ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವುದು ಎಷ್ಟು ಕಷ್ಟ ಎಂದು ಮಹಿಳೆಯೊಬ್ಬರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಕೇವಲ ಆಕೆಯ ನೋವು ಮಾತ್ರವಲ್ಲ. ಬಾಡಿಗೆ ಮನೆಯಲ್ಲಿರುವ ಪ್ರತಿಯೊಬ್ಬರ ನೋವಿನ ನಿವೇದನೆ ಆಗಿದೆ. ಅಷ್ಟಕ್ಕೂ ಆ ಮಹಿಳೆಗೆ ಆದ ಅನುಭವ ಏನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸ್ವಂತ ಮನೆ ಕಟ್ಟುವುದು ಬಿಡಿ, ಬಜೆಟ್‌ಗೆ ತಕ್ಕಂಥ ಒಂದು ಬಾಡಿಗೆ ಮನೆ ಹಡುಕುವುದು ಕಷ್ಟದ ಕೆಲಸ. ಆ ನೋವು ಒಂದು ಮನೆ ಖಾಲಿ ಮಾಡಿ ಇನ್ನೊಂದು ಮನೆ ಹುಡುಕುವಾಗಲೇ ಗೊತ್ತಾಗೋದು. ಬೆಳೆಯುತ್ತಿರುವ ಐಟಿ ಹಾವಳಿಯಿಂದಾಗಿ ಮನೆ ಮಾಲೀಕರು ಬಾಯಿಗೆ ಬಂದಹಾಗೆ ಬಾಡಿಗೆ ರೇಟ್ ಹೇಳುತ್ತಿದ್ದಾರೆ..
ಅಂತೆಯೇ ನಗರದಲ್ಲಿ ಕಳೆದ ಮೂರು ವಾರಗಳಿಂದ ಮನೆ ಹುಡುಕಿ ಸುಸ್ತಾಗಿರುವ ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೋವುಗಳನ್ನ ಹಂಚಿಕೊಂಡಿದ್ದಾರೆ. ಅವರ ನೋವಿನ ಕತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಬೆಂಗಳೂರಿನಲ್ಲಿ ದೇವರನ್ನಾದರೂ ಹುಡುಕಬಹುದು.. ಆದರೆ ಸರಿಯಾದ ಬಾಡಿಗೆ ಮನೆಯನ್ನಲ್ಲ! ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಅನಾಮಿ ಮಹಿಳೆ.. ಪತಿ ಜೊತೆ ಸೇರಿ ಮೂರು ವಾರಗಳಿಂದ ಮನೆ ಹುಡುಕುತ್ತ ಇದ್ದಾರಂತೆ. ಇಬ್ಬರೂ 'ವರ್ಕ್ ಫ್ರಮ್ ಹೋಮ್' ಮಾಡುತ್ತಿರುವುದರಿಂದ ಇದೇ ಸ್ಥಳದಲ್ಲಿ ಮನೆ ಇರಬೇಕು ಅನ್ನೋದು ಕಡ್ಡಾಯವಲ್ಲ. ಆದರೆ ವಿಶಾಲವಾದ ಆಯ್ಕೆಗಳಿದ್ದರೂ, ಬ್ರೋಕರ್ ಸಹಾಯ ಪಡೆದರೂ ಸೂಕ್ತವಾದ ಮನೆ ಮಾತ್ರ ಸಿಗಲಿಲ್ಲ. ಈ ಮನೆ ಹುಡುಕಾಟದ ಓಡಾಟದಲ್ಲಿ ನಗರ ಎಲ್ಲಾ ರಸ್ತೆಗಳು, ಗಲ್ಲಿಗಲ್ಲಿಗಳು ಸಂಪೂರ್ಣ ಪರಿಚಯವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
2BHK ಮನೆಗೆ ₹60,000 ಬಾಡಿಗೆ
