ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಎನ್‌ಕೌಂಟರ್ ಬಳಿಕ, 'ಟೈಗರ್ ಆಫ್ ಜಸ್ಟೀಸ್' ಎಂಬ ಸಂಘಟನೆಯ ಹೆಸರು ಕೇಳಿಬಂದಿದ್ದು, ಇದರ ಚಟುವಟಿಕೆಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ. ವೀರಪ್ಪನ್ ಬೆಂಬಲಿಗರು ಮತ್ತು ತಮಿಳು ತೀವ್ರಗಾಮಿ ಸಂಘಟನೆಗಳ ಕೈವಾಡದ ಶಂಕೆ ವ್ಯಕ್ತವಾಗಿದ್ದು, ಸೋಷಿಯಲ್ ಮೀಡಿಯಾ ಚಟುವಟಿಕೆಗಳನ್ನು ಪರಿಶೀಲಿಸಲಾಗುತ್ತಿದೆ.
ಚಾಮರಾಜನಗರ (ಆ.27): ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಆಗಸ್ಟ್ 15ರಂದು ನಡೆದ ಎನ್‌ಕೌಂಟರ್ ಪ್ರಕರಣದ ಬಳಿಕ ಕಾಡಂಚಿನ ಗ್ರಾಮಗಳಲ್ಲಿ ‘ಟೈಗರ್ ಆಫ್ ಜಸ್ಟೀಸ್’ ಎಂಬ ಸಂಘಟನೆ ಹೆಸರು ಕೇಳಿಬಂದಿದ್ದು, ಅದರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ತಿಳಿಸಿದ್ದಾರೆ.
ಶೂಟೌಟ್‌ಗೆ ಪ್ರತೀಕಾರವಾಗಿ ಕಳ್ಳಬೇಟೆ ತಡೆ ಶಿಬಿರ, ವಸತಿಗೃಹಗಳ ಧ್ವಂಸ, ಜಿಲೆಟಿನ್‌ನಿಂದ ಸ್ಫೋಟ ನಡೆಸಿರುವುದರ ಹಿಂದೆ ತಮಿಳುನಾಡಿನ ಕೆಲವು ತೀವ್ರಗಾಮಿ ಸಂಘಟನೆ ಹಾಗೂ ವೀರಪ್ಪನ್ ಬೆಂಬಲಿಗರ ಕುಮ್ಮಕ್ಕು ಇರುವ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬುಧವಾರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಜಿಲ್ಲಾ ಸೋಷಿಯಲ್ ಮೀಡಿಯಾ ಮಾನಿಟರ್ ಸೆಲ್‌ನಿಂದ ಎನ್‌ಕೌಂಟರ್ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ನಡೆಯುತ್ತಿರುವ ಪರ-ವಿರೋಧ ಚರ್ಚೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಪ್ರಚೋದನಾಕಾರಿ ಹೇಳಿಕೆ, ಪರ-ವಿರೋಧ ಹೇಳಿಕೆ ಹಾಗೂ ಸುಳ್ಳು ಸುದ್ದಿ ಹರಡುವಿಕೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ತಮಿಳರು ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ
‘ಟೈಗರ್ ಆಫ್ ಜಸ್ಟೀಸ್’ ಸಂಘಟನೆಯಿಂದ ‘ಮೈ ವಿಲೇಜ್ ಗ್ರೂಪ್’ನಲ್ಲಿ ಪ್ರಕಟವಾಗಿರುವ ‘ತಮಿಳರು ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ, ಈ ಭಾಗದಲ್ಲಿ ಮೂಲಭೂತ ಸೌಕರ್ಯ ನೀಡದೆ ವಂಚನೆ ಮಾಡಲಾಗುತ್ತಿದೆ’ ಎಂಬಿತ್ಯಾದಿ ಹೇಳಿಕೆಗಳು, ಸಂಘಟನೆಯ ಸಂದೇಶ, ಪ್ರಚೋದನೆ ನೀಡಲಾಗುತ್ತಿರುವ ವಿಚಾರ, ಈ ಸಂಬಂಧ ಬೇರೆ, ಬೇರೆ ಗ್ರೂಪ್‌ಗಳ ನಡುವೆ ನಡೆಯುತ್ತಿರುವ ಆರೋಪ-ಪ್ರತ್ಯಾರೋಪ, ಈ ಎಲ್ಲವನ್ನೂ ಪರಿಶೀಲಿಸಲಾಗುತ್ತಿದೆ. ಪ್ರಚೋದನೆ ಕಂಡು ಬಂದರೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಗೋವಿಂದನ ಬಂಧನಕ್ಕೆ ತಂಡ ರಚನೆ:
ಹನೂರು ತಾಲೂಕಿನ ಅಜ್ಜಿಪುರ ಗ್ರಾಮದ ಪ್ರಿಯಾ ಎಂಬುವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಮಿನಿ ವೀರಪ್ಪನ್ ಖ್ಯಾತಿಯ ಗಂಗನದೊಡ್ಡಿ ಗೋವಿಂದನ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ನಂತರ ಆತ ತಲೆ ಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಕಾವೇರಿ ವನ್ಯಧಾಮದ ತನಿಖಾ ವರದಿ ಇಂದು ಅಥವಾ ನಾಳೆ ಸಲ್ಲಿಕೆ:
ಕಾವೇರಿ ವನ್ಯಧಾಮದಲ್ಲಿ ಆ.15ರಂದು ನಡೆದ ಶೂಟೌಟ್ ಪ್ರಕರಣದ ತನಿಖಾ ವರದಿಯನ್ನು ಸರ್ಕಾರಕ್ಕೆ ಗುರುವಾರ ಅಥವಾ ಶುಕ್ರವಾರ ಸಲ್ಲಿಕೆ ಮಾಡಲಾಗುವುದು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದ್ದಾರೆ.
ಚಾಮರಾಜನಗರ ಎಸಿ ದಿನೇಶ್ ಕುಮಾರ್ ಮೀನಾರನ್ನು ತನಿಖಾಧಿಕಾರಿಯಾಗಿ ನೇಮಿಸಿ, 7 ದಿನದೊಳಗೆ ತನಿಖಾ ವರದಿ ಕೊಡಲು ಸೂಚಿಸಲಾಗಿತ್ತು. ಸಮಗ್ರ ಮಾಹಿತಿ ಕಲೆ ಹಾಕುವ ಹಿನ್ನೆಲೆಯಲ್ಲಿ ನಾಲ್ಕೈದು ದಿನಗಳ ಹೆಚ್ಚುವರಿ ಕಾಲಾವಕಾಶವನ್ನು ತನಿಖಾಧಿಕಾರಿ ಕೇಳಿದ್ದರು. ಇದೀಗ ತನಿಖೆ ಪೂರ್ಣಗೊಳಿಸಿ ವರದಿ ಸಿದ್ಧಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಅಥವಾ ಶುಕ್ರವಾರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.


