ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಅಧಿಕಾರಿಯೊಂದಿಗೆ ಸಂಪರ್ಕ ಹೊಂದಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ. ಭಾರತದ ವಿರುದ್ಧ ಗೂಢಚಾರಿಕೆ ಆರೋಪದಡಿ ಬಂಧಿತಳಾಗಿರುವ ಜ್ಯೋತಿ, ಪಾಕಿಸ್ತಾನದಲ್ಲಿ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ನವದೆಹಲಿ: ಭಾರತದ ವಿರುದ್ಧ ಗೂಢಚಾರಿಕೆ ನಡೆಸಿದ ಆರೋಪದಡಿ ಬಂಧಿಸಲ್ಪಟ್ಟು ತನಿಖೆಗೆ ಒಳಗಾಗಿರುವ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾಗೆ ಪಾಕಿಸ್ತಾನ ಹಾಗೂ ಅಲ್ಲಿನ ಅಧಿಕಾರಿಗಳೊಂದಿಗೆ ಇರುವ ನಂಟುಗಳು ಬಗೆದಷ್ಟೂ ಬಯಲಾಗುತ್ತಿವೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಅಧಿಕಾರಿ ಅಲಿ ಹಸನ್‌ ಎಂಬಾತನೊಂದಿಗೆ ಜ್ಯೋತಿ ಸಂಪರ್ಕದಲ್ಲಿದ್ದು, ಇಬ್ಬರ ನಡುವಿನ ಸಂಭಾಷಣೆಗಳು ಈಗ ಬೆಳಕಿಗೆ ಬಂದಿದೆ. ಅಲಿ ಜತೆ ವಾಟ್ಸ್‌ಅಪ್‌ನಲ್ಲಿ ಚ್ಯಾಟ್‌ ಮಾಡುತ್ತಿದ್ದ ಜ್ಯೋತಿ, ‘ನನ್ನ ಮದುವೆಯನ್ನು ಪಾಕಿಸ್ತಾನದಲ್ಲಿ ಮಾಡಿಸು’ ಎಂದು ಕೇಳಿಕೊಂಡಿದ್ದಳು ಎಂದು ವರದಿಯಾಗಿದೆ. 

ಈ ಮೂಲಕ ಆಕೆಯ ಪಾಕ್‌ ಪ್ರೇಮ ಬಯಲಾಗಿದೆ. 2023ರಿಂದಲೂ ಜ್ಯೋತಿ ಆತನ ಸಂಪರ್ಕದಲ್ಲಿದ್ದಳು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.ಅಂತೆಯೇ, ಅವರಿಬ್ಬರು ಭಾರತದ ರಹಸ್ಯ ಕಾರ್ಯಾಚರಣೆಗಳ ಬಗ್ಗೆಯೂ ರಹಸ್ಯ ಭಾಷೆಯಲ್ಲಿ (ಕೋಡ್‌ ಮೂಲಕ) ಚರ್ಚಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಜ್ಯೋತಿಗೆ ಸೇರಿದ 4 ಬ್ಯಾಂಕ್ ಖಾತೆಗಳ ವಿವರ ಪೊಲೀಸರ ಕೈ ಸೇರಿದ್ದು, ಒಂದು ಖಾತೆಯ ಮೂಲಕ ದುಬೈನಿಂದ ವಹಿವಾಟು ನಡೆದದ್ದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ, ಆಕೆ ಎಲ್ಲಿಂದ ಹಣ ಪಡೆಯುತ್ತಿದ್ದಳು ಎಂಬುದರ ಪತ್ತೆಗೆ ತನಿಖೆ ಮುಂದುವರೆದಿದೆ. ಈವರೆಗೆ ಜ್ಯೋತಿ ಹಲವು ಬಾರಿ ಪಾಕಿಸ್ತಾನಕ್ಕೆ ಹೋಗಿಬಂದಿದ್ದು, ಭಾರತದಲ್ಲಿರುವ ಪಾಕ್‌ ದೂತಾವಾಸದ ಅಧಿಕಾರಿಯೊಂದಿಗೂ ಸಂಪರ್ಕದಲ್ಲಿದ್ದಳು.

ಜ। ಮುನೀರ್‌ ಫೀಲ್ಡ್‌ ಮಾರ್ಷಲ್‌ ಮಾಡಿದ್ದು ನಾನೇ: ಶೆಹಬಾಜ್‌ ಷರೀಫ್‌
‘ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುವ ಕಾರಣಕ್ಕೆ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ರನ್ನು ಪೀಲ್ಡ್‌ ಮಾರ್ಷಲ್ ಹುದ್ದೆಗೆ ಪದೋನ್ನತಿ ಮಾಡಿರುವುದು ನನ್ನ ನಿರ್ಧಾರವಾಗಿದೆ’ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್‌ ಹೇಳಿದ್ದಾರೆ.

