ಕರ್ನಾಟಕ ಪೊಲೀಸ್ ಸಿಬ್ಬಂದಿ ಸಿಗುವ ರಜೆ ಎಷ್ಟು? ಹೇಗೆ ಸಾಗುಗುತ್ತದೆ ಪೇದೆಗಳ ಜೀವನ ಹೇಗಿದೆ? ದಿನದಲ್ಲಿ ಅವರಿಗೆ ಎದುರಾಗುವ ಸಮಯವೆಷ್ಟು? ಈ ಕುರಿತು ಡಿಟೇಲ್ಡ್‌ ಇನ್‌ಸೈಡ್‌ ಸ್ಟೋರಿ ನೋಡಿಕೊಂಡು ಬರೋಣ ಬನ್ನಿ.

ಬೆಳಿಗ್ಗೆ ಆರು ಗಂಟೆಗೆ ಅಲಾರಾಂ ಬಡಿಯುವ ಮೊದಲೇ ಆತನ ಕಣ್ಣುಗಳು ತೆರೆದುಕೊಳ್ಳುತ್ತವೆ. ತರಾತುರಿಯಲ್ಲಿ ಖಾಕಿ ಯೂನಿಫಾರ್ಮ್ ತೊಟ್ಟು, ಬೂಟುಗಳ ಲೇಸ್ ಕಟ್ಟುವಾಗ ಎದುರಿಗೇ ನಿಂತಿದ್ದ ಮಗಳು ಕೇಳುತ್ತಾಳೆ, ಅಪ್ಪಾ, ಇವತ್ತು ನನ್ನ ಬರ್ತ್‌ಡೇ, ಸಂಜೆ ಬೇಗ ಬರ್ತೀರಾ?. ಆ ಕಾನ್‌ಸ್ಟೆಬಲ್ ಮುಗುಳ್ನಕ್ಕು ಮಗಳ ತಲೆ ಸೀರುತ್ತಾರೆ, ಆದರೆ ಅವರ ಮನಸ್ಸಿಗೆ ಗೊತ್ತು, ಇವತ್ತು ತಡರಾತ್ರಿಯ ಮುಂಚೆ ಮನೆಗೆ ಮರಳಲು ಸಾಧ್ಯವೇ ಇಲ್ಲ ಎಂದು. ಇದು ಕೇವಲ ಒಬ್ಬ ಪೊಲೀಸ್ ಸಿಬ್ಬಂದಿಯ ಕಥೆಯಲ್ಲ, ಇದು ಕರ್ನಾಟಕದಾದ್ಯಂತ ನಿತ್ಯ ಹಗಲಿರುಳು ದುಡಿಯುವ ಸಾವಿರಾರು ಪೊಲೀಸರ ಬದುಕಿನ ಕಟು ವಾಸ್ತವ.

ಇಲ್ಲಿ ಮಾನವೀಯ ಆದೇಶವೇನು?

ಕರ್ನಾಟಕ ಪೊಲೀಸ್ ಇಲಾಖೆಯ ನಿಯಮಾವಳಿಗಳ ಪುಟಗಳನ್ನು ತಿರುವಿ ಹಾಕಿದರೆ, ವ್ಯವಸ್ಥೆ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ ಪ್ರತಿಯೊಬ್ಬ ಸಿಬ್ಬಂದಿಗೆ ವರ್ಷಕ್ಕೆ 15 ದಿನಗಳ ಸಾಂದರ್ಭಿಕ ರಜೆ (CL) ಹಾಗೂ 30 ದಿನಗಳ ಗಳಿಕೆ ರಜೆ (EL) ಇರುತ್ತದೆ. ಅಷ್ಟೇ ಅಲ್ಲ, ಇಲಾಖೆಯು ಸಿಬ್ಬಂದಿಯ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಅವರ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂದು ಕಡ್ಡಾಯವಾಗಿ ಒಂದು ದಿನದ ವಿಶೇಷ ರಜೆ ನೀಡುವ ಮಾನವೀಯ ಆದೇಶವನ್ನೂ ಹೊರಡಿಸಿದೆ. ಹಬ್ಬ ಹರಿದಿನಗಳಲ್ಲೂ ವಿಶ್ರಾಂತಿ ಇಲ್ಲದೆ ದುಡಿಯುವ ಸಿಬ್ಬಂದಿಗೆ ಹೆಚ್ಚುವರಿ ರಜಾ ದಿನಗಳ ವೇತನದ (Holiday Pay) ಸೌಲಭ್ಯವೂ ಕಾಗದದ ಮೇಲಿದೆ.

