ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ಪಾಕಿಸ್ತಾನ ಪರ ಬೇಹುಗಾರಿಕೆ ಆರೋಪದಡಿ ಬಂಧಿಸಲಾಗಿದೆ. ಪಾಕ್ ಹೈಕಮಿಷನ್ ಸಿಬ್ಬಂದಿ ಜೊತೆ ನಿಯಮಿತ ಸಂಪರ್ಕ ಹೊಂದಿದ್ದಳು. ಹಲವು ಬ್ಯಾಂಕ್ ಖಾತೆ, ವಿದೇಶ ಪ್ರಯಾಣ ಇತಿಹಾಸ ಪತ್ತೆಯಾಗಿದೆ. ತನಿಖೆ ಮುಂದುವರೆದಿದ್ದು, ನ್ಯಾಯಾಂಗ ಬಂಧನಕ್ಕೆ ಕೋರಲಾಗುವುದು.

ಜ್ಯೋತಿ ಮಲ್ಹೋತ್ರಾ... (Jyoti Malhotra), ಸದ್ಯ ಭಾರತದಲ್ಲಿ ತಲ್ಲಣ ಸೃಷ್ಟಿಸ್ತಿರೋ ಹೆಸರು ಇದು. ಯುಟ್ಯೂಬ್​ನಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿರುವ ಜ್ಯೋತಿಯನ್ನು ಸದ್ಯ ಅರೆಸ್ಟ್​ ಮಾಡಲಾಗಿದೆ. ಯೂಟ್ಯೂಬ್​ ಮೂಲಕ ಪ್ರಪಂಚದ ದರ್ಶನ ಮಾಡ್ತಿದ್ದ ಈ ಸುಂದರಿಗೆ ಪಾಕಿಸ್ತಾನದ ಜೊತೆ ಭಾರಿ ಲಿಂಕ್​ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಪಾಕಿಸ್ತಾನದಲ್ಲಿಯೂ ಹಲವು ಗೆಳೆಯರನ್ನು ಹೊಂದಿರುವ ಬಗ್ಗೆ ಇದಾಗಲೇ  ಆರಂಭಿಕ ತನಿಖೆಯಿಂದಲೂ ತಿಳಿದುಬಂದಿದೆ. ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಸದ್ಯ ಈಕೆಯನ್ನು ಅರೆಸ್ಟ್​ ಮಾಡಲಾಗಿದೆ.  ಕಳೆದ ವರ್ಷ  ದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಇಫ್ತಾರ್ ಔತಣಕೂಟದಲ್ಲಿ ಈಕೆ ಭಾಗವಹಿಸಿದ್ದ ವಿಚಾರವೂ ಇದೀಗ ಬೆಳಕಿಗೆ ಬಂದಿದೆ. ಇಫ್ತಾರ್‌ ಕೂಟದಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಈಕೆ ಸೋಷಿಯಲ್​  ಮೀಡಿಯಾದಲ್ಲಿ ಪೋಸ್ಟ್​ ಕೂಡ ಮಾಡಿದ್ದಳು.  ಅಷ್ಟೇ ಅಲ್ಲದೇ ತಾನು ಭೇಟಿಯಾದ ಬಹುತೇಕ ಎಲ್ಲರನ್ನೂ ಪಾಕ್‌ ವೀಸಾ ಪಡೆಯಲು ಸಹಾಯ ಮಾಡುವಂತೆ ಕೇಳಿದ್ದರೆಂಬ ವಿಚಾರವೂ ತಿಳಿದುಬಂದಿದೆ.

ಇದೀಗ, ರಾಷ್ಟ್ರೀಯ ತನಿಖಾ ದಳದ ವಶದಲ್ಲಿದ್ದಾಳೆ ಜ್ಯೋತಿ. ತನಿಖೆಯ ಸಂದರ್ಭದಲ್ಲಿ ಹಲವು ವಿಷಯಗಳನ್ನು ಆಕೆ ಬಾಯ್ಬಿಟ್ಟಿರುವುದಾಗಿ ವರದಿಯಾಗಿದೆ.  ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಸಿಬ್ಬಂದಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾಗಿ ಈಕೆ ಒಪ್ಪಿಕೊಂಡಿದ್ದಾಳೆ ಎಂದು ತನಿಖಾಧಿಕಾರಿಗಳು  ದೃಢಪಡಿಸಿದ್ದಾರೆ. ಹಿಸಾರ್ ಪೊಲೀಸ್ ವಕ್ತಾರ ವಿಕಾಸ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ಜ್ಯೋತಿ ಮಲ್ಹೋತ್ರಾ ವಿಚಾರಣೆಯ ಸಮಯದಲ್ಲಿ ಪಾಕಿಸ್ತಾನಿ ಪ್ರಜೆ ಮತ್ತು ಹೈಕಮಿಷನ್‌ನ ಅಧಿಕಾರಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್​ ಜೊತೆ ನವೆಂಬರ್ 2023 ರಿಂದ ಮಾರ್ಚ್ 2025 ರವರೆಗೆ ಸಂಪರ್ಕದಲ್ಲಿದ್ದಾಗಿ ಒಪ್ಪಿಕೊಂಡಿದ್ದಾಳೆ. ಇಷ್ಟೇ ಅಲ್ಲದೇ ಡ್ಯಾನಿಶ್, ಜ್ಯೋತಿಯನ್ನು ಪಾಕಿಸ್ತಾನದ ಪರ, ಭಾರತದ ವಿರುದ್ಧ  ಗುಪ್ತಚರ ಆಸ್ತಿಯನ್ನಾಗಿ ಮಾಡಿಕೊಂಡಿದ್ದ. ಈ ನಿಟ್ಟಿನಲ್ಲಿ ಆಕೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಳು' ಎಂದಿದ್ದಾರೆ  ಅಧಿಕಾರಿಗಳು. 

