Chamarajeshwara Rathotsava: ಆಷಾಢ ಮಾಸ, ಶೂನ್ಯ ಮಾಸವಾಗಿ ಶುಭ ಕಾರ್ಯಗಳಿಗೆ ನಿಷಿದ್ಧ. ಅದರೆ ಆ ನಗರದಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲೇ ಒಂದು ವಿಶಿಷ್ಟ ರಥೋತ್ಸವ ನಡೆಯುತ್ತೆ. ಅದು ಕೇವಲ ರಥೋತ್ಸವಲ್ಲ.

ವರದಿ: ಪುಟ್ಟರಾಜು ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಜು.29): ಆಷಾಢ ಮಾಸ, ಶೂನ್ಯ ಮಾಸವಾಗಿ ಶುಭ ಕಾರ್ಯಗಳಿಗೆ ನಿಷಿದ್ಧ. ಅದರೆ ಆ ನಗರದಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲೇ ಒಂದು ವಿಶಿಷ್ಟ ರಥೋತ್ಸವ ನಡೆಯುತ್ತೆ. ಅದು ಕೇವಲ ರಥೋತ್ಸವಲ್ಲ, ಅಲ್ಲಿ ಸಾವಿರಾರು ನವಜೋಡಿಗಳು ಸೇರಿ ಸಂಭ್ರಮಿಸುವ ವೈಶಿಷ್ಟ್ಯ ಇದೆ. ನವದಂಪತಿಗಳ ಜಾತ್ರೆ ಎಂದೇ ಖ್ಯಾತಿಯಾದ ಆ ರಥೋತ್ಸವವಾದರು ಯಾವುದು, ಅದು ಎಲ್ಲಿ ನಡೆಯುತ್ತೆ, ಅಲ್ಲಿನ ವೈಶಿಷ್ಟವಾದರು ಏನು?

ಗಡಿ ಜಿಲ್ಲೆ ಚಾಮರಾಜನಗರದ ಇತಿಹಾಸಪ್ರಸಿದ್ದ ಶ್ರೀ ಚಾಮರಾಜೇಶ್ವರ ಸ್ವಾಮಿಯ ರಥೋತ್ಸವ ಇಂದು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅತ್ಯಂತ ಅದ್ಧೂರಿಯಾಗಿ ಜರುಗಿತು. ಬೆಳಿಗ್ಗೆ 11 ರಿಂದ 11.37 ರವರೆಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಚಾಮರಾಜೇಶ್ವರನ ರಥಾರೋಹಣ ಕಾರ್ಯಕ್ರಮ ಅತ್ಯಂತ ಭಕ್ತಿಯಿಂದ ನೆರವೇರಿತು. ಭಕ್ತರ ಜಯಘೋಷಗಳ ನಡುವೆ ಪೂರ್ವಹ್ನ 11.50 ಕ್ಕೆ ಸರಿಯಾಗಿ ಚಾಮರಾಜೇಶ್ವರನ ತೇರು ರಥದ ಬೀದಿಗೆ ಬಿಜಂಗೈಸಿತು. ಮುಖ್ಯ ರಥದೊಂದಿಗೆ ಗಣಪತಿ, ಚಾಮುಂಡೇಶ್ವರಿ ಹಾಗು ಕೆಂಪನಂಜಾಂಬ ರಥಗಳು ಸಾಗಿದವು.

ಇನ್ನು ಈ ರಥೋತ್ಸವದ ಪ್ರಮುಖ ಆಕರ್ಷಣೆಯೆಂದರೆ, ದೇವರ ರಥಕ್ಕೆ ಅಭಿಮುಖವಾಗಿ ಚಲಿಸಿದ ಮೈಸೂರು ಮಹಾರಾಜರ ಪ್ರತಿಮೆ ಹೊತ್ತ ಚಿಕ್ಕ ರಥ! ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಂದೆ ಖಾಸಾ ಚಾಮರಾಜ ಒಡೆಯರ್ ಅವರು ಜನಿಸಿದ ನೆನಪಿಗಾಗಿ ಈ ಐತಿಹಾಸಿಕ ಚಾಮರಾಜೇಶ್ವರ ದೇವಸ್ಥಾನವನ್ನು ನಿರ್ಮಿಸಿದ್ದರು ಎಂಬುದು ಇಲ್ಲಿನ ಇತಿಹಾಸ. ಇನ್ನು ಈ ಜಾತ್ರೆಗೆ ಮತ್ತೊಂದು ವಿಶೇಷ ಹೆಸರಿದೆ, ಅದೇ 'ನವದಂಪತಿಗಳ ಜಾತ್ರೆ. ಸಾವಿರಾರು ನವಜೋಡಿಗಳು ಪಾಲ್ಗೊಂಡು ಚಾಮರಾಜೇಶ್ವರನಿಗೆ ಹಣ್ಣು ಧವನ ಎಸೆದು ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸುದರು.

