ತುಂಬು ಗರ್ಭಿಣಿಯ ಆರೈಕೆ ಹಾಗೂ ಡೆಲಿವರಿ ಸಮಯದಲ್ಲಿ ಆಕೆಗೆ ಭಾವನಾತ್ಮಕ ಬೆಂಬಲವಾಗಿ ಇರಲು ರಜೆ ಮೇಲೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ. ತಮ್ಮ ಮಗು ಜನಿಸುವುದಕ್ಕೆ ಕೆಲವೇ ಕ್ಷಣಗಳಿರುವಾಗ ಅವರು ಸಾವನ್ನಪ್ಪಿದ್ದಾರೆ.
ಕೊಲ್ಲಾಪುರ: ತುಂಬು ಗರ್ಭಿಣಿಯ ಆರೈಕೆ ಹಾಗೂ ಡೆಲಿವರಿ ಸಮಯದಲ್ಲಿ ಆಕೆಗೆ ಭಾವನಾತ್ಮಕ ಬೆಂಬಲವಾಗಿ ಇರಲು ರಜೆ ಮೇಲೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ. ತಮ್ಮ ಮಗು ಜನಿಸುವುದಕ್ಕೆ ಕೆಲವೇ ಕ್ಷಣಗಳಿರುವಾಗ ಅವರು ಸಾವನ್ನಪ್ಪಿದ್ದು, ಯೋಧನ ಸಾವಿನಿಂದಾಗಿ ಅವರ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ ರಾತ್ರಿ ಭಾರತೀಯ ಸೇನೆಯ ಯೋಧ ಹವಲ್ದಾರ್ ಪ್ರಮೋದ್ ಜಾಧವ್ ಅವರು ಸತಾರಾ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರೆ, ಅದಾಗಿ ಸ್ವಲ್ಪ ಸಮಯದಲ್ಲಿ ಅವರ ಪತ್ನಿ ಖಾಸಗಿ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಯೋಧ ಪ್ರಮೋದ್ ಜಾಧವ್ ಅವರು ಲಡಾಖ್‌ನ ಲೇಹ್‌ನಲ್ಲಿ ಭಾರತೀಯ ಸೇನೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಕೆಲ ವಾರಗಳ ಹಿಂದಷ್ಟೇ ಅವರು ಸತಾರಾ ಜಿಲ್ಲೆಯ ಡೇರ್ ಟರ್ಫ್ ಆರೆ ಗ್ರಾಮಕ್ಕೆ ತಮ್ಮ ಗರ್ಭಿಣಿ ಪತ್ನಿ ರುತುಜಾ ಅವರನ್ನು ನೋಡಿಕೊಳ್ಳಲು ಮರಳಿದ್ದರು. ಶುಕ್ರವಾರ ರುತುಜಾ ಅವರನ್ನು ಸತಾರಾದ ಖಾಸಗಿ ನರ್ಸಿಂಗ್ ಹೋಂಗೆ ಹೆರಿಗೆಗಾಗಿ ದಾಖಲಿಸಲಾಗಿತ್ತು. ಹೀಗಾಗಿ ಸಂಜೆ ಮನೆಯಿಂದ ಅವರ ವಸ್ತುಗಳನ್ನು ತರುವುದಕ್ಕೆ ಪ್ರಮೋದ್ ಜಾಧವ್ ಅವರು ಆಗಮಿಸುತ್ತಿದ್ದಾಗ ಅವರ ಬೈಕ್‌ಗೆ ಮಾರುಕಟ್ಟೆಯಿಂದ ತರಕಾರಿಗಳನ್ನು ಸಾಗಿಸುತ್ತಿದ್ದ ಮಿನಿ ಟ್ರಕ್ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈನಿಕ ಪ್ರಮೋದ್ ಜಾಧವ್, ಸತಾರಾದ ನರ್ಸಿಂಗ್ ಹೋಂಗೆ ಒಬ್ಬಂಟಿಯಾಗಿ ಬೈಕ್‌ನಲ್ಲಿ ಹಿಂತಿರುಗುತ್ತಿದ್ದ. ಈ ವೇಳೆ ಮಾರುಕಟ್ಟೆಗಳಿಗೆ ತರಕಾರಿಗಳನ್ನು ಸಾಗಿಸುತ್ತಿದ್ದ ಮಿನಿ ಟ್ರಕ್ ವಾಡೆಗಾಂವ್ ಫಾಟಾದಲ್ಲಿ ಇದ್ದಕ್ಕಿದ್ದಂತೆ ಅವರ ಮುಂದೆ ಬಂದು ಡಿಕ್ಕಿ ಹೊಡೆಯಿತು. ಕೂಡಲೇ ಅಲ್ಲಿದ್ದ ಜನರು ಪ್ರಮೋದ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ನಾವು ಮಿನಿ ಟ್ರಕ್ ಚಾಲಕನನ್ನು ಬಂಧಿಸಿ ವಾಹನವನ್ನು ವಶಪಡಿಸಿಕೊಂಡಿದ್ದೇವೆ. ಶುಕ್ರವಾರ ರಾತ್ರಿ 8.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಬಹುಶಃ ಜವಾನ ಮತ್ತು ಮಿನಿ ಟ್ರಕ್‌ನ ಚಾಲಕ ಇಬ್ಬರೂ ಆತುರದಲ್ಲಿದ್ದಿರಬಹುದು, ಮತ್ತು ಅದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಾಹುಪುರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಚಿನ್ ಮೆತ್ರೆ ಹೇಳಿದರು.