ಇನ್ನು ಈ ದಂಪತಿಗೆ ದೊಡ್ಡ ಆಘಾತ ಆಗಿದ್ದು ಏನೆಂದರೆ.. ಬಾಡಿಗೆ ಮತ್ತು Deposit ಪ್ರಮಾಣ. ಅವರು ನೋಡಿದ ಸಾಮಾನ್ಯ 2BHK ಫ್ಲಾಟ್ ಒಂದಕ್ಕೆ ಮಾಲೀಕರು ತಿಂಗಳಿಗೆ ಬರೋಬ್ಬರಿ 60,000 ರೂಪಾಯಿ ಬಾಡಿಗೆ ಕೇಳಿದ್ದಾರಂತೆ! ಜೊತೆಗೆ ಪ್ರತಿ ತಿಂಗಳು 5,000 ದಿಂದ 7,000 ವರೆಗೆ ಮೇಂಟೆನೆನ್ಸ್ ಚಾರ್ಜ್ ಎಂದಿದ್ದಾರಂತೆ. ಡೆಪಾಸಿಟ್ ವಿಚಾರಕ್ಕಂತೂ ಮಿತಿಯೇ ಇಲ್ಲದಂತಾಗಿದ್ದು, ಮಾಲೀಕರು ಬರೋಬ್ಬರಿ ₹3 ಲಕ್ಷದಿಂದ ₹8 ಲಕ್ಷದವರೆಗೆ ಮುಂಗಡ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು..ಮಾಲೀಕರು ಕೇಳಿದಷ್ಟು ಹಣವನ್ನು ಬಾಡಿಗೆದಾರರು ಕಣ್ಮುಚ್ಚಿ ಕೊಡುತ್ತಿದ್ದಾರೆ. ಯಾರೊಬ್ಬರೂ ಇಷ್ಟೊಂದು ಬಾಡಿಗೆ ಯಾಕೆ? ಎಂದು ಮಾಲೀಕರನ್ನು ಪ್ರಶ್ನೆ ಮಾಡಲ್ಲ. ಬ್ಯಾಚುಲರ್‌ಗಳು ಒಟ್ಟಾಗಿ ಸೇರಿ ಒಂದು ರೂಮಿಗೆ ಇಂತಿಷ್ಟು ಎಂದು ಹಂಚಿಕೊಂಡು ಸುಲಭವಾಗಿ ದುಬಾರಿ ಬಾಡಿಗೆ ಕಟ್ಟುತ್ತಾರೆ. ಆದರೆ ಸಂಸಾರ ಇರುವ ಕುಟುಂಬಗಳಿಗೆ ಇಷ್ಟೊಂದು ಹಣ ಭರಿಸೋದು ಹೇಗೆ? ಜನರು ಶ್ರೀಮಂತರಾಗಿರಬಹುದು, ಆದರೆ ಒಂದು 2BHK ಮನೆಗೆ 2-3 ಲಕ್ಷ ಅಥವಾ 8 ಲಕ್ಷ ಡೆಪಾಸಿಟ್ ಕೊಡುವುದು ಎಷ್ಟು ಸರಿ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸದ್ಯ ಮಹಿಳೆ ನೋವಿನ ನಿವೇದನೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಬೆಂಗಳೂರಿನ ಬಾಡಿಗೆ ಮಾಫಿಯಾದ ವಿರುದ್ಧ ಜನ ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಬ್ರೋಕರ್‌ಗಳ ಪ್ರಕಾರ ಅವರ ಅಜ್ಜ-ಮುತ್ತಜ್ಜ ನೆಟ್ಟ ಮರಗಳಲ್ಲಿ ಹಣ ಬಿಡುತ್ತಿದೆ ಅನಿಸುತ್ತದೆ ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ.. ತಿಂಗಳಿಗೆ 60 ಸಾವಿರ ಬಾಡಿಗೆ ಕಟ್ಟುವ ಬದಲು, ಅಷ್ಟೇ ಮೊತ್ತದ ಇಎಂಐ (EMI) ಕಟ್ಟಿ ಸ್ವಂತ ಫ್ಲಾಟ್ ಖರೀದಿಸುವುದು ಎಷ್ಟೋ ಮೇಲು ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.


