ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ಮುನಿನಾರಾಯಣ ಹೃದಯಾಘಾತದಿಂದ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. 17 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಇಂದು ಕರ್ತವ್ಯಕ್ಕೆ ಹಾಜರಾಗಬೇಕಿತ್ತು.
ಕೋಲಾರ (ಸೆ.15): ರಜೆಯ ಮೇಲೆ ಊರಿಗೆ ಬಂದಿದ್ದ ಯೋಧನೋರ್ವ ಮನೆಯಲ್ಲಿ ಮಲಗಿದ್ದಾಗಲೇ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆಚಂಪಲ್ಲಿ ಗ್ರಾಮದಲ್ಲಿ ನಡೆದಿದೆ.
ಯೋಧ ಮುನಿನಾರಾಯಣ (36) ಮೃತ ಯೋಧ. ಇಂದು (ಸೆ.15, 2025) ಮನೆಯಲ್ಲಿ ಮಲಗಿದ್ದ ವೇಳೆಯೇ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ 17 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಬರ್ಮಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇಂದು ಸೇನೆಗೆ ತೆರಳಬೇಕಿದ್ದ ಯೋಧ:
ಆಗಸ್ಟ್ 18ರಿಂದ ಒಂದು ತಿಂಗಳ ರಜೆಯ ಮೇಲೆ ಯೋಧ ಮುನಿನಾರಾಯಣ ಊರಿಗೆ ಬಂದಿದ್ದರು. ಇಂದು ಸೆಪ್ಟೆಂಬರ್ 18ರಂದು ಕರ್ತವ್ಯಕ್ಕೆ ಹಾಜರಾಗಲು ಆಗಲು ಗ್ರಾಮದಿಂದ ಹೊರಡಬೇಕಿದ್ದ ಅವರು, ರಾತ್ರಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾಗ ಒಮ್ಮಿಂದೊಮ್ಮೆಗೆ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ.
ಮುನಿನಾರಾಯಣ ಅವರು ತಮ್ಮ ಪತ್ನಿ, ಇಬ್ಬರು ಮಕ್ಕಳು ಮತ್ತು ತಾಯಿಯನ್ನು ಅಗಲಿದ್ದಾರೆ. 17 ವರ್ಷಗಳ ಕಾಲ ದೇಶಕ್ಕಾಗಿ ಸಮರ್ಪಣೆಯಿಂದ ಸೇವೆ ಸಲ್ಲಿಸಿದ ಯೋಧನ ಈ ಅಕಾಲಿಕ ನಿಧನ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ. ಸ್ನೇಹಿತರು, ಗ್ರಾಮಸ್ಥರು ಹಾಗೂ ಸಂಬಂಧಿಕರು ಮುನಿನಾರಾಯಣ ಅವರ ಆಕಸ್ಮಿಕ ಸಾವಿಗೆ ತೀವ್ರ ಕಂಬನಿ ಮಿಡಿದಿದ್ದಾರೆ.
