ಚಾಮರಾಜನಗರ ಜಿಲ್ಲೆಯಲ್ಲಿ ತಾಯಿಯಿಂದ ಬೇರ್ಪಟ್ಟ ಆನೆಮರಿಯನ್ನು ರಕ್ಷಿಸಿ ಮೈಸೂರು ಮೃಗಾಲಯಕ್ಕೆ ಕಳುಹಿಸಲಾಗಿದೆ. ಉಗೇನದಹುಂಡಿ ಬಳಿ ಡ್ರೋನ್ ಕ್ಯಾಮೆರಾದಲ್ಲಿ ಚಿರತೆ ಸೆರೆಯಾಗಿದ್ದರೆ, ಹಂಗಳ ಗ್ರಾಮದಲ್ಲಿ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದಿದೆ. ಈ ಘಟನೆಗಳಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಚಾಮರಾಜನಗರ: ಮಲೆಮಹದೇಶ್ವರ ವನ್ಯಧಾಮದಲ್ಲಿ ತಾಯಿಯಿಂದ ಬೇರ್ಪಟ್ಟು ಅಲೆದಾಡುತ್ತಿದ್ದ ಸುಮಾರು ಒಂದು ತಿಂಗಳ ಆನೆಮರಿಯನ್ನು ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮೈಸೂರಿನ ಮೃಗಾಲಯಕ್ಕೆ ರವಾನಿಸಲಾಗಿದೆ.
ಒಂಟಿ ಆನೆಮರಿ, ಊರೊಳಗೆ ಚಿರತೆ: ಚಾಮರಾಜನಗರದಲ್ಲಿ ಏನಾಗುತ್ತಿದೆ?
ತಾಲೂಕಿನ ಅಜ್ಜಿಪುರ ಸಮೀಪದ ಕಣಿವೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮುಖ್ಯ ರಸ್ತೆಯಲ್ಲಿ ಭಾನುವಾರದಿಂದ ಆನೆಮರಿ ತಾಯಿಗಾಗಿ ಹುಡುಕಾಡುತ್ತಾ ಅಲೆದಾಡುತ್ತಿತ್ತು. ಇದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಆನೆಮರಿಯನ್ನು ತಾಯಿಯೊಂದಿಗೆ ಸೇರಿಸಲು ಪ್ರಯತ್ನಿಸಿದರು. ಆದರೆ ಸುತ್ತಮುತ್ತ ತಾಯಿ ಆನೆ ಅಥವಾ ಆನೆಗಳ ಹಿಂಡು ಪತ್ತೆಯಾಗದ ಹಿನ್ನೆಲೆಯಲ್ಲಿ ಆನೆಮರಿಯನ್ನು ಸುರಕ್ಷಿತವಾಗಿ ಸೆರೆಹಿಡಿದು ಪೋಷಣೆ ಮಾಡಿ ಮೈಸೂರು ಮೃಗಾಲಯಕ್ಕೆ ರವಾನಿಸಲಾಗಿದೆ.
ಡ್ರೋನ್ ಕ್ಯಾಮೆರಾದಲ್ಲಿ ಚಿರತೆ ದೃಶ್ಯ ಸೆರೆ
ಚಾಮರಾಜನಗರ ತಾಲೂಕಿನ ಉಗೇನದಹುಂಡಿ ಗ್ರಾಮದ ಬಳಿ ಇರುವ ಕರಿಕಲ್ಲು ಕ್ವಾರಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕದ ಉಂಟು ಮಾಡಿದೆ. ಕುರಿಯನ್ನು ಬೇಟೆಯಾಡಲು ಹಿಡಿಯಲು ಹೊಂಚು ಹಾಕುತ್ತಿದ್ದ ಚಿರತೆಯನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್ ಕ್ಯಾಮೆರಾ ಮೂಲಕ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲನೆ ನಡೆಸಿದಾಗ ಡ್ರೋನ್ ಕ್ಯಾಮೆರಾದಲ್ಲಿ ಚಿರತೆ ದೃಶ್ಯ ಸೆರೆಯಾಗಿದೆ.

ನಾಯಿಯನ್ನು ಹೊತ್ತೊಯ್ದ ಚಿರತೆ
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಸಮೀಪ ಇರುವ ಖಾಸಗಿ ಹೋಟೆಲ್ ಮುಂಭಾಗ ಮಲಗಿದ್ದ ನಾಯಿಯನ್ನು ಚಿರತೆಯೊಂದು ಹೊತ್ತೊಯ್ದಿದೆ. ಹೋಟೆಲ್ ಬಾಗಿಲಿನ ಮುಂಭಾಗ ಮಲಗಿದ್ದ ನಾಯಿಯ ಮೇಲೆ ದಿಢೀರ್ ದಾಳಿ ನಡೆಸಿದ ಚಿರತೆ, ಒಂದೇ ಗುಕ್ಕಿಗೆ ನಾಯಿಯನ್ನು ಹಿಡಿದುಅಲ್ಲಿಂದ ಹೊತ್ತೊಯ್ದಿದೆ ಈ ದೃಶ್ಯ ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಹಂಗಳ ಹಾಗು ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಉಂಟುಮಾಡಿದ್ದು ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.



