ನೀಟ್-ಯುಜಿ 2026 ಪೇಪರ್ ಲೀಕ್ ಪ್ರಕರಣದ ಮೂವರು ಆರೋಪಿಗಳು ತಮಗೆ ಪಾಲಿಗ್ರಾಫ್ ಮತ್ತು ಲೈ ಡಿಟೆಕ್ಟರ್ ಟೆಸ್ಟ್ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೆ, 13 ಆರೋಪಿಗಳ ವಿರುದ್ಧ ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್ ಮೇಲಿನ ಆದೇಶವನ್ನು ನ್ಯಾಯಾಲಯ ಮುಂದೂಡಿದೆ.

ನೀಟ್-ಯುಜಿ 2026 ಪೇಪರ್ ಲೀಕ್ ಪ್ರಕರಣದ ಮೂವರು ಆರೋಪಿಗಳು ತಮಗೆ ಪಾಲಿಗ್ರಾಫ್, ಬ್ರೈನ್-ಮ್ಯಾಪಿಂಗ್ ಮತ್ತು ಲೈ ಡಿಟೆಕ್ಟರ್ ಟೆಸ್ಟ್ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ರೌಸ್ ಅವೆನ್ಯೂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ವಿಶೇಷ ನ್ಯಾಯಾಧೀಶ (fast track court) ಅಜಯ್ ಗುಪ್ತಾ ಅವರು, ಆರೋಪಿಗಳಾದ ಮಂಗಿಲಾಲ್ ಬಿವಾಲ್, ವಿಕಾಸ್ ಬಿವಾಲ್ ಮತ್ತು ದಿನೇಶ್ ಬಿವಾಲ್ ಸಲ್ಲಿಸಿದ್ದ ಈ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಪಾರದರ್ಶಕ ಮತ್ತು ನ್ಯಾಯಯುತ ತನಿಖೆ ಪಾಲಿಗ್ರಾಫ್, ಬ್ರೈನ್-ಮ್ಯಾಪಿಂಗ್ ಮತ್ತು ಲೈ ಡಿಟೆಕ್ಟರ್ ಟೆಸ್ಟ್ ಈ ಮೂರು ಸಹಕಾರಿಯಾಗಲಿವೆ ಎಂದು ಆರೋಪಿಗಳು ವಾದಿಸಿದ್ದರು. ಆರೋಪಿಗಳ ಪರ ವಕೀಲ ಎಪಿ ಸಿಂಗ್, ಸಂವಿಧಾನದ 21ನೇ ವಿಧಿಯಡಿ ನ್ಯಾಯಯುತ ತನಿಖೆ ಮತ್ತು ವಿಚಾರಣೆ ಆರೋಪಿಗಳ ಹಕ್ಕು ಎಂದು ವಾದ ಮಂಡಿಸಿದರು. ಆದರೆ, ಕೇಂದ್ರ ತನಿಖಾ ದಳ (ಸಿಬಿಐ) ಈ ಅರ್ಜಿಯನ್ನು ಬಲವಾಗಿ ವಿರೋಧಿಸಿತು. ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ವಿಕೆ ಪಾಠಕ್, ಈ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ವಾದಿಸಿದರು. ಅಲ್ಲದೆ ಈ ಪ್ರಕರಣದ ತ್ವರಿತ ವಿಚಾರಣೆಗಾಗಿ ಸರ್ಕಾರ ಈಗಾಗಲೇ ವಿಶೇಷ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯವನ್ನು ಸ್ಥಾಪಿಸಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಸಿಬಿಐ ಚಾರ್ಜ್‌ಶೀಟ್ ಮತ್ತು ನ್ಯಾಯಾಲಯದ ನಡಾವಳಿ

