ತುಮಕೂರಿನ ಮಧುಗಿರಿಯಲ್ಲಿ ಪೌತಿ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ನಾಗೇಶ್ ಅವರನ್ನು ಲೋಕಾಯುಕ್ತರು ಬಂಧಿಸಿದ್ದಾರೆ. ಅದೇ ರೀತಿ ಕಲಬುರಗಿಯಲ್ಲಿ ಜಮೀನು ಮ್ಯೂಟೇಶನ್‌ಗಾಗಿ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಿಗ ರಮೇಶ್ ಕೂಡ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ತುಮಕೂರು: ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಮಧುಗಿರಿ ತಾಲೂಕು ಕಚೇರಿ ಕಂದಾಯ ನಿರೀಕ್ಷಕ ನಾಗೇಶ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 30 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಆರ್‌.ಐ ನಾಗೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪೌತಿ ಖಾತೆ ಮಾಡಿಸಲು ಒಂದು ಲಕ್ಷ ಲಂಚಕ್ಕೆ ಬೇಡಿಕೆ

ಮುದ್ದೇನಹಳ್ಳಿ ಗ್ರಾಮದ ರೇಣುಕೇಶ್ ಪೌತಿ ಖಾತೆ ಮಾಡಿಸಲು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪೌತಿ ಖಾತೆ ಮಾಡಿಕೊಡಲು ಮಧುಗಿರಿ ಕಸಬಾ ಕಂದಾಯ ನಿರೀಕ್ಷಕ ನಾಗೇಶ್ ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಮೊದಲ ಕಂತಾಗಿ 35 ಸಾವಿರ ರೂಪಾಯಿ ನೀಡಿದ್ದರಂತೆ. ಎರಡನೇ ಕಂತಿನ 30 ಸಾವಿರ ರೂಪಾಯಿ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತರಿಗೆ ಲಾಕ್ ಆಗಿದ್ದಾರೆ.

ಲೋಕಾಯುಕ್ತ ಎಸ್‌ಪಿ ಮಲ್ಲೇಶ್ ನೇತೃತ್ವದಲ್ಲಿ ಪಿಐಗಳಾದ ರಾಜು, ನಿರ್ಮಲಾದೇವಿ ಹಾಗೂ ಶಾಂತಿನಾಥ್ ಹೊನ್ನೂರು ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಆರ್‌.ಐ ನಾಗೇಶ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಲಬುರಗಿಯಲ್ಲಿ ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ

ಇತ್ತ ಜಮೀನು ಮ್ಯೂಟೇಶನ್‌ಗಾಗಿ 10 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ರೆಡ್ ಹ್ಯಾಂಡ್ ಆಗಿ ಗ್ರಾಮ ಲೆಕ್ಕಿಗ ರಮೇಶ್ ನನ್ನು ಬಂಧಿಸಿದ್ದಾರೆ. ಖಾಸಗಿ ಸಹಾಯಕ ಸಾಗರ ಎನ್ನುವಾತನ ಮೂಲಕ 10 ಸಾವಿರ ರೂಪಾಯಿ ಲಂಚವನ್ನು ಗ್ರಾಮ ಲೆಕ್ಕಿಗ ಸ್ವೀಕರಿಸಿದ್ದ. ಕಲಬುರಗಿ ನಗರದ ಜಿಲ್ಲಾ ಪಂಚಾಯತ ಆವರಣದಲ್ಲಿರುವ ಕಂದಾಯ ಇಲಾಖೆ ಕಚೇರಿಯಲ್ಲಿಯೇ ಲಂಚ ಸ್ವೀಕಾರ ಮಾಡಿದ ಸಂದರ್ಭದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ರೈತ ಸತೀಶ್ ಎನ್ನುವವರ ಜಮೀನು ಮ್ಯೂಟೆಶನ್ ಗಾಗಿ ಬಂದ ಸಂದರ್ಭದಲ್ಲಿ 10 ಸಾವಿರ ರೂಪಾಯಿ ಲಂಚಕ್ಕೆ ಗ್ರಾಮ ಲೆಕ್ಕಿಗ ರಮೇಶ ಬೇಡಿಕೆ ಇಟ್ಟಿದ್ದನಂತೆ. ತನ್ನ ಖಾಸಗಿ ಸಹಾಯಕ ಸಾಗರನ ಕೈಗೆ 10 ಸಾವಿರ ಕೊಡಿ ಕೆಲಸ ಮಾಡಿಕೊಡುವೆ ಎಂದಿದ್ದರಂತೆ. ಈ ಸಂಬಂಧ ರೈತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಗ್ರಾಮ ಲೆಕ್ಕಿಗ ರಮೇಶನನ್ನು ರೆಡ್‌ಹ್ಯಾಂಡ್‌ ಆಗಿ ಅರೆಸ್ಟ್ ಮಾಡಿ ಲೋಕಾಯುಕ್ತರು ಕರೆದೊಯ್ದರು. ಲೋಕಾಯುಕ್ತ ಇನ್ಸ್ಪೆಕ್ಟರ್ ಅರುಣ್ ಮುರಗುಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.