ಮಂಗಳವಾರ ಶೆಹಬಾಜ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಜ. ಮುನೀರ್ ಅವರಿಗೆ ಬಡ್ತಿ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು, ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಶೆಹಬಾಜ್, ‘ ಸೇನಾ ಮುಖ್ಯಸ್ಥರಿಗೆ ಬಡ್ತಿ ನೀಡಿರುವುದು ನನ್ನ ನಿರ್ಧಾರ. ಇದಕ್ಕಾಗಿ ಹಿರಿಯ ಸಹೋದರ , ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಜೊತೆಗೆ ಸಮಾಲೋಚನೆ ನಡೆಸಿದ್ದೇನೆ’ ಎಂದರು.

ಭಾರತ ವಿಮಾನಕ್ಕೆ ಇನ್ನೂ 1 ತಿಂಗಳ ಪಾಕ್ ವಾಯುವಲಯ ನಿರ್ಬಂಧ
ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷದ ಬಳಿಕ ಭಾರತದ ಬರುವ ವಿಮಾನಗಳಿಗೆ ತನ್ನ ದೇಶದ ವಾಯುನೆಲೆಯನ್ನು ಬಂದ್ ಮಾಡಿದ್ದ ಪಾಕಿಸ್ತಾನ ಆ ನಿರ್ಬಂಧವನ್ನು ಇನ್ನು ಒಂದು ತಿಂಗಳು ಮುಂದುವರೆಸಲು ನಿರ್ಧರಿಸಿದೆ.ಪಹಲ್ಗಾಂ ನರಮೇಧದ ಬಳಿಕ ಕಳೆದ ತಿಂಗಳು ಪಾಕಿಸ್ತಾನ ಭಾರತೀಯ ವಿಮಾನಗಳಿಗೆ ತನ್ನ ದೇಶದ ವಾಯುಪ್ರದೇಶವನ್ನು ಬಂದ್ ಮಾಡಿತ್ತು.

ಇದನ್ನೂ ಓದಿ: Travel Vloggers Diary: ಪಾಕಿಸ್ತಾನ ಪರ ಗೂಢಚಾರಿಕೆ ಮಾಡಿ ಸಿಕ್ಕಿಬಿದ್ದ ಜ್ಯೋತಿ ಮಲ್ಹೋತ್ರಾ ಡೈರಿ ತುಂಬಾ ಪ್ರಣಯ ಮತ್ತು..!

ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ( ಐಸಿಎಒ) ನಿಯಮಗಳ ಪ್ರಕಾರ ಒಂದು ತಿಂಗಳಿಗಿಂತ ಹೆಚ್ಚು ಕಾಲ ವಾಯುಪ್ರದೇಶದ ಮೇಲೆ ನಿರ್ಬಂಧ ವಿಧಿಸಲು ಅವಕಾಶ ಇಲ್ಲದ ಕಾರಣ, ಮೇ 23ರವರೆಗೆ ಪಾಕಿಸ್ತಾನ ಭಾರತೀಯ ವಿಮಾನಗಳಿಗೆ ನಿರ್ಬಂಧ ಹೇರಿತ್ತು. ಮೇ 23ಕ್ಕೆ ಗಡುವು ಮುಕ್ತಾಯ ಹಿನ್ನೆಲೆಯಲ್ಲಿ ಪಾಕಿಸ್ತಾನವು ಇನ್ನು ಒಂದು ತಿಂಗಳು ವಿಸ್ತರಣೆ ಮಾಡಿ ವಾಯು ಪಡೆಗೆ ಆದೇಶಿಸುವ ಸಾಧ್ಯತೆಯಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನ ಭಾರತದ ವಿಮಾನಗಳಿಗೆ ನಿರ್ಬಂಧ ವಿಧಿಸುವುದು ಇದೇ ಮೊದಲೇನಲ್ಲ. 1999 ಕಾರ್ಗಿಲ್ ಯುದ್ಧ, 2019ರ ಪುಲ್ವಾಮ ದಾಳಿ ಸಂದರ್ಭದಲ್ಲಿಯೂ ಇಂತಹದ್ದೇ ನಡೆ ಅನುಸರಿಸಿತ್ತು.