ಪಾಕಿಸ್ತಾನ ಪರ ಗೂಢಚಾರಿಕೆ ಆರೋಪದ ಮೇಲೆ ಬಂಧಿತಳಾಗಿರುವ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾಳ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡೈರಿಯಲ್ಲಿ ಆಕೆ ಏನು ಬರೆದಿದ್ದಾಳೆ ನೊಡಿ...

ನವದೆಹಲಿ: ಪಾಕಿಸ್ತಾನ ಪರ ಗೂಢಚಾರಿಕೆ ಮಾಡಿ ಸಿಕ್ಕಿಬಿದ್ದಿರುವ ಜ್ಯೋತಿ ಮಲ್ಹೋತ್ರಾಳ ಡೈರಿಯನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದು, ಆ ಡೈರಿಯಲ್ಲಿ ಏನಿದೆ ಎಂಬುದನ್ನು ಹರ್ಯಾಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದೇಶದ ಗಡಿಯಾಚೆಗೆ ಪಾಕಿಸ್ತಾನಕ್ಕೆ ಪ್ರಯಾಣ ಮಾಡುತ್ತಾ ಟ್ರಾವೆಲ್ ವ್ಲಾಗ್ ಮಾಡುತ್ತಿದ್ದ ಜ್ಯೋತಿ ಮಲ್ಹೋತ್ರಾಳನ್ನು ಪಾಕಿಸ್ತಾನ ಪರ ಬೇಹುಗಾರಿಕೆಗೆ ಸಂಬಂಧಿಸಿದಂತೆ ಈಗ ಪೊಲೀಸರು ಬಂಧಿಸಿದ್ದಾರೆ. ಹರಿಯಾಣ ಪೊಲೀಸರು ಆಕೆಯ ವಿಚಾರಣೆ ವೇಳೆ ಆಕೆಯ ಡೈರಿಯನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದು, ಅದರ ತುಂಬೆಲ್ಲಾ ಆಕೆಯ ಪಾಕಿಸ್ತಾನ ಪ್ರೇಮವೇ ತುಂಬಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ ಕಾರ್ಯಕರ್ತರ ಜೊತೆ ಆಕೆಗಿದ್ದ ಸಂಪರ್ಕ ಹಾಗೂ ಭದ್ರತಾ ವಲಯದ ಕಣ್ತಪ್ಪಿಸಿ ದೇಶದ ಅಮೂಲ್ಯ ಮಾಹಿತಿಯನ್ನು ಪಾಕ್‌ಗೆ ಹಸ್ತಾಂತರ ಮಾಡಲು ಆಕೆ ಎನ್‌ಕ್ರಿಪ್ಟ್‌ ಆದಂತಹ ಆಪ್‌ಗಳನ್ನು ಬಳಸಿದ್ದಳು ಎಂದು ವರದಿಯಾಗಿದೆ. 

ಆಕೆ ಹಿಂದಿ ಭಾಷೆಯಲ್ಲಿ ಡೈರಿಯಲ್ಲಿ ಬರೆದಿರುವ ಕೆಲವು ಬರಹಗಳು ಹೀಗಿವೆ:

  • ಪಾಕಿಸ್ತಾನದಲ್ಲಿ ಈ ಪ್ರಯಾಣವು ಪ್ರೀತಿಯಿಂದ ತುಂಬಿತ್ತು. ನಮಗೆ ಅಲ್ಲಿನ ಸಬ್‌ಸ್ಕ್ರೈಬರ್‌ಗಳಿಂದ ಬಹಳಷ್ಟು ಪ್ರೀತಿ ಸಿಕ್ಕಿತು.
  • ಲಾಹೋರ್ ತಲುಪಲು, ರಿಕ್ಷಾದಲ್ಲಿ 20 ರೂಪಾಯಿ ತೆಗೆದುಕೊಂಡರು
  • ವಾಘಾ ಗಡಿಯಲ್ಲಿ, ನಾನು ಭಾವುಕಳಾಗಿದ್ದೆ. 
  • ಗಡಿಯ ಬೇಲಿಗಳು ದುರ್ಬಲವಾಗಿರುವಂತೆ ಕಾಣುತ್ತಿದ್ದವು. 
  • ಅಶಾಂತಿಯ ನಡುವೆ ಗಡಿಗಳನ್ನು ಮೀರಿ ಭೇಟಿಯಾಗುವ ಜನರ ಹೃದಯಗಳು ಒಂದೇ ಸಮಯದಲ್ಲಿ ಬಡಿಯುತ್ತವೆ. 
  • ಈ ಮಣ್ಣು ಇಬ್ಬರಿಗೂ ಸೇರಿದ್ದು. 
  • ಇದು ಪಾಕಿಸ್ತಾನ ಸರ್ಕಾರಕ್ಕೆ ಒಂದು ವಿನಂತಿ ಭಾರತೀಯರಿಗೆ ಮುಕ್ತವಾಗಿ ಭೇಟಿ ನೀಡಲು ಅವಕಾಶ ನೀಡಿ. 
  • ನಾವು ಲಾಹೋರ್-ವಾಘಾ ರಸ್ತೆಯ ಮೂಲಕ ಮತ್ತೆ ಬರಬೇಕು ಎಂದು ಜ್ಯೋತಿ ಮಲ್ಹೋತ್ರಾ ತನ್ನ ಡೈರಿಯ ಒಂದು ಪೇಜ್‌ನಲ್ಲಿ ಬರೆದಿದ್ದಾಳೆ.

