ಟಾಟಾ ಸನ್ಸ್ ಆಡಳಿತ ಮಂಡಳಿಯು ಎನ್. ಚಂದ್ರಶೇಖರನ್ ಅವರನ್ನು ಅಧ್ಯಕ್ಷರಾಗಿ ಮುಂದುವರಿಸಲು ನಿರ್ಧರಿಸಿದೆ. ಆದರೆ, ಈ ನಿರ್ಧಾರವನ್ನು ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಕಾನೂನುಬಾಹಿರ ಎಂದು ಕರೆದಿದ್ದು, ಮುಂಬರುವ ವಾರ್ಷಿಕ ಮಹಾಸಭೆಯಲ್ಲಿ ಅವರನ್ನು ವಜಾಗೊಳಿಸಲು ಸಿದ್ಧತೆ ನಡೆಸಿದ್ದಾರೆ.

ಮುಂಬೈ (ಸೆ.17): ಭಾರತದ ಅತಿ ದೊಡ್ಡ ಉದ್ಯಮ ಸಮೂಹವಾಗಿರುವ ಟಾಟಾ ಗ್ರೂಪ್‌ನ ಹೋಲ್ಡಿಂಗ್ ಕಂಪನಿ 'ಟಾಟಾ ಸನ್ಸ್'ನಲ್ಲಿ (Tata Sons) ನಾಯಕತ್ವದ ಸಂಘರ್ಷ ಮತ್ತೆ ತೀವ್ರರೂಪ ಪಡೆದುಕೊಂಡಿದೆ. ಸೆಪ್ಟೆಂಬರ್ 17 ರಂದು ನಡೆದ ಟಾಟಾ ಸನ್ಸ್ ಆಡಳಿತ ಮಂಡಳಿ (Board) ಸಭೆಯಲ್ಲಿ, ಪ್ರಸ್ತುತ ಅಧ್ಯಕ್ಷ ಎನ್. ಚಂದ್ರಶೇಖರನ್ (N Chandrasekaran) ಅವರನ್ನೇ ಹುದ್ದೆಯಲ್ಲಿ ಮುಂದುವರಿಸಲು 4-1 ಮತಗಳ ಅಂತರದಿಂದ ಅನುಮೋದನೆ ನೀಡಲಾಗಿದೆ. ಆದರೆ, ಈ ನಿರ್ಧಾರವನ್ನು ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ 'ಕಾನೂನುಬಾಹಿರ' ಎಂದು ಕರೆದಿದ್ದು, ಮುಂಬರುವ ವಾರ್ಷಿಕ ಮಹಾಸಭೆಯಲ್ಲಿ (AGM) ಚಂದ್ರಶೇಖರನ್ ಅವರನ್ನು ವಜಾಗೊಳಿಸಲು ಸಿದ್ಧತೆ ನಡೆಸಿದ್ದಾರೆ. ಕೆಲವೇ ವಾರಗಳ ಹಿಂದೆ ತಣ್ಣಗಾಯಿತು ಎನ್ನಲಾಗಿದ್ದ ನಾಯಕತ್ವದ ಉತ್ತರಾಧಿಕಾರ ಪ್ರಶ್ನೆಯು ಈ ಹಠಾತ್ ಬೆಳವಣಿಗೆಯಿಂದಾಗಿ ಮತ್ತೆ ದೇಶದ ಕಾರ್ಪೊರೇಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