ಇದನ್ನೂ ಓದಿ: ಪುಟ್ಟ ಮಕ್ಕಳಂತೆ ವೆಡ್ಡಿಂಗ್ ಕೇಕ್ ರುಚಿ ನೋಡಿದ ವರ: ಆಕ್ಷೇಪಿಸಿದ ವಧು: ಆಮೇಲಾಗಿದ್ದು ದುರಂತ: ವೀಡಿಯೋ
ಇತ್ತ ಜಾಧವ್ ಅವರ ಸಂಬಂಧಿಕರು ಮತ್ತು ಸ್ನೇಹಿತರು ಈ ಅಪಘಾತದ ಬಗ್ಗೆ ತಕ್ಷಣ ರುತುಜಾಗೆ ತಿಳಿಸದಿರಲು ನಿರ್ಧರಿಸಿದರು. ಆದರೆ ಜಾಧವ್ ಅವರು ಮರಳಿ ಬರುವುದಾಗಿ ಭರವಸೆ ನೀಡಿದ್ದರಿಂದ ಅವರು ಆಗಾಗೇ ಪತಿಯ ಬಗ್ಗೆ ಕೇಳುತ್ತಲೇ ಇದ್ದರು. ರಾತ್ರಿಇಡೀ ಆತಂಕದಲ್ಲೇ ಕಳೆದ ಅವರು ಶನಿವಾರ ಬೆಳಗ್ಗಿನ ಜಾವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಂತರವಷ್ಟೇ ಸಂಬಂಧಿಕದರು ಅಪಘಾತದ ಬಗ್ಗೆ ಅವರಿಗೆ ತಿಳಿಸಿದರು. ಪರಿಣಾಮ ಆ ಆಘಾತದ ನಡುವೆಯೂ ಅವರು ತಮ್ಮ ಆಗಷ್ಟೇ ಜನಿಸಿದ ಮಗುವಿನೊಂದಿಗೆ ತಮ್ಮ ಗ್ರಾಮದ ಮೈದಾನಕ್ಕೆ ಸ್ಟ್ರೆಚರ್‌ನಲ್ಲಿಯೇ ಆಗಮಿಸಿ ಪತಿಯ ಅಂತಿಮ ದರ್ಶನ ಪಡೆದರು. ಅಲ್ಲದೇ ಮಗುವಿಗೆ ಮೊದಲ ಹಾಗೂ ಕೊನೆಯ ಬಾರಿ ಎಂಬಂತೆ ಅಲ್ಲಿ ನಿರ್ಜೀವವಾಗಿ ಮಲಗಿದ್ದ ತಂದೆಯ ಮುಖವನ್ನು ತೋರಿಸಲಾಯ್ತು. ಈ ಕ್ಷಣ ಎಂತಹ ಕಠು ಹೃದಯಿಯೂ ಬಿಕ್ಕಳಿಸಿ ಅಳುವಂತೆ ಮಾಡಿದೆ. ಅಲ್ಲಿದ್ದ ಎಲ್ಲರೂ ವಿಧಿಗೆ ಶಪಿಸುತ್ತಾ ಕಣ್ಣೀರಿಟ್ಟರು. ಪ್ರಮೋದ್ ಜಾಧವ್ ಅವರ ಅಂತ್ಯಕ್ರಿಯೆಯನ್ನು ಪೂರ್ಣ ಮಿಲಿಟರಿ ಗೌರವಗಳೊಂದಿಗೆ ನಡೆಸಲಾಯಿತು.
ಇದನ್ನೂ ಓದಿ: ಯುಗ ಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ: ಕೇಕ್ ಜೊತೆ ಮೇಕಪ್ ಸೆಟ್ ನೀಡಿ ಪತ್ನಿಗೆ ಸರ್‌ಫ್ರೈಸ್ ನೀಡಿದ ವೃದ್ಧ
ಪ್ರಮೋದ್ ಜಾಧವ್ ಅವರು ತಮ್ಮ ಹೆತ್ತವರ ಏಕೈಕ ಪುತ್ರನಾಗಿದ್ದು, ಅವರ ತಾಯಿ ಒಂದು ವರ್ಷದ ಹಿಂದಷ್ಟೇ ನಿಧನರಾಗಿದ್ದರು. ಪ್ರಮೋದ್ ಅವರು 2014 ರಲ್ಲಿ ಸೇನೆಗೆ ಸೇರಿದರು ಮತ್ತು ಅವರ ಮೂವರು ಸಹೋದರಿಯರ ವಿವಾಹವನ್ನು ಅವರೇ ಮುಂದೆ ನಿಂತು ಮಾಡಿ ನಂತರ ಅವರು ಮದುವೆಯಾಗಿದ್ದರು. ಆದರೆ ಸುಂದರ ಬದುಕಿನ ಕನಸು ಕಂಡಿದ್ದ ಪ್ರಮೋದ್ ಜಾಧವ್ ಅವರ ಬಾಳಲಿ ವಿಧಿ ಬೇರೆಯದೇ ಆಟವಾಡಿದೆ.