ಮೇ 17 ರಂದು ಬಂಧಿಸಲ್ಪಟ್ಟ ಮಲ್ಹೋತ್ರಾ ಇದಕ್ಕೂ ಮೊದಲು ಭಾರತದ ಭದ್ರತಾ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತನ್ನ ನಿರ್ವಾಹಕರ ಫೋನ್ ಸಂಖ್ಯೆಗಳನ್ನು ದಾರಿತಪ್ಪಿಸುವ ಅಡ್ಡಹೆಸರುಗಳಲ್ಲಿ ಸೇವ್‌ ಮಾಡಿಕೊಂಡಿದ್ದಳು, ಅವುಗಳಲ್ಲಿ ಒಂದು ಸಂಖ್ಯೆಯನ್ನು ಆಕೆ ಜಾಟ್ ರಾಂಧವ ಎಂದು ಸೇವ್‌ ಮಾಡಿಕೊಂಡಿದ್ದಳು. ಇದು ಕೇವಲ ಮುನ್ನೆಚ್ಚರಿಕೆ ಕ್ರಮ ಮಾತ್ರವಾಗಿರಲಿಲ್ಲ, ಬದಲಾಗಿ ಪಾಕಿಸ್ತಾನದ ಗುಪ್ತಚರ ಜಾಲದೊಂದಿಗೆ ಆಕೆಯ ಆಳವಾದ ಪಾಲ್ಗೊಳ್ಳುವಿಕೆಯ ಸೂಚನೆ ಆಗಿತ್ತು ಎಂದು ಪೊಲೀಸರು ಹೇಳಿದ್ದಾರೆ. 

ಆಕೆಯ ಡಿಜಿಟಲ್ ಚಟುವಟಿಕೆಗಳು ಅವಳನ್ನು ಗೂಢಚಾರಿಕೆ ಮಾಡುವುದಕ್ಕಾಗಿಯೇ ಕ್ರಮಬದ್ದವಾಗಿ ಬೆಳೆಸಲಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಟ್ರಾವೆಲ್ ವ್ಲಾಗರ್ ಆಗಿದ್ದ ಆಕೆಯನ್ನು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವ ವ್ಯಕ್ತಿಯಾಗಿ ಪರಿವರ್ತಿಸಿರುವ ಶೈಲಿ ಆಕೆಯ ಹಿಂದೆ ಇರುವ ವ್ಯಕ್ತಿಯ ಬಗ್ಗೆ ಬೆರಳು ತೋರುತ್ತದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.

ಹಿಸಾರ್‌ನ ಪದವೀಧರೆಯಾಗಿ ಜ್ಯೋತಿ ಮಲ್ಹೋತ್ರಾ ಹರಿಯಾಣದ ನಿವೃತ್ತ ವಿದ್ಯುತ್ ಇಲಾಖೆಯ ಅಧಿಕಾರಿಯ ಪುತ್ರಿಯಾಗಿದ್ದು, 34 ವರ್ಷದ ಈಕೆ, ಕನಿಷ್ಠ ಮೂವರು ಪಾಕಿಸ್ತಾನಿ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿದ್ದಳು ಎಂಬ ಆರೋಪವಿದೆ. ಆಕೆಯ ಮೊದಲ ಸಂಪರ್ಕವು ದೆಹಲಿಯಲ್ಲಿ ನೆಲೆಸಿರುವ ಪಾಕಿಸ್ತಾನಿ ಹೈಕಮಿಷನ್ ಅಧಿಕಾರಿ ಎಹ್ಮಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಜೊತೆಗಿತ್ತು. 2023 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಕೆ ಡ್ಯಾನಿಶ್‌ನನ್ನು ಭೇಟಿಯಾಗಿದ್ದಳು ಎಂದು ವರದಿಯಾಗಿದೆ. 