"ನನ್ನ ವಿಟೋ ಅಧಿಕಾರವನ್ನು ಅಕ್ರಮವಾಗಿ ಮೀರಲಾಗಿದೆ": ನೋಯೆಲ್ ಟಾಟಾ ಆಕ್ರೋಶ

ಸಭೆಯ ತೀರ್ಮಾನದ ಕುರಿತು ಪ್ರತಿಕ್ರಿಯಿಸಿದ ನೋಯೆಲ್ ಟಾಟಾ, ಮತದಾನದ ಸಿಂಧುತ್ವವನ್ನು ಮುಕ್ತವಾಗಿ ಪ್ರಶ್ನಿಸಿದ್ದಾರೆ. 'ಚಂದ್ರಶೇಖರನ್ ಅವರನ್ನು ಅಧ್ಯಕ್ಷರನ್ನಾಗಿ ಮುಂದುವರಿಸುವ ಪ್ರಸ್ತಾಪಕ್ಕೆ ನಾನು ವಿರುದ್ಧವಾಗಿ ಮತ ಚಲಾಯಿಸಿದೆ. ಕಾನೂನು ಸಲಹೆಯೊಂದನ್ನು ನೆಪವಾಗಿಟ್ಟುಕೊಂಡು ನನ್ನ ವಿಟೋ (Veto) ಅಧಿಕಾರವನ್ನು ಅಕ್ರಮವಾಗಿ ಮೀರಲಾಗಿದೆ. ಈ ಸಂಪೂರ್ಣ ನಿರ್ಧಾರವೇ ಕಾನೂನುಬಾಹಿರವಾಗಿದ್ದು, ಸಭೆಯಲ್ಲಿ ನನ್ನ ವಿರೋಧವನ್ನು (Dissent) ಅಧಿಕೃತವಾಗಿ ದಾಖಲಿಸಿದ್ದೇನೆ' ಎಂದು ನೋಯೆಲ್ ಟಾಟಾ ಸ್ಪಷ್ಟಪಡಿಸಿದ್ದಾರೆ.

ಮೂಲಗಳ ಪ್ರಕಾರ, ನೋಯೆಲ್ ಟಾಟಾ ನೇತೃತ್ವದ 'ಟಾಟಾ ಟ್ರಸ್ಟ್ಸ್' ಮುಂದಿನ ಎಜಿಎಂ (AGM) ಸಭೆಯಲ್ಲಿ ಚಂದ್ರಶೇಖರನ್ ಅವರನ್ನು ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಲು ಹೆಜ್ಜೆ ಇಡಲಿದೆ. 'ನಿರ್ದೇಶಕ ಹುದ್ದೆಯಿಂದ ವಜಾಗೊಂಡರೆ ಅವರು ಅಧ್ಯಕ್ಷರಾಗಿ ಮುಂದುವರಿಯಲು ಸಾಧ್ಯವಿಲ್ಲ' ಎಂದು ಪ್ರಕರಣದ ಆಪ್ತ ಮೂಲಗಳು ತಿಳಿಸಿವೆ. ಸದ್ಯಕ್ಕೆ 'ಎಸ್‌ಆರ್‌ಟಿಟಿ' ಗೆ (SRTT) ಸಂಬಂಧಿಸಿದ ಕಾನೂನು ತೊಡಕುಗಳು ಬಗೆಹರಿದ ತಕ್ಷಣವೇ ಈ ಎಜಿಎಂ ದಿನಾಂಕ ನಿಗದಿಯಾಗಲಿದೆ.

ವಿವಾದದ ಮೂಲ: 'ಆರ್ಟಿಕಲ್ಸ್ ಆಫ್ ಅಸೋಸಿಯೇಷನ್' ನಿಯಮ

ಈ ಬಿಕ್ಕಟ್ಟಿನ ಕೇಂದ್ರಬಂಧು ಟಾಟಾ ಸನ್ಸ್‌ನ 'ಆರ್ಟಿಕಲ್ಸ್ ಆಫ್ ಅಸೋಸಿಯೇಷನ್' ನಿಯಮದಲ್ಲಿದೆ. ಇದರ ಪ್ರಕಾರ, ಟಾಟಾ ಟ್ರಸ್ಟ್ಸ್‌ನಿಂದ ಟಾಟಾ ಸನ್ಸ್ ಮಂಡಳಿಗೆ ನಾಮನಿರ್ದೇಶನಗೊಂಡ ನಿರ್ದೇಶಕರ ಬಹುಮತದ ಒಪ್ಪಿಗೆಯಿದ್ದಾಗ ಮಾತ್ರ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬಹುದು. ಆದರೆ, ಸಭೆಯಲ್ಲಿ ಟೈ (Deadlock) ಉಂಟಾದಾಗ ಅಧ್ಯಕ್ಷರಿಗೆ 'ಕ್ಯಾಸ್ಟಿಂಗ್ ವೋಟ್' (Casting Vote) ಬಳಸುವ ಹಕ್ಕಿದೆ ಎಂಬ ಕಾನೂನು ಸಲಹೆಯ ಆಧಾರದ ಮೇಲೆ ಟಾಟಾ ಸನ್ಸ್ ಕಾರ್ಯಾಂಗ ಆಡಳಿತ ಮುಂದುವರಿದಿದೆ ಎನ್ನಲಾಗಿದೆ. ಪ್ರಸ್ತುತ ಟಾಟಾ ಸನ್ಸ್ ಮಂಡಳಿಯಲ್ಲಿ ಎನ್. ಚಂದ್ರಶೇಖರನ್, ನೋಯೆಲ್ ಟಾಟಾ, ವೇಣು ಶ್ರೀನಿವಾಸನ್, ಸೌರಭ್ ಅಗರ್ವಾಲ್, ಹರೀಶ್ ಮನ್‌ವಾನಿ ಹಾಗೂ ಅನಿತಾ ಮರಂಗೋಲಿ ಜಾರ್ಜ್ ಇದ್ದಾರೆ.

