ಭಾರತೀಯ ಹವಾಮಾನ ಇಲಾಖೆಯ (IMD) ಪ್ರಕಾರ, 125 ವರ್ಷಗಳಲ್ಲೇ ಅತ್ಯಂತ ಬಿಸಿಯಾದ ಆಗಸ್ಟ್ ತಿಂಗಳು ದಾಖಲಾಗಿದೆ. ಎಲ್ ನಿನೊ ಪ್ರಭಾವದಿಂದಾಗಿ ಈ ತಾಪಮಾನ ಏರಿಕೆಯಾಗಿದ್ದು, ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಮತ್ತು ಅಧಿಕ ತಾಪಮಾನದ ಮುನ್ಸೂಚನೆ ನೀಡಲಾಗಿದೆ.

ಕಳೆದ ಆಗಸ್ಟ್ ತಿಂಗಳ ಜಿಗುಟಾದ ವಾತಾವರಣ ಮತ್ತು ಸುಡುವ ಶಾಖದಿಂದ ಜನರು ಈಗಾಗಲೇ ತತ್ತರಿಸಿಹೋಗಿದ್ದಾರೆ. ಆದರೆ, ಹವಾಮಾನ ಬದಲಾವಣೆಯ ನಿಜವಾದ ಸವಾಲು ಇದೀಗ ತಾನೆ ಶುರುವಾಗಿದೆ. ಭಾರತೀಯ ಹವಾಮಾನ ಇಲಾಖೆಯು (IMD) ನೀಡಿರುವ ಭವಿಷ್ಯವಾಣಿಯು ಮುಂದಿನ ದಿನಗಳಲ್ಲಿ ಕಾದಿರುವ ಭೀಕರ ಹವಾಮಾನ ಸ್ಥಿತಿಯ ಎಚ್ಚರಿಕೆಯನ್ನು ನೀಡಿದೆ. IMDಯ ಇತ್ತೀಚಿನ ವರದಿಯ ಪ್ರಕಾರ, ಕಳೆದುಹೋದ ಆಗಸ್ಟ್ 2026ರ ತಿಂಗಳು ಕಳೆದ 125 ವರ್ಷಗಳಲ್ಲೇ (1901ರ ನಂತರ) ಅತ್ಯಂತ ಬಿಸಿಯಾದ ಆಗಸ್ಟ್ ಆಗಿ ದಾಖಲಾಗಿದೆ. ಆದರೆ ನಿಜವಾದ ಆತಂಕದ ವಿಷಯವೆಂದರೆ, ಮುಂಬರುವ ಸೆಪ್ಟೆಂಬರ್ ತಿಂಗಳು ಇನ್ನಷ್ಟು ಒಣ ಹವಾಮಾನ ಮತ್ತು ಭೀಕರ ಕಂಟಕದಿಂದ ಕೂಡಿರಲಿದೆ.

ಎಲ್ ನಿನೊದ ಕರಾಳ ಛಾಯೆ!

ಹವಾಮಾನ ಇಲಾಖೆಯ ಮಹಾನಿರ್ದೇಶಕರಾದ ಮೃತ್ಯುಂಜಯ್ ಮಹಾಪಾತ್ರ ಅವರು ಆಗಸ್ಟ್ ತಿಂಗಳಿನ ಅಂಕಿ-ಅಂಶಗಳನ್ನು ಮಂಡಿಸಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಬಿಚ್ಚಿಟ್ಟಿದ್ದಾರೆ. ಆಗಸ್ಟ್ 2026 ರ ಸರಾಸರಿ ತಾಪಮಾನವು 28.01°C ನಷ್ಟಿತ್ತು. ಆದರೆ ಈ ತಿಂಗಳ ಸಾಮಾನ್ಯ ಸರಾಸರಿ ತಾಪಮಾನವು 27.34°C ಇರಬೇಕಿತ್ತು. ಇಷ್ಟೇ ಅಲ್ಲದೆ, ರಾತ್ರಿಯ ಸರಾಸರಿ ಕನಿಷ್ಠ ತಾಪಮಾನವು 24.36°C ಗೆ ತಲುಪುವ ಮೂಲಕ ಹಳೆಯ ಎಲ್ಲಾ ದಾಖಲೆಗಳನ್ನು ಮುರಿದುಹಾಕಿದೆ. ಈ ಹಠಾತ್ ತಾಪಮಾನ ಏರಿಕೆ ಮತ್ತು ಮಳೆಯ ಕೊರತೆಗೆ ಮುಖ್ಯ ಖಳನಾಯಕ 'ಎಲ್ ನಿನೊ' (El Niño) ಪ್ರಭಾವ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ತಾಪಮಾನವು ಗಣನೀಯವಾಗಿ ಹೆಚ್ಚಾಗುತ್ತಿದ್ದು, ಈ ಎಲ್ ನಿನೊ ಪರಿಸ್ಥಿತಿಗಳು ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಬಲಗೊಳ್ಳಲಿವೆ. ಇದು ಭಾರತದ ಮಾನ್ಸೂನ್ (ಮಳೆ ಮಾರುತಗಳನ್ನು) ವ್ಯವಸ್ಥೆಯನ್ನು ಸಂಪೂರ್ಣವಾಗಿ ಶುಷ್ಕಗೊಳಿಸುತ್ತಿದೆ.

