ಚಿನ್ನದ ಅಂಬಾರಿ ಕುರಿತ ಸುಳ್ಳು ವದಂತಿಗಳ ಬಗ್ಗೆ ರಾಜ ವಂಶಸ್ಥೆ ಪ್ರಮೋದಾ ದೇವಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಅಂಬಾರಿ ಏನಾಗಿದೆ? ಅದು ಎಲ್ಲಿದೆ ಅನ್ನೋದ್ರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರು ಏನು ಹೇಳಿದರು? ಸ್ಟೋರಿ ಓದಿ..
ಮೈಸೂರು: ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆ ಅಂದರೆ ಐತಿಹಾಸಿಕ 750 ಕೆಜಿ ತೂಕದ ಚಿನ್ನದ ಅಂಬಾರಿ. ಇತ್ತೀಚೆಗೆ ಈ ಚಿನ್ನದ ಅಂಬಾರಿ ಬಗ್ಗೆ ಒಂದಷ್ಟು ವದಂತಿಗಳು ಹಬ್ಬಿದ್ದವು. ಇದೀಗ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅದಕ್ಕೆಲ್ಲ ತೆರೆ ಎಳೆದಿದ್ದಾರೆ.
ಚಿನ್ನದ ಅಂಬಾರಿ ಕಳ್ಳತನವಾಗಿದೆ ಅಥವಾ ರಿಪೇರಿಯಲ್ಲಿದೆ ಎಂಬುದೆಲ್ಲ ಶುದ್ಧ ಸುಳ್ಳು. ಅದು ಸುರಕ್ಷಿತವಾಗಿದೆ ಎಂದು ಪ್ರಮೋದಾ ದೇವಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಗಳು ಹಾಗೂ ಅರಮನೆಯ ಆಸ್ತಿ ವಿವಾದಗಳ ಕುರಿತು ಅವರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಮೋದಾ ದೇವಿ ಏನಂದ್ರು?
ಅಂಬಾರಿ ಕುರಿತ ಸುಳ್ಳು ಸುದ್ದಿ ಬಗ್ಗೆ ಪ್ರತಿಕ್ರಿಯಿಸಿರುವ ಅವರು.. ಕಳೆದ ಕೆಲವು ದಿನಗಳಿಂದ ಚಿನ್ನದ ಅಂಬಾರಿ ನಾಪತ್ತೆಯಾಗಿದೆ, ರಿಪೇರಿಯಲ್ಲಿದೆ ಎಂಬ ಸುದ್ದಿ ಬಂದವು. ಅದೆಲ್ಲ ಸುಳ್ಳು. ಕೆಲವರು ಅಂಬಾರಿ ನಮಗೆ ಸೇರಿದ್ದಲ್ಲ ಅಂತಲೂ ಬರೆದುಕೊಂಡಿದ್ದರು. ಈ ರೀತಿಯ ಅನಗತ್ಯ ಮತ್ತು ಆಧಾರರಹಿತ ವಿಚಾರಗಳು ಸಾರ್ವಜನಿಕರಲ್ಲಿ ಹರಡಬಾರದು. ಇದೇ ಕಾರಣಕ್ಕಾಗಿಯೇ ನಾನೇ ಖುದ್ದಾಗಿ ಅದನ್ನು ಮುಚ್ಚಿಸಿದ್ದೇನೆ. ಅಂಬಾರಿ ಅರಮನೆಯಲ್ಲಿ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಚಾಮುಂಡಿ ಬೆಟ್ಟದ ಬಗ್ಗೆ ಪ್ರತಿಕ್ರಿಯಿಸಿ.. ಬೆಟ್ಟವು ದಿನೇದಿನೆ ಊರಿನಂತೆ ವಿಸ್ತಾರಗೊಳ್ಳುತ್ತಿರುವುದು ಪರಿಸರ ಮತ್ತು ಪರಂಪರೆಯ ದೃಷ್ಟಿಯಿಂದ ಅಪಾಯಕಾರಿ.