈದ್ಯೆ ಪತ್ನಿ; ರಕ್ತ ಹರಿದು ಒದ್ದಾಡುತ್ತಿದ್ದ ಮಗನ ಪಕ್ಕ ಕೂತು ರೀಲ್ಸ್ ನೋಡ್ತಿದ್ದ ತಾಯಿ!
ಧಾರವಾಡದಲ್ಲಿ, ವೈದ್ಯೆಯೊಬ್ಬರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಮ್ಮ ವೈದ್ಯ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಎಂಟು ವರ್ಷದ ಮಗನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್ ಆಯುಕ್ತರು ಉಸಿರಾಡುತ್ತಿದ್ದ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿದ್ಯಾಕಾಶಿ ಧಾರವಾಡದಲ್ಲಿ ನಾಗರಿಕರು ಅಕ್ಷರಶಃ ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದೆ. ಸಂಸಾರ ಅಂದಮೇಲೆ ಸಣ್ಣಪುಟ್ಟ ಜಗಳಗಳು ಸಹಜ, ಆದರೆ ಇಲ್ಲಿ ಪತ್ನಿಯೇ ರಾಕ್ಷಸಿಯಾಗಿ ಬದಲಾಗಿದ್ದಾಳೆ. ವೃತ್ತಿಯಲ್ಲಿ ವೈದ್ಯರಾಗಿರುವ ಪತಿಯನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ಪತ್ನಿ, ಹತ್ತು ವರ್ಷದ ಪುಟ್ಟ ಮಗನ ಮೇಲೂ ಪ್ರಾಣಾಂತಿಕ ದಾಳಿ ನಡೆಸಿದ್ದಾಳೆ.
ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಹೈಡ್ರಾಮಾ:
ಧಾರವಾಡದ ಕೆವಿವಿ ರಸ್ತೆಯಲ್ಲಿರುವ ಬಾರಾಕೊಟ್ರಿ ಬಡಾವಣೆಯ 'ರಂಕಾ ಕೆಸ್ಟೆಲ್ಲೋ' ಅಪಾರ್ಟ್‌ಮೆಂಟ್‌ನಲ್ಲಿ ಈ ಭೀಕರ ಘಟನೆ ನಡೆದಿದೆ. ಚಿರಾಯು ಆಸ್ಪತ್ರೆಯ ವೈದ್ಯರಾಗಿದ್ದ ಡಾ. ಕಿರಣ್ ಹೊನ್ನಣ್ಣವರ್ (45) ಹತ್ಯೆಯಾದ ದುರ್ದೈವಿ. ಇವರ ಪತ್ನಿ ಪ್ರಿಯಾಂಕಾ ಕೂಡ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು. ಏನೋ ಕಿರಿಕಿರಿ ಅಥವಾ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪ್ರಿಯಾಂಕಾ ತನ್ನ ಪತಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾಳೆ.
ಮಗುವಿನ ಮೇಲೂ ಕ್ರೂರ ದಾಳಿ:
ಪತಿಯನ್ನು ಒಂದು ಕೋಣೆಯಲ್ಲಿ ಕೊಂದ ಬಳಿಕ ಈಕೆಯ ಕ್ರೌರ್ಯ ಅಲ್ಲಿಗೆ ನಿಲ್ಲಲಿಲ್ಲ. ಮತ್ತೊಂದು ಕೋಣೆಯಲ್ಲಿದ್ದ ಎಂಟು ವರ್ಷದ ಮಗ ನೇಹಿತ್ ಮೇಲೂ ಚಾಕುವಿನಿಂದ ಮನಬಂದಂತೆ ಇರಿದಿದ್ದಾಳೆ. ರಕ್ತದ ಮಡುವಿನಲ್ಲಿ ಉಸಿರಾಡಲು ಒದ್ದಾಡುತ್ತಿದ್ದ ಮಗುವಿನ ಪಕ್ಕದಲ್ಲೇ ಕುಳಿತು ಈಕೆ ಅತ್ಯಂತ ನಿರ್ಲಜ್ಜವಾಗಿ ತನ್ನ ಮೊಬೈಲ್ ಫೋನ್ ನೋಡುತ್ತಾ ಕುಳಿತಿದ್ದಳು ಎಂದು ತಿಳಿದುಬಂದಿದೆ.
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸಮಯಪ್ರಜ್ಞೆ:
ಇನ್ನು ಅಪಾರ್ಟ್‌ಮೆಂಟ್‌ನಲ್ಲಿದ್ದ ನೆರೆಹೊರೆ ಹಾಗೂ ಇತರರು ಪೊಲೀಸರಿಗೆ ಕೊಲೆಯಾದ ಘಟನೆ ಬಗ್ಗೆ ಮಾಹಿತಿ ನೀಡಿದರೂ, ಮಗುವನ್ನು ಉಳಿಸುವ ಪ್ರಯತ್ನ ಮಾಡಿಲ್ಲ. ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾಗ, ಮಗು ನೇಹಿತ್ ಇನ್ನು ಉಸಿರಾಡುತ್ತಿರುವುದನ್ನು ಗಮನಿಸಿದರು. ತಕ್ಷಣವೇ ತಡಮಾಡದೆ ಮಗುವನ್ನು ತಮ್ಮ ಕೈಯಲ್ಲೇ ಹೊತ್ತುಕೊಂಡು ಕೆಳಗೆ ತಂದು ಆಸ್ಪತ್ರೆಗೆ ರವಾನಿಸಿದ್ದಾರೆ.
ಜೊತೆಗೆ, ನೆರೆಹೊರೆಯವರೂ ಕೂಡ ವೈದ್ಯರು ಇದ್ದೀರಿ. ಒಂದು ಮಗುವನ್ನು ಉಳಿಸುವ ಸಣ್ಣ ಪ್ರಯತ್ನವನ್ನಾದರೂ ಮಾಡಬಾರದೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಮಗು ಸಾವು ಬದುಕಿನ ಮಧ್ಯೆ ಖಾಸಗಿ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದೆ. ಪೊಲೀಸ್ ಕಮಿಷನರ್ ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಹೋದರಿಯರ ಆಕ್ರಂದನ, ಪತ್ನಿ ವಶಕ್ಕೆ:
ಘಟನಾ ಸ್ಥಳಕ್ಕೆ ಡಾ. ಕಿರಣ್ ಅವರ ಸಹೋದರಿಯರು ಧಾವಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ವಿದ್ಯಾಗಿರಿ ಮತ್ತು ಉಪನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಪತ್ನಿ ಪ್ರಿಯಾಂಕಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೊಲೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಸುಸಂಸ್ಕೃತ ಕುಟುಂಬದಲ್ಲಿ ನಡೆದ ಈ ರಕ್ತಸಿಕ್ತ ಅಧ್ಯಾಯ ಇಡೀ ಧಾರವಾಡವನ್ನು ಸ್ತಬ್ಧಗೊಳಿಸಿದೆ.