ಇದೇ ವೇಳೆ ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್ ಅನ್ನು ವಿಚಾರಣೆಗೆ ಸ್ವೀಕರಿಸುವ ಕುರಿತಾದ ಆದೇಶವನ್ನು ನ್ಯಾಯಾಲಯ ಮುಂದೂಡಿದೆ. ದಾಖಲೆಗಳು ಬಹಳ ದೊಡ್ಡದಾಗಿರುವುದರಿಂದ ಆದೇಶವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ತಿಳಿಸಿತು. ಈ ಕುರಿತ ಆದೇಶವನ್ನು ಆಗಸ್ಟ್ 12 ರಂದು ಪ್ರಕಟಿಸಲಾಗುವುದು. ಆರೋಪಿಗಳ ನ್ಯಾಯಾಂಗ ಬಂಧನವನ್ನು ಕೂಡ ಆಗಸ್ಟ್ 12ರವರೆಗೆ ವಿಸ್ತರಿಸಲಾಗಿದೆ. ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ನೀಟ್-ಯುಜಿ 2026 ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮತ್ತು ಪೇಪರ್ ಲೀಕ್ ಸಂಬಂಧ ಸಿಬಿಐ 13 ಆರೋಪಿಗಳ ವಿರುದ್ಧ ಸುಮಾರು 20,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಚಾರ್ಜ್‌ಶೀಟ್‌ನಲ್ಲಿ 360 ಸಾಕ್ಷಿಗಳು, 422 ದಾಖಲೆಗಳು ಮತ್ತು 43 ವಸ್ತುಗಳನ್ನು ಸಿಬಿಐ ಉಲ್ಲೇಖಿಸಿದೆ. ಭಾರತೀಯ ನ್ಯಾಯ ಸಂಹಿತೆಯಡಿ ಕ್ರಿಮಿನಲ್ ಪಿತೂರಿ, ವಂಚನೆ, ನಂಬಿಕೆ ದ್ರೋಹ ಮತ್ತು ಸಾಕ್ಷ್ಯ ನಾಶದಂತಹ ಆರೋಪಗಳನ್ನು ಆರೋಪಿಗಳ ಮೇಲೆ ಹೊರಿಸಲಾಗಿದೆ. ಜೊತೆಗೆ, ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ, 2024ರ ನಿಬಂಧನೆಗಳನ್ನು ಸಹ ಸೇರಿಸಲಾಗಿದೆ.

ಸಿಬಿಐ ತನಿಖೆಯಲ್ಲೇನಿದೆ?

ಸಿಬಿಐ ಪ್ರಕಾರ ಮೇ 3 ರಂದು ನಡೆದ ನೀಟ್-ಯುಜಿ 2026 ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಮೇ 12 ರಂದು ದೂರು ನೀಡಿತ್ತು. ಅದೇ ದಿನ ಎಫ್‌ಐಆರ್ ದಾಖಲಿಸಿಕೊಂಡ ಸಿಬಿಐ, 72 ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಎಂಟು ಸೈಬರ್ ಫೋರೆನ್ಸಿಕ್ ತಜ್ಞರನ್ನು ಒಳಗೊಂಡ ಹಲವು ತಂಡಗಳನ್ನು ರಚಿಸಿತ್ತು.

ಸಿಬಿಐ ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ, ದೆಹಲಿ ಸೇರಿದಂತೆ ಹಲವು ರಾಜ್ಯಗಳ 92 ಸ್ಥಳಗಳಲ್ಲಿ ಶೋಧ ನಡೆಸಿತ್ತು. ಈ ವೇಳೆ ಡಿಜಿಟಲ್ ಸಾಧನಗಳು, ಸಂವಹನ ಉಪಕರಣಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮೇ 13 ರಂದು ಮೊದಲ ಆರೋಪಿಯನ್ನು ಬಂಧಿಸಲಾಗಿದ್ದು, ಇಲ್ಲಿಯವರೆಗೆ ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ. ಇವರಲ್ಲಿ ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯಗಳ ಮೂವರು ಎನ್‌ಟಿಎ ವಿಷಯ ತಜ್ಞರೂ ಸೇರಿದ್ದಾರೆ.

ಪ್ರಶ್ನೆಪತ್ರಿಕೆಗಳನ್ನು ಪಡೆದು ಹಂಚಿದ ಆರೋಪದಲ್ಲಿ ಹಲವಾರು ಮಧ್ಯವರ್ತಿಗಳು ಮತ್ತು ಕೋಚಿಂಗ್ ಸಂಸ್ಥೆಗಳಿಗೆ ಸಂಬಂಧಿಸಿದ ಇಬ್ಬರನ್ನು ಸಹ ಬಂಧಿಸಲಾಗಿದೆ. ಹಣದ ಹರಿವಿನ ತನಿಖೆಯ ಭಾಗವಾಗಿ ಸಿಬಿಐ ಹಲವಾರು ಬ್ಯಾಂಕ್ ಖಾತೆಗಳು, ಬ್ಯಾಂಕ್ ಲಾಕರ್‌ಗಳು ಮತ್ತು ಒಂದು ಡಿಮ್ಯಾಟ್ ಖಾತೆಯನ್ನು ಸ್ಥಗಿತಗೊಳಿಸಿದೆ.