ವಿಶೇಷವೆಂದರೆ, ಕಳೆದ ಆಗಸ್ಟ್‌ನಲ್ಲಿ ಚಂದ್ರಶೇಖರನ್ ಅವರು ತಮ್ಮ ಪ್ರಸ್ತುತ ಅವಧಿ ಮುಗಿಯುವ 2027 ರ ಫೆಬ್ರವರಿ 20 ರ ನಂತರ ಮೂರನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯುವುದಿಲ್ಲ ಎಂದು ಸ್ವಯಂ ಘೋಷಿಸಿದ್ದರು. ಪ್ರಮುಖ ಟ್ರಸ್ಟ್ ಆದ 'ಸರ್ ದೊರಾಬ್ಜಿ ಟಾಟಾ ಟ್ರಸ್ಟ್' (SDTT) ಕೂಡ ಅವರ ನಿರ್ಧಾರವನ್ನು ಗೌರವಿಸಿ, ಹೊಸ ಅಧ್ಯಕ್ಷರ ಆಯ್ಕೆಗೆ ಶೋಧನಾ ಸಮಿತಿ ರಚಿಸಲು ಪ್ರಕ್ರಿಯೆ ಆರಂಭಿಸಿತ್ತು. ಆದರೆ ಗುರುವಾರದ ಸಭೆಯಲ್ಲಿ ಭಾರಿ ತಿರುವು ಸಿಕ್ಕಿದೆ.

ಎಜಿಎಂನಲ್ಲಿ 'ಟಾಟಾ ಟ್ರಸ್ಟ್ಸ್' ನಿರ್ಣಾಯಕ; 66% ಷೇರುಗಳ ಬಲ!

ಈಗ ಎಲ್ಲರ ಗಮನ ಡಿಸೆಂಬರ್ 31 ರೊಳಗೆ ನಡೆಯಬೇಕಾಗಿರುವ ಟಾಟಾ ಸನ್ಸ್‌ನ ಮುಂದೂಡಲ್ಪಟ್ಟ ವಾರ್ಷಿಕ ಮಹಾಸಭೆಯ (AGM) ಕಡೆಗೆ ನೆಟ್ಟಿದೆ. ಚಂದ್ರಶೇಖರನ್ ಅವರು ಆಡಳಿತ ಮಂಡಳಿಯಲ್ಲಿ ತಮ್ಮ ಸರದಿಯ ಪ್ರಕಾರ ನಿವೃತ್ತರಾಗುತ್ತಿದ್ದು, ನಿರ್ದೇಶಕರಾಗಿ ಅವರ ಮರುಆಯ್ಕೆಗೆ ಷೇರುದಾರರ ಒಪ್ಪಿಗೆ ಕಡ್ಡಾಯವಾಗಿದೆ. ಟಾಟಾ ಸನ್ಸ್‌ನಲ್ಲಿ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ (SDTT) ಮತ್ತು ಸರ್ ರತನ್ ಟಾಟಾ ಟ್ರಸ್ಟ್ (SRTT) ಜಂಟಿಯಾಗಿ ಶೇಕಡಾ 66 ರಷ್ಟು ಷೇರುಗಳನ್ನು ಹೊಂದಿವೆ. ಹೀಗಾಗಿ ಷೇರುದಾರರ ಸಭೆಯಲ್ಲಿ ಟ್ರಸ್ಟ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಲಿದೆ.