ಬೆಟ್ಟದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ನಿರ್ಮಾಣ ಮಾಡುವಾಗ ಬಂಡೆಗಳನ್ನು ಒಡೆಯಲು ಡೈನಮೈಟ್ ಸಿಡಿಸಲಾಗಿತ್ತು. ಆ ಸ್ಫೋಟದ ಕಂಪನಕ್ಕೆ ಐತಿಹಾಸಿಕ ರಾಜೇಂದ್ರ ವಿಲಾಸ್ ಅರಮನೆಯ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡವು. ಮುಂಭಾಗದ ಕಟ್ಟಡದ ಒಂದು ಭಾಗವೂ ಕುಸಿದ್ದಿತ್ತು. ಅರಮನೆಯ ಗುಮ್ಮಟ ಉಳಿಸಿಕೊಳ್ಳಲು ಬರೋಬ್ಬರಿ ಒಂದೂವರೆ ವರ್ಷಗಳ ಕಾಲ ದುರಸ್ತಿ ಮಾಡಬೇಕಾಯಿತು. ಇನ್ನೊಂದು ವಿಚಾರ ಏನೆಂದರೆ.. ಆ ಮಲ್ಟಿಲೆವೆಲ್ ಪಾರ್ಕಿಂಗ್ ನಿರ್ಮಿಸಿರುವ ಜಾಗವೂ ರಾಜವಂಶಕ್ಕೆ ಸೇರಿದ್ದಾಗಿದೆ ಎಂದು ಬೇಸರ ಹೊರಹಾಕಿದರು.
ಯಥಾಸ್ಥಿತಿ ಆದೇಶ ಜಾರಿ
ಅರಮನೆಗೆ ಸೇರಿದ ಆಸ್ತಿಗಳ ವಿವಾದ ಮತ್ತು ಕೋರ್ಟ್ ಆದೇಶಗಳ ಕುರಿತು ಪ್ರಮೋದಾ ದೇವಿ ಮಾತನ್ನಾಡಿದರು. Exhibition Ground ಪಕ್ಕದಲ್ಲಿರುವ ಜಾಗದ ವಿಚಾರದಲ್ಲಿ ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಇದಕ್ಕೆ ಸರ್ಕಾರದಿಂದ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗಿಲ್ಲ. ನಾವು ಕೋರ್ಟ್‌ನಲ್ಲಿ ಗೆದ್ದಿರುವ ಹಲವು ಪ್ರಕರಣಗಳ ಆದೇಶಗಳು ಸರ್ಕಾರದಿಂದ ಇನ್ನೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ ಎಂದರು. ಸದ್ಯ ಈ ಜಾಗವು ಅರಮನೆ ಆಡಳಿತದ ಸುಪರ್ದಿಯಲ್ಲಿದೆ. ಜಾಗದ ರಕ್ಷಣೆಗಾಗಿ ಸುತ್ತಲೂ ಬೇಲಿ ಹಾಕಲಾಗಿದೆ ಎಂದರು.
ಇದೇ ವೇಳೆ ಮೈಸೂರು ದಸರಾದಲ್ಲಿ ಕಂಬಳ ನಡೆಸುವ ನಿರ್ಧಾರವನ್ನೂ ಪ್ರಮೋದಾ ದೇವಿ ಖಂಡಿಸಿದ್ದಾರೆ. ಕಂಬಳಕ್ಕೆ ಆ ಭಾಗದಲ್ಲಿ (ಕರಾವಳಿಯಲ್ಲಿ) ಅದರದ್ದೇ ಆದ ಪ್ರಾಮುಖ್ಯತೆ ಇದೆ. ಇದು ಬೇಕಾ ಬೇಡವಾ ಎಂಬುದನ್ನ ನಾವೇ ಯೋಚನೆ ಮಾಡಬೇಕಿದೆ. ಕಂಬಳವನ್ನ ದಸರಾ ನಂತರ ಅಥವಾ ಮುಂಚೇಯೇ ಮಾಡಿದ್ರೆ ಸರಿ ಹೋಗ್ತಿತ್ತು. ಕಂಬಳವನ್ನ ದಸರಾಗೆ ಸೇರಿಸಬಾರದಿತ್ತು. ದಸರಾದಲ್ಲಿ ಒಂದು ಕಾರ್ಯಕ್ರಮವಾಗಿ ಅದನ್ನು ಮಾಡೋದ್ರಿಂದ ಅದಕ್ಕೆ ಸಿಗುವಷ್ಟು ಪ್ರಾಮುಖ್ಯತೆ ಸಿಗುವುದಿಲ್ಲವೇನೋ. ಇದು ನನ್ನ ಅಭಿಪ್ರಾಯ. ದಸರಾದಲ್ಲಿ ಕಂಬಳ ಆಯೋಜನೆ ಮಾಡಿರೋದು ಸರಿ ತಪ್ಪು ಎಂದು ನಾನು ಹೇಳುತ್ತಿಲ್ಲ ಎಂದು ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ.
