ತನಿಖೆ ಸಂದರ್ಭದಲ್ಲಿ ಆರೋಪಿ ಕೊಲೆಯ ಹಿಂದಿನ ಕಾರಣ ರಿವೀಲ್ ಮಾಡಿದ್ದು, 10 ತಿಂಗಳ ಹಿಂದಷ್ಟೇ ಮದುವೆಯಾಗಿದ್ದನಂತೆ. ಆದರೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಬಳಿಕ ಆಕೆ ಗಂಡನ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಳು ಅಂತ ಹೇಳಿದ್ದನಂತೆ.
ಬೆಂಗಳೂರು: ಪತಿಯೇ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆಗೈದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕುಂಬಳಗೋಡು ಪೊಲೀಸರು ಆರೋಪಿ ಧೀರಜ್ ಕುಮಾರ್‌ನನ್ನು ಬಂಧಿಸಿದ್ದು, ತನಿಖೆಯ ಸಂದರ್ಭದಲ್ಲಿ ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿದೆ. ಬಿಹಾರದ ಮೂಲಕ 20 ವರ್ಷದ ರೀಮಾ ಕುಮಾರಿ ಮೃತ ದುರ್ದೈವಿಯಾಗಿದ್ದು, ಆಕೆಯ ಮೃತದೇಹ ಜುಲೈ 29ರಂದು ಬೆಡ್ ಶೀಟ್ ನಲ್ಲಿ ಮೂಟೆಕಟ್ಟಿದ ಸ್ಥಿತಿಯಲ್ಲಿ ಮನೆಯ ಬಾತ್‌ರೂಮ್‌ನಲ್ಲಿ ಪತ್ತೆಯಾಗಿತ್ತು.
ಪ್ರೀತಿ ಮದುವೆಯಾಗಿದ್ದ ದಂಪತಿ
ಈ ಬಗ್ಗೆ ಮಾತನಾಡಿರುವ ನೈಋತ್ಯ ವಿಭಾಗ ಡಿಸಿಪಿ ಅನಿತಾ ಹದ್ದಣ್ಣವರ್, ಕುಂಬಳಗೋಡು ಗೇರುಪಾಳ್ಯದಲ್ಲಿ 29ರಂದು ಮಹಿಳೆ ಮೃತದೇಹ ಸಿಕ್ಕಿತ್ತು. ಮನೆಯೊಂದ ನಾಲ್ಕನೇ ಮಹಡಿಯಲ್ಲಿ ದಂಪತಿ ವಾಸವಿದ್ದರು. ಪತ್ನಿ ಕೊಂದು ಪತಿ ಎಸ್ಕೇಪ್ ಆಗಿದ್ದ. ಧೀರಜ್ ಮತ್ತು ರೀಮಾ 10 ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಬಿಹಾರದಿಂದ ಪ್ರೀತಿಸಿ ಬೆಂಗಳೂರಿಗೆ ಬಂದು ಮದುವೆ ಮಾಡಿಕೊಂಡು ವಾಸವಿದ್ದರು. ಧೀರಜ್ ಕೂಲಿ ಕೆಲಸ ಮಾಡಿಕೊಂಡಿದ್ದ, ಆಕೆ ಕೂಡ ಕೂಲಿ ಕೆಲಸ ಮಾಡುತ್ತಿದ್ದರು. ಗಂಡನೇ ಹೆಂಡತಿಯನ್ನು ಕೊಲೆ ಮಾಡಿ ಪರಾರಿ ಆಗಿದ್ದ. ಒಂದು ತಂಡ ರಚನೆ ಮಾಡಿ ಬಿಹಾರಕ್ಕೆ ಕಳುಹಿಸಿಕೊಡಲಾಗಿತ್ತು. ಮದುವೆ ಬಳಿಕ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿತ್ತು. ಕೊಲೆ ದಿನ ಕೂಡ ಗಲಾಟೆ ಆಗಿದೆ, ಈ ವೇಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದರು.

ಆರೋಪಿ ಬಂಧಿಸಿದ್ದೇ ರೋಚಕ!