ಕಾನೂನು ತೊಡಕು

ಮಹಾರಾಷ್ಟ್ರ ಚಾರಿಟಿ ಕಮಿಷನರ್ ಮುಂದೆ ನಡೆಯುತ್ತಿರುವ ವಿಚಾರಣೆಗಳಿಂದಾಗಿ 'SRTT' ಟ್ರಸ್ಟಿಗಳ ಸಭೆ ಕರೆಯಲು ತಡೆಯಾಜ್ಞೆಯಿದೆ. ಇದರಿಂದಾಗಿ ಆ ಕಡೆಯಿಂದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಗಸ್ಟ್ 18 ರಂದು ನಡೆಯಬೇಕಿದ್ದ ಎಜಿಎಂ ಕೂಡ SDTT ಮತ್ತು SRTT ಜಂಟಿಯಾಗಿ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಲು ಸಾಧ್ಯವಾಗದ ಕಾರಣ ಮುಂದೂಡಲ್ಪಟ್ಟಿತ್ತು. ಈ ಸಮಸ್ಯೆ ಬಗೆಹರಿಯದಿದ್ದರೆ ಎಜಿಎಂ ಮತ್ತೆ ಸಂಕೀರ್ಣಗೊಳ್ಳಬಹುದು.

ಆರ್‌ಬಿಐ ಲಿಸ್ಟಿಂಗ್ ನಿಯಮ ಹಾಗೂ ಚಂದ್ರಶೇಖರನ್ ಹಾದಿ

ಈ ನಡುವೆ, 'ಕೋರ್ ಇನ್ವೆಸ್ಟ್‌ಮೆಂಟ್ ಕಂಪನಿ' (CIC) ನೋಂದಣಿಯನ್ನು ರದ್ದುಗೊಳಿಸುವಂತೆ ಟಾಟಾ ಸನ್ಸ್ ಸಲ್ಲಿಸಿದ್ದ ಅರ್ಜಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇತ್ತೀಚೆಗೆ ತಿರಸ್ಕರಿಸಿದೆ. ಸಂಪೂರ್ಣ ಸಾಲಮುಕ್ತವಾದ ನಂತರ ಟಾಟಾ ಸನ್ಸ್ ಈ ಅರ್ಜಿ ಸಲ್ಲಿಸಿತ್ತು. ಆದರೆ ಆರ್‌ಬಿಐ ಇದನ್ನು ತಡೆದಿರುವುದರಿಂದ, 'ಅಪ್ಪರ್ ಲೇಯರ್ NBFC' ನಿಯಮಗಳ ಪ್ರಕಾರ ಟಾಟಾ ಸನ್ಸ್ ಶೀಘ್ರದಲ್ಲೇ ಷೇರು ಮಾರುಕಟ್ಟೆಯಲ್ಲಿ ಸಾರ್ವಜನಿಕ ಲಿಸ್ಟಿಂಗ್ (IPO/Listing) ಆಗುವುದು ಕಡ್ಡಾಯವಾಗಬಹುದು.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್ ಹಾಗೂ ಏರ್ ಇಂಡಿಯಾದಂತಹ ದೈತ್ಯ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಟಾಟಾ ಸನ್ಸ್ ಲಿಸ್ಟಿಂಗ್ ಹಂತಕ್ಕೆ ಹೋದರೆ, ಆಡಳಿತದಲ್ಲಿ ಅನುಭವ ಹಾಗೂ ಸ್ಥಿರತೆ ಅಗತ್ಯ ಎಂದು ಮಂಡಳಿಯ ನಾಲ್ವರು ನಿರ್ದೇಶಕರು ಚಂದ್ರಶೇಖರನ್ ಪರ ಮತ ಚಲಾಯಿಸಿದ್ದಾರೆ.

2017 ರಿಂದ ಅಧ್ಯಕ್ಷರಾಗಿರುವ ಚಂದ್ರಶೇಖರನ್, ಏರ್ ಇಂಡಿಯಾ ಸ್ವಾಧೀನ ಸೇರಿದಂತೆ ಪ್ರಮುಖ ಕಾರ್ಯತಂತ್ರಗಳ ನೇತೃತ್ವ ವಹಿಸಿದ್ದಾರೆ. ಮಂಡಳಿಯಲ್ಲಿ ಅವರಿಗೆ 4-1 ರ ಬೆಂಬಲ ಸಿಕ್ಕಿದ್ದರೂ, ನೋಯೆಲ್ ಟಾಟಾ ಅವರ ತೀವ್ರ ವಿರೋಧ ಹಾಗೂ ಷೇರುದಾರರ ಬಲದಿಂದಾಗಿ ಈ ಸಮರ ಈಗ ಬೋರ್ಡ್‌ರೂಮ್‌ನಿಂದ ಷೇರುದಾರರ ಅಂಗಳಕ್ಕೆ ತಲುಪಿದೆ.