ಡ್ಯಾನಿಶ್ ಅವಳಿಗೆ ಪಾಕಿಸ್ತಾನಿ ವೀಸಾ, ಲಾಹೋ‌ರ್‌ನಲ್ಲಿ ವಸತಿ ವ್ಯವಸ್ಥೆ ಮಾಡಿದ್ದ ಮತ್ತು ಶಾಕಿರ್ ಮತ್ತು ರಾಣಾ ಶಹಬಾಜ್ ಎಂಬ ವ್ಯಕ್ತಿ ಸೇರಿದಂತೆ ಇತರರಿಗೆ ಅವಳನ್ನು ಪರಿಚಯಿಸಿದ್ದ ಎಂದು ವರದಿಯಾಗಿದೆ.

ಈ ನಡುವೆ ಮೇ 13 ರಂದು ಬೇಹುಗಾರಿಕೆ ಆರೋಪದ ಮೇಲೆ ಭಾರತದಿಂದ ಹೊರಹಾಕಲ್ಪಟ್ಟ ಪಾಕಿಸ್ತಾನಿ ಅಧಿಕಾರಿಯೊಬ್ಬ ಕೂಡ ಜ್ಯೋತಿ ಮಲ್ಹೋತ್ರಾ ಜೊತೆ ನಿಕಟ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರೂ ಒಟ್ಟಿಗೆ ಇಂಡೋನೇಷ್ಯಾದ ಬಾಲಿಗೆ ಪ್ರಯಾಣಿಸಿದ್ದಾರೆಂದು ತನಿಖೆ ವೇಳೆ ಬಹಿರಂಗವಾಗಿದೆ. ತನಿಖಾಧಿಕಾರಿಗಳು ಹೇಳುವಂತೆ ಮಲ್ಹೋತ್ರಾ ತನ್ನ ಹ್ಯಾಂಡ್ಲರ್‌ಗಳೊಂದಿಗೆ ಸಂವಹನ ನಡೆಸಲು ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನಾಪ್‌ ಚಾಟ್‌ನಂತಹ ಎನ್‌ಕ್ರಿಪ್ಟ್ ಮಾಡಿದ ಸೋಶಿಯಲ್ ಮೀಡಿಯಾ ಖಾತೆಗಳನ್ನೇ ಬಳಸುತ್ತಿದ್ದಳು .

ತನ್ನ ಸಂಪರ್ಕಗಳ ಸ್ವರೂಪವನ್ನು ಮರೆಮಾಡಲು ಆಕೆ ಅವರಲ್ಲೊಬ್ಬನ ಹೆಸರನ್ನು ಜಾಟ್ ರಾಂಧವ ಎಂಬಂತಹ ಗುಪ್ತನಾಮ ಬಳಸಿ ಸೇವ್‌ ಮಾಡಿಕೊಂಡಿದ್ದಳು. ಭಾರತೀಯ ಅಧಿಕಾರಿಗಳು ಅಥವಾ ಪರಿಚಯಸ್ಥರು ಪತ್ತೆಹಚ್ಚುವುದನ್ನು ತಪ್ಪಿಸಲು ಈ ತಂತ್ರವನ್ನು ಬಳಸಿದ್ದಳು. ಅಧಿಕೃತ ರಹಸ್ಯ ಕಾಯ್ದೆಯನ್ನು ಉಲ್ಲಂಘಿಸಿ, ಹೆಚ್ಚಾಗಿ ಭಾರತೀಯ ಸ್ಥಳಗಳು ಮತ್ತು ಪ್ರಮುಖ ಘಟನೆಗಳಿಗೆ ಸಂಬಂಧಿಸಿದ ಸೂಕ್ಷ್ಮ ವಿವರಗಳನ್ನು ಆಕೆ ಪಾಕಿಸ್ತಾನ ಅಧಿಕಾರಿಗಳಿಗೆ ರವಾನಿಸಿದ್ದಾಗಿ ಆಕೆ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಮೇ 6 ರಂದು ದೆಹಲಿಗೆ ಭೇಟಿ ನೀಡಿದ ಕೆಲವು ದಿನಗಳ ನಂತರ ಆಕೆಯ ಬಂಧನ ನಡೆದಿದೆ, ಆ ಸಮಯದಲ್ಲಿ ಆಕೆ ಮತ್ತೆ ಡ್ಯಾನಿಶ್‌ನನ್ನು ಭೇಟಿಯಾಗಿದ್ದಳು. ಆತಂಕಕಾರಿ ವಿಚಾರವೆಂದರೆ ಆಪರೇಷನ್ ಸಿಂಧೂರ್‌ಗೆ ಒಂದು ದಿನ ಮೊದಲು ಉತ್ತರ ಭಾರತದಾದ್ಯಂತ ನಡೆದ ರಾಷ್ಟ್ರೀಯ ಭದ್ರತಾ ಕವಾಯತಿಗೂ ದಿನ ಮೊದಲು ಈ ಭೇಟಿ ನಡೆದಿತ್ತು.