ಚಾಮರಾಜೇಶ್ವರ ರಥೋತ್ಸವ ನವದಂಪತಿಗಳ ಜಾತ್ರೆಯು ಹೌದು. ಆಷಾಡ ಮಾಸದಲ್ಲಿ ನಡೆಯುವ ಈ ರಥೋತ್ಸವ ಸಹಜವಾಗಿಯೇ ವಿಶೇಷತೆಯಿಂದ ಕೂಡಿದೆ. ಜೇಷ್ಠ ಮಾಸದ ತನಕ ವಿವಾಹ ಮಹೋತ್ಸವಗಳ ಸಡಗರ ಮುಗಿದು ಆಷಾಡ ಮಾಸದ ನೆಪದಲ್ಲಿ ಒಂದು ತಿಂಗಳ ಕಾಲ ತಾತ್ಕಾಲಿಕವಾಗಿ ಅಗಲಿರಬೇಕಾದ ನವವಿವಾಹಿತರ ಈ ರಥೋತ್ಸವದ ದಿನ ಒಂದಡೆ ಸೇರಿ ಚಾಮರಾಜೇಶ್ವರನಿಗೆ ಹಣ್ಣುಧವನ ಎಸೆದು ನಮಿಸುತ್ತಾರೆ. ತಮ್ಮ ದಾಂಪತ್ಯ ಜೀವನ ಸುಖವಾಗಿರಲೆಂದು ಪ್ರಾರ್ಥಿಸುತ್ತಾರೆ. ನವದಂಪತಿಗಳು ಸಂಪ್ರದಾಯದ ಪ್ರಕಾರ ಒಂದು ತಿಂಗಳ ಕಾಲ ಅಗಲಿರಬೇಕು. ಇಬ್ಬರು ಒಟ್ಟಾಗಿ ಬೆರೆಯುವಂತಿಲ್ಲ.

ಈ ಅವಧಿಯಲ್ಲಿ ಅವರ ವಿರಹ ವೇದನೆ ಅನುಭವಿಸಿದವರಿಗೆ ಗೊತ್ತು. ಆದರೆ ಆಷಾಡ ಮಾಸದಲ್ಲು ನವಜೋಡಿಗಳು ಒಂದಡೆ ಸೇರಲು ಚಾಮರಾಜೇಶ್ವರ ರಥೋತ್ಸವ ಒಂದು ಸುವರ್ಣಾವಕಾಶ ಕಲ್ಪಿಸುತ್ತದೆ. ಜಾತ್ರೆಯ ನೆಪದಲ್ಲಿ ಒಂದಾದ ನವಜೋಡಿಗಳು, ಕೈಕೈ ಹಿಡಿದು ಓಡಾಡುತ್ತಾ, ತಮಗೆ ಇಷ್ಟಬಂದ ತಿಂಡಿ ತಿನಿಸುಗಳನ್ನು ಮೆಲ್ಲುತ್ತಾ, ವಿರಹದ ನೋವನ್ನು ಮರೆತು ಸಂತಸದ ಕಡಲಲ್ಲಿ ತೇಲಿದರು ಚಾಮರಾಜೇಶ್ವರ ರಥೋತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ತೇರಿಗೆ ಹಣ್ಣು ಧವನ ಎಸೆದು ಹರಕೆ ಹೊತ್ತರೆ ನವದಂಪತಿಗಳಿಗೆ ಸಂತಾನ ಭಾಗ್ಯ , ಅವಿವಾಹಿತರಿಗೆ ಕಂಕಣ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ.

ನವದಂಪತಿಗಳ ಜಾತ್ರೆ ಎಂದೆ ಖ್ಯಾತಿಯಾಗಿರುವ ಚಾಮರಾಜೇಶ್ವರ ರಥೋತ್ಸವದಲ್ಲಿ ಸಾವಿರಾರು ನವವಿವಾಹಿತರು ಬಂದು ಸೇರಿದ್ದರು. ಎಲ್ಲಿ ನೋಡಿದರು ನವದಂಪತಿಗಳದ್ದೇ ಕಲರವ. ದೇವರಿಗೆ ಒಟ್ಟಾಗಿ ಸೇರಿ ಹಣ್ಣು ಧವನ ಎಸೆದು ನಮಿಸುವುದು. ಕೈಕೈ ಹಿಡಿದು ಸುತ್ತಾಡುವ ದೃಶ್ಯ ಸಾಮಾನ್ಯವಾಗಿತ್ತು. ನವ ದಂಪತಿಗಳು. ಲಕ್ಷಾಂತರ ಭಕ್ತರ ನಂಬಿಕೆ, ಶತಮಾನಗಳ ಇತಿಹಾಸ ಮತ್ತು ವಿಶಿಷ್ಟ ಸಂಪ್ರದಾಯಗಳ ಸಂಗಮವಾಗಿರುವ ಚಾಮರಾಜೇಶ್ವರ ರಥೋತ್ಸವ ಮತ್ತೊಮ್ಮೆ ಚಾಮರಾಜನಗರದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿತು. ಒಟ್ಟಾರೆ ಚಾಮರಾಜೇಶ್ವರನ ತೇರು ಧಾರ್ಮಿಕ ಆಚರಣೆ ಮತ್ತು ನವದಂಪತಿಗಳ ಭಾವನಾತ್ಮಕ ಸಂಗಮಕ್ಕೆ ಸಾಕ್ಷಿಯಾಯ್ತು.