ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ, ಕುಡಿದ ಅಮಲಿನಲ್ಲಿದ್ದ ಬೀರೇಶ್ ಚಿನ್ನಿಕಟ್ಟಿ ಎಂಬ 31 ವರ್ಷದ ಯುವಕ ತುಂಗಭದ್ರಾ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಸ್ನೇಹಿತ ವಿಡಿಯೋ ಮಾಡುತ್ತಿರುವಾಗಲೇ ಈ ದುರ್ಘಟನೆ ನಡೆದಿದ್ದು, ಇದು ಆತ್ಮ೧ಹತ್ಯೆಯೋ ಅಥವಾ ಮದ್ಯದ ಅಮಲಿನ ಹುಚ್ಚಾಟವೋ ಎಂಬ ಅನುಮಾನ ಮೂಡಿದೆ.
ಹಾವೇರಿ(ಸೆ.1): ಕುಡಿದ ಅಮಲಿನಲ್ಲಿ ಯುವಕನೊಬ್ಬ ತುಂಗಭದ್ರಾ ನದಿಗೆ ಹಾರಿ ಜೀವ ಕಳೆದುಕೊಂಡ ದುರ್ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಲವೆತ್ತು ಗ್ರಾಮದಲ್ಲಿ ನಡೆದಿದೆ. 31 ವರ್ಷದ ಬೀರೇಶ್ ಚಿನ್ನಿಕಟ್ಟಿ, ಜೀವ ಕಳೆದುಕೊಂಡ ಯುವಕ.
ಹಾವೇರಿ ತುಂಗಭದ್ರ ನದಿಗೆ ಹಾರಿ ಜೀವ ಕಳೆದುಕೊಂಡ ಯುವಕ
ಬೀರೇಶ್ ಮದ್ಯ ಸೇವಿಸಿ ತುಂಗಭದ್ರಾ ನದಿ ತೀರಕ್ಕೆ ಬಂದಿದ್ದಾನೆ. ವಿಡಿಯೋದಲ್ಲಿ ತುಗಾಡುತ್ತಿರುವುದು ನೋಡಿದರೆ ಹೆಚ್ಚೇ ಪಾನಮತ್ತನಾಗಿರುವುದು ಕಂಡುಬಂದಿದೆ. ಇತ್ತ ಇನ್ನೊಂದು ದಡದಲ್ಲಿ ಸ್ನೇಹಿತ ವಿಡಿಯೋ ಮಾಡುತ್ತಿದ್ದಾನೆ. ನೋಡುನೋಡುತ್ತಿದ್ದಂತೆ ನದಿಗೆ ಹಾರಿದ ಯುವಕ ನೀರಿನ ರಭಸಕ್ಕೆ ಕ್ಷಣ ಕಾಲ ಕಣ್ಮರೆಯಾಗಿದ್ದಾನೆ. ಆತಂಕದಿಂದ ಸ್ನೇಹಿತ ಹುಡುಕಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಆತ್ಮ೧ಹತ್ಯೆಯೋ ಮದ್ಯದ ಅಮಲಿನಲ್ಲಾದ ಹುಚ್ಚಾಟವೋ?
ಬೀರೇಶ್ ನದಿಗೆ ಹಾರಿ ಜೀವ ಕಳೆದುಕೊಂಡ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಕುಡಿದು ನದಿ ತೀರಕ್ಕೆ ಬಂದಿದ್ದೇಕೆ ಇತ್ತ ಸ್ನೇಹಿತ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿರುವಾಗಲೇ ನದಿಗೆ ಹಾರಿರುವುದು ಸಂಶಯ ಹುಟ್ಟಿಸಿದೆ. ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಿದ್ದಾನೆಂದು ಪೋಸ್ ಕೊಡಲು ಜಿಗಿದನೆ? ಅಥವಾ ನಿಜವಾಗಲೂ ಬೇರೆ ಯಾವುದೋ ಕಾರಣಗಳಿಂದ ಜೀವ ಕಳೆದುಕೊಂಡನೋ? ಯುವಕನ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಕುಮಾರಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.