ಕಂಬಳವನ್ನು ಪ್ರತ್ಯೇಕವಾಗಿ ಆಯೋಜಿಸಿದರೆ ಹೆಚ್ಚಿನ ಮಹತ್ವ ಸಿಗುತ್ತದೆ. ದಸರಾ ಭಾಗವಾದರೆ ಕಂಬಳಕ್ಕೆ ಸಿಗಬೇಕಾದ ಪ್ರತ್ಯೇಕ ಗಮನ ಕಡಿಮೆಯಾಗಬಹುದು ಎಂದರು. ಇದೇ ವೇಳೆ ಬರಗಾಲದಲ್ಲೂ ಅದ್ದೂರಿ ದಸರಾ ಆಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದಸರಾ ಎಂಬ ಶಬ್ದದಲ್ಲೇ ಅದ್ದೂರಿತನ ಅಡಗಿದೆ. ದಸರಾ ಆಚರಣೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಿಲ್ಲ. ಮಳೆ ಕೊರತೆ, ಬರಗಾಲ ಇದ್ದರೂ ಸಂಪ್ರದಾಯದಂತೆ ದಸರಾ ಆಚರಣೆ. ಮಳೆ-ಬೆಳೆ ಉತ್ತಮವಾಗಲಿ ಎಂಬ ಆಶಯವೂ ದಸರಾ ಆಚರಣೆಯಲ್ಲಿದೆ. ಜಂಬೂಸವಾರಿ ಬದಲಾವಣೆಗೂ ಅರಮನೆ ಪರಂಪರೆಗೂ ಸಂಬಂಧವಿಲ್ಲ. ಸರ್ಕಾರದ ಜಂಬೂಸವಾರಿಗೂ ಅರಮನೆಯ ಧಾರ್ಮಿಕ ಪರಂಪರೆಗೂ ನೇರ ಸಂಬಂಧವಿಲ್ಲ. ಮೆರವಣಿಗೆಯಲ್ಲಿ ಬದಲಾವಣೆ ಮಾಡಿದರೂ ಅರಮನೆಯ ಪೂಜಾ ಪರಂಪರೆಗೆ ಧಕ್ಕೆ ಇಲ್ಲ. ಹೊಸತನ ತರುವ ಬಗ್ಗೆ ಸರ್ಕಾರ ಹಾಗೂ ಯುವ ಪೀಳಿಗೆ ಚರ್ಚಿಸಲಿ. ಆಯುಧ ಪೂಜೆ, ವಿಜಯದಶಮಿಯಂದು ಸ್ವಲ್ಪ ಗೊಂದಲ ಉಂಟಾಗುತ್ತದೆ. ಬ್ಯಾರಿಕೇಡ್, ಕುರ್ಚಿ ಹಾಗೂ ಗದ್ದಲದಿಂದ ಆನೆ-ಕುದುರೆಗಳು ಬೆದರುವ ಸಾಧ್ಯತೆ. ಸರ್ಕಾರಿ ಕಾರ್ಯಕ್ರಮಗಳ ಸಮಯ ಹಾಗೂ ಅರಮನೆ ಪೂಜೆಯ ಸಮಯ ಹೊಂದಾಣಿಕೆ ಅಗತ್ಯ. ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲಾಗುತ್ತದೆ ಎಂದರು.