ಹೇಗಿದೆ ವ್ಯವಸ್ಥೆಯಲ್ಲಿನ ವಾಸ್ತವ?

ಆದರೆ, ಈ ನಿಯಮಗಳ ಗಣಿತಕ್ಕೂ ಪೊಲೀಸ್ ಠಾಣೆಗಳ ಒಳಗಿನ ಹಕೀಕತ್ (ವಾಸ್ತವ) ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಕಾಗದದ ಮೇಲಿರುವ ರಜೆಗಳು ಸಿಬ್ಬಂದಿಯ ಕೈಸೇರುವುದು ಅಷ್ಟು ಸುಲಭವಲ್ಲ. ಠಾಣೆಗಳಲ್ಲಿ ಮಂಜೂರಾದ ಹುದ್ದೆಗಳಿಗಿಂತ ಸಿಬ್ಬಂದಿಯ ಸಂಖ್ಯೆ ಶೇಕಡಾ 30 ಕ್ಕಿಂತಲೂ ಕಡಿಮೆ ಇದೆ. ಈ ತೀವ್ರ ಸಿಬ್ಬಂದಿ ಕೊರತೆಯಿಂದಾಗಿ, ಒಬ್ಬ ಪೊಲೀಸ್ ಅಧಿಕಾರಿ ಅಧಿಕೃತವಾಗಿ ರಜೆ ಕೇಳಲು ಹೋದರೆ, ಠಾಣೆಯಲ್ಲಿ ಕೆಲಸ ನೋಡಿಕೊಳ್ಳುವವರು ಯಾರು? ಎಂಬ ಪ್ರಶ್ನೆ ಎದುರಾಗುತ್ತದೆ. ಸ್ವಂತ ತಂಗಿಯ ಮದುವೆಗೋ ಅಥವಾ ಹೆತ್ತವರ ಅನಾರೋಗ್ಯಕ್ಕೋ ರಜೆ ಮಂಜೂರು ಮಾಡಿಸಿಕೊಳ್ಳಲು ಹಿರಿಯ ಅಧಿಕಾರಿಗಳ ಮುಂದೆ ಕಾಡಿ ಬೇಡಬೇಕಾದ ಪರಿಸ್ಥಿತಿ ಇದೆ. ಚುನಾವಣೆ, ವಿವಿಐಪಿ ಬಂದೋಬಸ್ತ್, ಹಬ್ಬಗಳ ಮೆರವಣಿಗೆ ಅಥವಾ ಸಣ್ಣದೊಂದು ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾದರೂ ಸಾಕು, ಸಿಬ್ಬಂದಿಯ ವಾರದ ರಜೆ ಸೇರಿದಂತೆ ಎಲ್ಲಾ ರಜೆಗಳೂ ತಕ್ಷಣವೇ ರದ್ದಾಗುತ್ತವೆ.

ದಿನನಿತ್ಯದ ಲೆಕ್ಕಾಚಾರ ಬೀಕರ!