ಇಂತಹ ಸೂಕ್ಷ್ಮ ಅವಧಿಯಲ್ಲಿ ಪಾಕಿಸ್ತಾನಿ ನಿರ್ವಾಹಕರೊಂದಿಗಿನ ಆಕೆಯ ಸಂವಹನವು ಅನುಮಾನಗಳನ್ನು ಬಲಪಡಿಸಿದೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಹರಿಯಾಣದಲ್ಲಿ ಇತ್ತೀಚೆಗೆ ಬೇಹುಗಾರಿಕೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ನಾಲ್ವರಲ್ಲಿ ಈಕೆಯೂ ಒಬ್ಬಳಾಗಿದ್ದಾಳೆ. ಹಾಗೆಯೇ ಪಾಣಿಪತ್ ಮೂಲದ ಭದ್ರತಾ ಸಿಬ್ಬಂದಿ ನೌಮನ್ ಇಲಾಹಿ, ಕೈತಾಲ್‌ನ ದೇವೇಂದರ್ ಸಿಂಗ್ ಧಿಲ್ಲೋನ್ ಮತ್ತು ನುಹ್‌ನ ರಾಜಕ ಗ್ರಾಮದ ಯುವಕ ಅರ್ಮಾನ್ ಬಂಧಿತರಾದ ಇತರರು. ಅರ್ಮಾನ್ ತನ್ನ ಗುರುತನ್ನು ಬಳಸಿಕೊಂಡು ಭಾರತೀಯ ಸಿಮ್ ಕಾರ್ಡ್‌ ಗಳನ್ನು ಪಡೆದುಕೊಂಡು ಪಾಕಿಸ್ತಾನಿ ಕಾರ್ಯಕರ್ತರಿಗೆ ಹಸ್ತಾಂತರಿಸಿದ ಆರೋಪ ಎದುರಿಸುತ್ತಿದ್ದಾನೆ. 

ಆತ ದೆಹಲಿಯಲ್ಲಿ ಉದ್ಯೋಗಾಕಾಂಕ್ಷಿಯಂತೆ ನಟಿಸುತ್ತಾ ಡಿಫೆನ್ಸ್ ಎಕ್ಸ್‌ಫೋದಲ್ಲೂ ಭಾಗವಹಿಸಿದ್ದ ಮತ್ತು ನಿಷೇಧಿತ ವಿಚಾರಗಳನ್ನು ಹಂಚಿಕೊಂಡಿದ್ದ. ಬಂಧನದ ನಂತರ ಜ್ಯೋತಿ ಮಲ್ಹೋತ್ರಾಳ ಸಾಮಾಜಿಕ ಮಾಧ್ಯಮ ಚಟುವಟಿಕೆಯನ್ನು ತೀವು ಪರಿಶೀಲನೆಗೆ ಒಳಪಡಿಸಲಾಗಿದೆ. ಆಕೆಯ ಯೂಟ್ಯೂಬ್ ಚಾನೆಲ್ ಟ್ರಾವೆಲ್ ವಿತ್ ಜೋ ಮತ್ತು ಇನ್‌ಸ್ಟ್ರಾಗ್ರಾಮ್ ಖಾತೆ ಕ್ರಮವಾಗಿ 3.2 ಲಕ್ಷ ಮತ್ತು 13 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದೆ. ಆಕೆಯ ಚಾನೆಲ್‌ನಲ್ಲಿ ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳಿಗೆ ಆಕೆ ಪ್ರಯಾಣ ಮಾಡಿರುವ ವೀಡಿಯೊಗಳನ್ನು ಒಳಗೊಂಡಿದೆ. ಇದೊಂದು ಅಧುನಿಕ ಶೈಲಿಯ ಯುದ್ಧ ಎಂದು ಹಿಸಾರ್ ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಸಾವನ್ ಘಟನೆ ಬಗ್ಗೆ ಹೇಳಿದ್ದಾರೆ.