ಮಳೆ ಕೊರತೆ, ಬಿಸಿಲ ಬೇಗೆ ಹೆಚ್ಚಾಗುತ್ತಿರುವ ನಡುವೆ ದಿಢೀರ್ ಕರ್ನಾಟಕ ಕೆಲ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇದೇ ವೇಳೆ ಹವಾಮಾನ ಇಲಾಖೆ ಕೆಲ ಜಿಲ್ಲೆಗಳಿಗೂ ಮಳೆ ಎಚ್ಚರಿಕೆ ನೀಡಿದೆ. ಇದೀಗ ರೈತರಲ್ಲಿ ಸಣ್ಣ ಅಶಾವಾದ ಮೂಡಿದೆ.
ಬೆಂಗಳೂರು (ಸೆ.19) ಕರ್ನಾಟಕ ಸೇರಿದಂತೆ ಭಾರತ ಎಲ್‌ನಿನೋ ಪರಿಣಾಮಕ್ಕೆ ತುತ್ತಾಗಿದೆ. ಹೀಗಾಗಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಜಲಾಶಗಳು ಭರ್ತಿಯಾಗಿಲ್ಲ. ಈಗಲೇ ನೀರಿನ ಕೊರತೆ ಎದುರಾಗಿದೆ. ಇನ್ನು ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಇತ್ತ ದಿನದಿಂದ ದಿನಕ್ಕೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಇದರ ನಡುವೆ ಕರ್ನಾಟಕ ಕೆಲ ಭಾಗದಲ್ಲಿ ಇಂದು ಭಾರಿ ಮಳೆಯಾಗಿದೆ. ಪ್ರಮುಖವಾಗಿ ಬಿಸಿಲಿನಿಂದ ಒಣಗಿದ್ದ ಯಾದಗಿರಿಯಲ್ಲಿ ವರುಣನ ಅಬ್ಬರ ಜೋರಾಗಿದೆ.
ಮೂರು ಗಂಟೆ ಸುರಿದ ಮಳೆ
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕೊಟಗೇರಾ ಭಾಗದಲ್ಲಿ ಭಾರಿ ಮಳೆಯಾಗಿದೆ. ಕಳೆದ ಮೂರು ಗಂಟೆಗಳಿಂದ ಮಳೆ ಸುರಿದಿದೆ. ಮುಂಗಾರು ಮಳೆ ಕೈಕೊಟ್ಟಿದ್ದ ಪರಿಣಾಮ ಯಾದಗಿರಿ ಜಿಲ್ಲೆಯ ಬರಪೀಡಿತ ಜಿಲ್ಲೆಯಾಗಿದೆ. ರೈತರು ಕಂಗಾಲಾಗಿದ್ದರು. ಇದರ ನಡುವೆ ಇಂದು ಸುರಿದ ಭಾರಿ ಮಳೆಯಿಂದ ರೈತರಲ್ಲಿ ಮಂದಹಾಸ ಮೂಡಿದೆ. ಭಾರಿ ಮಳೆಯಿಂದ ಕೊಟಗೇರಾ ಭಾಗದ ಭೂಮಿ ತಂಪಾಗಿದೆ. ಕೆಲ ದಿನಗಳ ಕಾಲ ಇದೇ ರೀತಿ ಮಳೆ ಸುರಿದರೆ ಯಾದಗಿರಿಯ ಕೆಲ ತಾಲೂಕುಗಳಲ್ಲಿನ ಆತಂಕ ಪರಿಸ್ಥಿತಿ ದೂರವಾಗಲಿದೆ ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೆ.20ಕ್ಕೆ ಕರಾವಳಿ ಭಾಗದಲ್ಲಿ ಭಾರಿ ಮಳೆ ಎಚ್ಚರಿಕೆ
ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ 20ರಂದು ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಸೆಪ್ಟೆಂಬರ್ 25ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನು ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ಕಡಿಮೆ
ಬೆಂಗಳೂರಿನ ಹಲೆವೆಡೆ ಮೋಡ ಕವಿದ ವಾತಾವರಣವಿದೆ. ಸಂಜೆ ಅಥವಾ ರಾತ್ರಿ ವೇಳೆ ತುಂತುರು ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನೆರಡು ದಿನ ಮೋಡ ಕವಿದ ವಾತಾವರಣ ಇರಲಿದೆ. ಜೊತೆಗೆ ಕೆಲ ಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.