ಇನ್ನು ಪೊಲೀಸರ ದಿನನಿತ್ಯದ ಕೆಲಸದ ಅವಧಿಯ ಲೆಕ್ಕಾಚಾರವಂತೂ ಅತ್ಯಂತ ಭೀಕರವಾಗಿದೆ. ಕಾರ್ಪೊರೇಟ್ ಜಗತ್ತಿನಲ್ಲಿ ಎಂಟು ಗಂಟೆಗಳ ಶಿಫ್ಟ್ ನಿಯಮವಿದ್ದರೆ, ಖಾಕಿ ಲೋಕದಲ್ಲಿ ಅದು ಕನಿಷ್ಠ 12 ರಿಂದ 14 ಗಂಟೆಗಳವರೆಗೆ ವಿಸ್ತರಣೆಯಾಗುತ್ತದೆ. ಇಲಾಖೆಯಲ್ಲಿ ಮೂರು ಶಿಫ್ಟ್‌ಗಳ ಯೋಜನೆಯ ಪ್ರಸ್ತಾವನೆ ಇದ್ದರೂ, ಅದು ಕೇವಲ ಫೈಲುಗಳಲ್ಲೇ ಉಳಿದುಹೋಗಿದೆ. ಬೆಳಿಗ್ಗೆ ಎಂಟು ಗಂಟೆಗೆ ಗಸ್ತಿಗೆ ಇಳಿಯುವ ಕಾನ್‌ಸ್ಟೆಬಲ್, ಸಂಜೆ ಠಾಣೆಗೆ ಮರಳಿದ ತಕ್ಷಣ ವಿಶ್ರಮಿಸುವಂತಿಲ್ಲ. ಅದರ ನಂತರ ಸ್ಟೇಷನ್ ರೈಟರ್ ಕೆಲಸ, ಕೋರ್ಟ್ ಸಮನ್ಸ್ ಜಾರಿ, ಅಪರಾಧ ತನಿಖೆಯ ಬೆನ್ನಟ್ಟುವಿಕೆ, ಮತ್ತು ತಡರಾತ್ರಿಯ ನೈಟ್ ರೌಂಡ್ಸ್ ಹೀಗೆ ಕೆಲಸಗಳು ಸರಪಳಿಯಂತೆ ಮುಂದುವರಿಯುತ್ತವೆ. ತನಿಖಾಧಿಕಾರಿಗಳ ಕಥೆಯಂತೂ ಇನ್ನೂ ಕಷ್ಟ. ಅವರು 12 ಗಂಟೆಯ ಕ್ಷೇತ್ರ ಕರ್ತವ್ಯ ಮುಗಿಸಿದ ಮೇಲೂ ಕೇಸ್ ಡೈರಿ ಬರೆಯಲು ಮತ್ತು ಕೋರ್ಟ್‌ಗಳಿಗೆ ಅಲೆಯಲು ಹೆಚ್ಚುವರಿ 3 ಗಂಟೆಗಳನ್ನು ವಿನಿಯೋಗಿಸಬೇಕಾಗುತ್ತದೆ.

ಮದುಮೇಹಕ್ಕೆ ತುತ್ತಾಗತ್ತಾರಾ ಸಿಬ್ಬಂದಿ!

ನಿರಂತರ 14 ಗಂಟೆಗಳ ದೈಹಿಕ ಶ್ರಮ ಮತ್ತು ಕೌಟುಂಬಿಕ ಜೀವನದಿಂದ ದೂರವಿರುವ ಮಾನಸಿಕ ಒತ್ತಡವು ಪೊಲೀಸರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರವು ಈ ಹಿಂದೆ ಇಂತಹ ಕಠಿಣ ಕೆಲಸದ ಅವಧಿಯಿಂದಾಗಿ ಸಿಬ್ಬಂದಿಯಲ್ಲಿ ಬಿಪಿ, ಮಧುಮೇಹ ಮತ್ತು ಹೃದ್ರೋಗದಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿತ್ತು. ಖಾಕಿ ಯೂನಿಫಾರ್ಮ್ ಧರಿಸಿದ ತಕ್ಷಣ ಅವರೊಳಗಿನ ಮನುಷ್ಯ ಮರೆಯಾಗುವುದಿಲ್ಲ. ಸಮಾಜದ ಶಾಂತಿ ಮತ್ತು ಸುರಕ್ಷತೆಯನ್ನು ಕಾಯುವ ಈ ರಕ್ಷಕರಿಗೆ ಕೇವಲ ಕಾಗದದ ಮೇಲಿನ ನಿಯಮಗಳಲ್ಲ, ಬದಲಿಗೆ ಪ್ರಾಯೋಗಿಕವಾಗಿ ಸಿಗುವ ವಾರದ ರಜೆ, ನಿಗದಿತ ಕೆಲಸದ ಅವಧಿ ಮತ್ತು ಗೌರವಯುತ ವಿಶ್ರಾಂತಿಯ ಅಗತ್ಯವಿದೆ. ಅಂದಾಗ ಮಾತ್ರ ಇಲಾಖೆಯಲ್ಲಿ ಮಾನಸಿಕ ಒತ್ತಡ ಮುಕ್ತ ಮತ್ತು ಆರೋಗ್ಯವಂತ ಪೊಲೀಸ್ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯ.