ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ (ಎನ್‌ಟಿಎ) ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಮಹತ್ವದ ಸುಧಾರಣೆಗಳನ್ನು ಜಾರಿಗೆ ತಂದಿದೆ. ಪ್ರಶ್ನೆಪತ್ರಿಕೆ ಪರಿಶೀಲನೆಗೆ 4 ಹಂತದ ವ್ಯವಸ್ಥೆ, 600 ಹಳೆಯ ತಜ್ಞರ ಬದಲಾವಣೆ ಮತ್ತು ಎನ್‌ಟಿಎ ಕಚೇರಿಗಳಿಗೆ ಸಿಐಎಸ್‌ಎಫ್ ಭದ್ರತೆ ಒದಗಿಸುವಂತಹ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಗಿದೆ.
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ಪ್ರಶ್ನೆಪತ್ರಿಕೆ ಪರಿಶೀಲನೆಗೆ 4 ಹಂತದ ವ್ಯವಸ್ಥೆ, 600 ಹಳೆಯ ತಜ್ಞರ ಬದಲಿಸಿ ಹೊಸಬರ ನೇಮಕ ಹಾಗೂ ಎನ್‌ಟಿಎ ಕಚೇರಿಗಳಿಗೆ ಸಿಐಎಸ್‌ಎಫ್ ಭದ್ರತೆ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದೆ.
ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ ಜೋಶಿ ಸೋಮವಾರ ಸಭೆ ನಡೆಸಿ, ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
4 ಹಂತದ ತಪಾಸಣಾ ವ್ಯವಸ್ಥೆ
ಪರೀಕ್ಷಾ ಪಾರದರ್ಶಕತೆಯನ್ನು ಹೆಚ್ಚಿಸುವ ಭಾಗವಾಗಿ 600 ತಜ್ಞರನ್ನು ತಂಡದಿಂದ ತೆಗೆದುಹಾಕಿ, ಹೊಸ ತಜ್ಞರನ್ನು ನಿಯೋಜಿಸಲಾಗಿದೆ. ಪ್ರಶ್ನೆಪತ್ರಿಕೆಗಳ ಪರಿಶೀಲನೆಯನ್ನು ಬಿಗಿಗೊಳಿಸಲು 4 ಹಂತದ ತಪಾಸಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಅಲ್ಲದೆ, ಮುಂದಿನ 2-3 ವಾರಗಳಲ್ಲಿ 20ರಿಂದ 25 ಹೊಸ ಅಧಿಕಾರಿಗಳನ್ನು ಎನ್‌ಟಿಎ ತಂಡಕ್ಕೆ ಸೇರ್ಪಡೆಗೊಳಿಸಲಾಗುವುದು. ಸಂಸ್ಥೆಯ ಕಚೇರಿಗಳನ್ನು ಶೀಘ್ರದಲ್ಲೇ ಹೊಸ ಆವರಣಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಅಲ್ಲಿ ಸಿಐಎಸ್‌ಎಫ್ ಸಿಬ್ಬಂದಿಯೊಂದಿಗೆ ಕಟ್ಟುನಿಟ್ಟಿನ ಭದ್ರತೆಯನ್ನು ಒದಗಿಸಲಾಗುವುದು ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.