Jyoti Malhotra: ದೇಶದ್ರೋಹದ ಬೆನ್ನಲ್ಲೇ ರಾತ್ರೋರಾತ್ರಿ ಸೂಪರ್​ಸ್ಟಾರ್​: ಪಾಕಿ ಗೆಳತಿ ಜ್ಯೋತಿ ಇನ್​ಸ್ಟಾ ಬ್ಲಾಕ್​...

"ಈ ಅವಧಿಯಲ್ಲಿ ಡ್ಯಾನಿಶ್ ಜೊತೆ ನೇರ ಸಂವಹನ ನಡೆಸಿರುವುದಾಗಿ ಜ್ಯೋತಿ  ಒಪ್ಪಿಕೊಂಡಿದ್ದಾಳೆ.  ಮಾತ್ರವಲ್ಲದೇ ತಮ್ಮಂತೆಯೇ ಇರುವ ಹಲವು  ಇತರ ಯೂಟ್ಯೂಬ್ ಪ್ರಭಾವಿಗಳೊಂದಿಗೆ ಆಕೆ ಸಂಪರ್ಕದಲ್ಲಿದ್ದಳು. ಆಕೆಯ ಮೂರು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್ ಜೊತೆಗೆ ಹರಿಯಾಣ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ (HSGMC) ಐಟಿ ಉಸ್ತುವಾರಿ ಹೊಂದಿರುವ ಹರ್ಕಿರತ್ ಸಿಂಗ್ ಅವರಿಗೆ ಸೇರಿದ ಎರಡು ಫೋನ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ" ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. ಜ್ಯೋತಿ ಮಲ್ಹೋತ್ರಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಗುಪ್ತಚರ ಬ್ಯೂರೋ (IB) ಅಧಿಕಾರಿಗಳು ಪಾಕಿಸ್ತಾನಿ ಗುಪ್ತಚರ ಕಾರ್ಯಾಚರಣೆಗಳ (PIOs) ಜೊತೆಗಿನ ಶಂಕಿತ ಸಂಪರ್ಕದ ಬಗ್ಗೆ ವ್ಯಾಪಕವಾಗಿ ಪ್ರಶ್ನಿಸಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಆಕೆಯ ಸಂಪರ್ಕಗಳು ಮತ್ತು ಸಂವಹನಗಳು ಈಗ ವಿಶಾಲ ತನಿಖೆಯ ಕೇಂದ್ರಬಿಂದುವಾಗಿವೆ.

 ತನಿಖೆಯ ವೇಳೆ ಜ್ಯೋತಿಗೆ  ಹಲವು ಬ್ಯಾಂಕ್ ಖಾತೆಗಳಿವೆ ಮತ್ತು ಹಲವಾರು ವಹಿವಾಟುಗಳು ನಡೆದಿವೆ ಎನ್ನುವುದು ಬಯಲಾಗಿದ್ದು, ಹಣಕಾಸಿನ ಡೇಟಾವನ್ನು ವಿಶ್ಲೇಷಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖಾಧಿಕಾರಿಗಳು ಜ್ಯೋತಿಯ ಅಂತರರಾಷ್ಟ್ರೀಯ ಪ್ರಯಾಣ ಇತಿಹಾಸವನ್ನು ಸಹ ಪರಿಶೀಲಿಸುತ್ತಿದ್ದಾರೆ. ಈಕೆ 2018 ರಲ್ಲಿ ತಮ್ಮ ಪಾಸ್‌ಪೋರ್ಟ್ ಅನ್ನು ಪಡೆದುಕೊಂಡಿದ್ದಾಳೆ. ಇದು 2028 ರವರೆಗೆ ಮಾನ್ಯವಾಗಿದೆ ಮತ್ತು ಪಾಕಿಸ್ತಾನ, ಚೀನಾ, ದುಬೈ, ಥೈಲ್ಯಾಂಡ್, ಬಾಂಗ್ಲಾದೇಶ, ಭೂತಾನ್, ನೇಪಾಳ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವಾರು ದೇಶಗಳಿಗೆ ಜ್ಯೋತಿ ಪ್ರಯಾಣಿಸಿರುವುದು ಬೆಳಕಿಗೆ ಬಂದಿದೆ. ಆದರೆ ಹೆಚ್ಚು ಹೋಗಿರುವುದು ಪಾಕಿಸ್ತಾನಕ್ಕೆ ಎನ್ನುವುದು ತಿಳಿದಿದೆ. ಪೊಲೀಸರು ನಾಳೆ ಅಂದರೆ ಮೇ 22ರಂದು ಸ್ಥಳೀಯ ನ್ಯಾಯಾಲಯದ ಮುಂದೆ ಜ್ಯೋತಿಯನ್ನು ಹಾಜರುಪಡಿಸಲು ಸಿದ್ಧತೆ ನಡೆಸುತ್ತಿದ್ದಾರೆ, ಅಲ್ಲಿ ಅವರು ನಿರಂತರ ವಿಚಾರಣೆಗಾಗಿ ಜ್ಯೋತಿಯ ಬಂಧನದ ಅವಧಿಯನ್ನು ವಿಸ್ತರಿಸಲು ಕೋರಲಿದ್ದಾರೆ.

Madhuri Gupta: 52ರ ವಯಸ್ಸಲ್ಲಿ 30ರ ಪಾಕಿ ಬಲೆಗೆ: ಭಾರತದ ಮಾಹಿತಿ ಸೋರಿಕೆ ಮಾಡಿ ಸಿಕ್ಕಿಬಿದ್ದ ಐಎಫ್​ಎಸ್​ ಅಧಿಕಾರಿ!