ಪ್ರಕರಣದಲ್ಲಿ ಆರೋಪಿ ಬಂಧನಕ್ಕೆ ತೆರಳಿದ್ದ ಪೊಲೀಸರಿಗೆ ದೊಡ್ಡ ಸವಾಲು ಎದುರಾಗಿತ್ತು. ಆರೋಪಿ ಬಿಹಾರದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಅವಿತು ಕೊಂಡಿದ್ದನಂತೆ. ಅಲ್ಲಿಗೆ ನೇರ ನೇರ ಪೊಲೀಸರು ಹೋಗೋದಕ್ಕೆ ಸಾಧ್ಯವಾಗುತ್ತಿರಲಿಲ್ಲವಂತೆ. ಪೊಲೀಸರು ನೇರ ತೆರಳಿ ಕಾರ್ಯಾಚರಣೆ ನಡೆಸಲು ನಕ್ಸಲರು ದಾಳಿ ಮಾಡುವ ಸಾಧ್ಯತೆ ಇತ್ತಂತೆ. ಹೀಗಾಗಿ ಬಿಹಾರ ಪೊಲೀಸರ ಸಹಾಯ ಪಡೆದುಕೊಂಡಿದ್ದ ಬೆಂಗಳೂರು ಕುಂಬಳಗೋಡು ಪೊಲೀಸರು, ಬಿಹಾರದ ನಕ್ಸಲ್ ಪೀಡಿತ ಪ್ರದೇಶ ಕೊಥಿಯ ಎಂಬ ಪ್ರದೇಶದಲ್ಲಿ ಪೂರ್ತಿ ವೆಪನ್ ಗಳ ಸಮೇತ ತೆರಳಿ ಆರೋಪಿಯನ್ನು ಬಂಧಿಸಿದ್ದರಂತೆ.
ಜಗಳ ಶುರುವಾಗಿದ್ದು ಎಲ್ಲಿ?
ಪ್ರೀತಿ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದ ದಂಪತಿ ಕೆಲಸ ಸಮಯ ಸಂತೋಷದಿಂದಲೇ ಸಂಸಾರ ನಡೆಸಿದ್ದರಂತೆ. ಆದರೆ ಕೆಲವು ದಿನಗಳ ಬಳಿಕ ರೀಮಾ ಬಿಡುವಿನ ಸಮಯ ಸಿಕ್ಕರೆ ಸಾಕು ರೀಲ್ಸ್ ನೋಡಿಕೊಂಡು ಕಾಲ ಕಳೆಯುತ್ತಿದ್ದಳಂತೆ. ಆ ಬಳಿಕ ಮನೆಯಲ್ಲಿ ಸರಿಯಾದ ಸಮಯಕ್ಕೆ ಅಡುಗೆ ಮಾಡದಿರೋದು, ಮನೆಯ ಎಲ್ಲಾ ಕೆಲಸ ಬಾಕಿ ಉಳಿಯುತಿತ್ತಂತೆ. ಇದರೊಂದಿಗೆ ದಂಪತಿ ನಡುವೆ ಜಗಳ ಶುರುವಾಗಿತ್ತಂತೆ. ರೀಲ್ಸ್ ನೋಡುದು ಕಡಿಮೆ ಮಾಡಿ ಕೆಲಸ ಕಡೆ ಗಮನಕೊಡಲು ಧೀರಜ್ ಹೇಳ್ತಿದ್ದನಂತೆ. ಆದರೆ ರೀಮಾ ವರ್ತನೆಯಲ್ಲಿ ಯಾವುದೇ ಬದಲಾವಣೆ ಬಂದಿರಲಿಲ್ಲವಂತೆ. ಡೆಕ್ಕನ್ ಹೆರಾಲ್ಡ್ ವರದಿ ಮಾಡಿರುವಂತೆ, ಕೊಲೆ ನಡೆದ ಜುಲೈ 25ರಂದು ಕೂಡ, ಕೆಲಸಕ್ಕೆ ಹೋಗಿ ವಾಪಸ್ ಬಂದಿದ್ದ ಧೀರಜ್ ಮನೆಯಲ್ಲಿ ಅಡುಗೆ ಮಾಡದಿರೋದನ್ನು ನೋಡಿ, ರೀಮಾ ಜೊತೆ ಜಗಳ ಶುರು ಮಾಡಿದ್ದನಂತೆ. ಈ ವೇಳೆ ಕೋಪದಲ್ಲಿ ಆರೋಪಿ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಆ ಬಳಿಕ ಮೃತದೇಹವನ್ನು ಮನೆಯಲ್ಲಿದ್ದ ಹಾಸಿಗೆಯಲ್ಲಿ ಮೂಟೆ ಕಟ್ಟಿ, ಮನೆಗೆ ಬೀಗ ಹಾಕಿ ಬಿಹಾರಕ್ಕೆ ಎಸ್ಕೇಪ್ ಆಗಿದ್ದ ಎಂದು ಆರೋಪಿಸಲಾಗಿದೆ.