ಸೆಪ್ಟೆಂಬರ್‌ನಲ್ಲಿ ಶೇಕಡಾ 91 ಕ್ಕಿಂತ ಕಡಿಮೆ ಮಳೆ ಮುನ್ಸೂಚನೆ!

ಐಎಂಡಿ ಮುನ್ಸೂಚನೆಯಂತೆ, ಸೆಪ್ಟೆಂಬರ್‌ನಲ್ಲಿ ದೇಶಾದ್ಯಂತ ಒಟ್ಟು ಮಾಸಿಕ ಮಳೆಯು ಸಾಮಾನ್ಯ ಮಟ್ಟಕ್ಕಿಂತ ಅತ್ಯಂತ ಕಡಿಮೆಯಾಗುವ (LPA ಯ ಶೇಕಡಾ 91 ಕ್ಕಿಂತ ಕಡಿಮೆ) ಸಾದ್ಯತೆಯಿದೆ. ಸಾಮಾನ್ಯವಾಗಿ ಕಳೆದ 30 ರಿಂದ 50 ವರ್ಷಗಳ ಸೆಪ್ಟೆಂಬರ್ ತಿಂಗಳ ದೀರ್ಘಾವಧಿಯ ಸರಾಸರಿ ಮಳೆಯು 167.9 ಮಿಮೀ ಇರಬೇಕಿತ್ತು, ಆದರೆ ಈ ಬಾರಿ ಮೋಡಗಳು ಕರಗದೆ ಜನರು ಮಳೆಗಾಗಿ ಹಾತೊರೆಯುವ ಸ್ಥಿತಿ ನಿರ್ಮಾಣವಾಗಲಿದೆ. ಆಗಸ್ಟ್‌ನಲ್ಲಿಯೂ ಸಹ ದೇಶಾದ್ಯಂತ ಕೇವಲ 213.3 ಮಿಮೀ ಮಳೆ ದಾಖಲಾಗಿದ್ದು, ಇದು 2001 ರ ನಂತರದ 7 ನೇ ಅತಿ ಕಡಿಮೆ ಮಳೆಯಾಗಿದೆ. ಈ ಆಗಸ್ಟ್‌ನಲ್ಲಿ 4 ಕಡಿಮೆ ಒತ್ತಡದ ವಾಯುಭಾರ ಕುಸಿತಗಳು ಸೃಷ್ಟಿಯಾಗಿ ಅವು 26 ದಿನಗಳ ಕಾಲ ಸಕ್ರಿಯವಾಗಿದ್ದರೂ, ಅವುಗಳ ಪ್ರಭಾವ ಕೇವಲ ಗಂಗಾ ನದಿ ಬಯಲು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಉಳಿದಂತೆ ಭಾರತದ ಹೆಚ್ಚಿನ ಭಾಗಗಳು ಬರ ಮತ್ತು ವಿಪರೀತ ಶಾಖವನ್ನು ಎದುರಿಸುವಂತಾಯಿತು.

ಹಗಲಿನಲ್ಲಿ ಸುಡುವ ಸೂರ್ಯ, ರಾತ್ರಿಯೂ ತಪ್ಪದ ಕಾವಿನ ವಾತಾವರಣ!

ಹವಾಮಾನ ವಿಜ್ಞಾನಿಗಳ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಮಳೆಯ ಅಭಾವ ಮಾತ್ರವಲ್ಲದೆ, ಹಗಲಿನ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಅತ್ಯಂತ ಹೆಚ್ಚಿರಲಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಉಷ್ಣತೆಯ ಬದಲಾವಣೆಯು ನೇರವಾಗಿ ಭಾರತೀಯ ಉಪಖಂಡದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದರ ಪರಿಣಾಮವಾಗಿ, ಸೆಪ್ಟೆಂಬರ್ ತಿಂಗಳು ವಿಪರೀತ ಆರ್ದ್ರತೆ (ಸಕೆಯ ವಾತಾವರಣ), ಸುಡುವ ಸೂರ್ಯನ ತಾಪ ಹಾಗೂ ತೀವ್ರ ಮಳೆ ಕೊರತೆಯನ್ನು ಹೊತ್ತು ತರುತ್ತಿದೆ. ಒಟ್ಟಾರೆಯಾಗಿ, ಮುಂಬರುವ ಈ ಬಿಸಿ ಮತ್ತು ಒಣ ಹವಾಮಾನವು ಪ್ರತಿಯೊಬ್ಬರಿಗೂ ಮತ್ತು ಕೃಷಿ ಕ್ಷೇತ್ರಕ್ಕೆ ದೊಡ್ಡ ಪರೀಕ್ಷೆಯಾಗಲಿದೆ.