ಪಶ್ಚಿಮ ಬಂಗಾಳದ ಸಿಟಾಂಗ್‌ನ ರೆಸಾರ್ಟ್‌ನಲ್ಲಿ ಹನಿಮೂನ್‌ಗೆ ತೆರಳಿದ್ದ ನವವಧು ನಿಕಿತಾ ದಾಸ್ ಬಾರ್ಬೆಕ್ಯೂ ವೇಳೆ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇಂಧನ ಸುರಿದ ಪರಿಣಾಮ ಬೆಂಕಿ ಸ್ಫೋಟಗೊಂಡಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೆಸಾರ್ಟ್‌ನ ಭದ್ರತಾ ಲೋಪದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳ: ಎಂಜಾಯ್ ಮಾಡಲು ಹನಿಮೂನ್‌ಗೆ ಹೋಗಿದ್ದ ದಂಪತಿಯೊಂದು ಪ್ರಾಣಾಪಾಯಕ್ಕೆ ಸಿಲುಕಿ ನರಳಾಟ ನಡೆಸಿದೆ. ಪಶ್ಚಿಮ ಬಂಗಾಳದ ಕಲಿಂಪಾಂಗ್ ಜಿಲ್ಲೆಯ ಸಿಟಾಂಗ್‌ನಲ್ಲಿರುವ ಖಾಸಗಿ ರೆಸಾರ್ಟ್‌ ಒಂದರಲ್ಲಿ ಬಾರ್ಬೆಕ್ಯೂ (Barbecue) ವೇಳೆ ಬೆಂಕಿ ಸ್ಫೋಟಗೊಂಡು 20 ವರ್ಷದ ನವವಧು ನಿಕಿತಾ ದಾಸ್ ತೀವ್ರವಾಗಿ ಗಾಯಗೊಂಡಿದ್ದಾರೆ.

ಆಗಿದ್ದೇನು?

ಕೇವಲ ಎರಡು ತಿಂಗಳ ಹಿಂದೆಯಷ್ಟೇ ಚೋಪ್ರಾ ಮೂಲದ ಸಮೀರ್ ದಾಸ್ ಜೊತೆ ನಿಕಿತಾ ಮದುವೆ ಆಗಿದ್ದರು. ಪತಿ ಜೊತೆ ಬೆಟ್ಟದ ಸೌಂದರ್ಯ ಸವಿಯಲು ಸಿಟಾಂಗ್‌ಗೆ ಹೋದಾಗ ಅವಘಡ ಸಂಭವಿಸಿದೆ. ಇನ್ನು ಘಟನೆಯ ಭೀಕರ ದೃಶ್ಯಗಳು ರೆಸಾರ್ಟ್‌ನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕವಾಗಿ ವೈರಲ್ ಆಗಿದೆ.

ಉರಿಯುತ್ತಿದ್ದ ಬಾರ್ಬೆಕ್ಯೂ ಬೆಂಕಿಯ ಬಳಿ ಕುಳಿತಿದ್ದ ವ್ಯಕ್ತಿಯೊಬ್ಬ ಬಾಟಲಿಯಲ್ಲಿದ್ದ ದ್ರವ ರೂಪದ ಇಂಧನವನ್ನು (Accelerant) ದಿಢೀರನೆ ಸುರಿದ್ದೇ ಈ ದುರಂತಕ್ಕೆ ಕಾರಣ. ಇಂಧನ ಸುರಿದ್ದ ತಕ್ಷಣವೇ ಬೆಂಕಿ ದೊಡ್ಡ ಮಟ್ಟದ 'ಫೈರ್ ಬಾಲ್' ಆಗಿ ಸ್ಫೋಟಗೊಂಡು, ಎದುರಿಗೆ ಕುಳಿತಿದ್ದ ನಿಕಿತಾ ಅವರತ್ತ ನೇರವಾಗಿ ಚಿಮ್ಮಿದೆ. ನೋಡನೋಡುತ್ತಿದ್ದಂತೆಯೇ ನಿಕಿತಾ ಸಂಪೂರ್ಣವಾಗಿ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿಕೊಂಡಿದ್ದಾರೆ.

ಘಟನೆ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಪತಿ ಸಮೀರ್ ದಾಸ್ ಹಾಗೂ ಸುತ್ತಮುತ್ತಲಿನ ಜನರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ತಮ್ಮ ಧರಿಸಿದ್ದ ಬಟ್ಟೆಗಳಿಂದ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ನಿಕಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯು ಬೆಟ್ಟದ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ನಡೆಯುತ್ತಿರುವ ರೆಸಾರ್ಟ್‌ಗಳು ಹಾಗೂ ಅಲ್ಲಿನ ಭದ್ರತಾ ಲೋಪಗಳ ಕುರಿತು ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ.

ತೆರೆದ ಜಾಗದಲ್ಲಿ ಬೆಂಕಿ (Open Fire) ಬಳಸುವಾಗ ಅಗತ್ಯವಾಗಿ ಇರಬೇಕಾದ ಅಗ್ನಿಶಾಮಕ ಉಪಕರಣಗಳು (Fire Extinguishers) ಅಥವಾ ಯಾವುದೇ ಮುನ್ನೆಚ್ಚರಿಕಾ ಕ್ರಮಗಳು ಅಲ್ಲಿರಲಿಲ್ಲ ಎಂಬ ಆಕ್ರೋಶ ಕೇಳಿಬಂದಿದೆ. ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಅಪಾಯಕಾರಿ ರಾಸಾಯನಿಕಗಳನ್ನು ಬಳಸುವಾಗ ತರಬೇತಿ ಹೊಂದಿದ್ದ ಯಾವುದೇ ಸಿಬ್ಬಂದಿ ಕೂಡ ಅಲ್ಲಿ ಇರಲಿಲ್ಲ ಎನ್ನಲಾಗುತ್ತಿದೆ. ಈ ಭೀಕರ ಘಟನೆಯ ಬೆನ್ನಲ್ಲೇ, ಹಿಮಾಲಯನ್ ಪ್ರದೇಶದ ಅನಧಿಕೃತ ರೆಸಾರ್ಟ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಹಾಗೂ ಪ್ರವಾಸಿಗರು ಆಗ್ರಹಿಸಿದ್ದಾರೆ.

Scroll to load tweet…