ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ತೈಲ ಬೆಲೆ ಏರಿಕೆಯಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಸತತ ಮೂರನೇ ದಿನವೂ ತೀವ್ರ ಕುಸಿತ ಕಂಡಿದೆ. ಈ ಕುಸಿತದಿಂದಾಗಿ, ಜೂನ್ 2022ರ ನಂತರದ ಅತ್ಯಂತ ಕರಾಳ ವಾರ ಇದಾಗಿದ್ದು, ಹೂಡಿಕೆದಾರರು ಒಂದೇ ವಾರದಲ್ಲಿ 19 ಲಕ್ಷ ಕೋಟಿ ರೂಪಾಯಿಗಳಷ್ಟು ಸಂಪತ್ತನ್ನು ಕಳೆದುಕೊಂಡಿದ್ದಾರೆ.

ಪಿಟಿಐ ಮುಂಬೈ (ಮಾ.14): ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷ ಮತ್ತು ತೈಲ ಬೆಲೆಗಳ ಏರಿಕೆಯಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಮಾನದಂಡ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ- ಸತತ 3ನೇ ದಿನವಾದ ಶುಕ್ರವಾರ ತೀವ್ರವಾಗಿ ಕುಸಿತ ಕಂಡಿವೆ. ಇದರೊಂದಿಗೆ ಇದು ಜೂನ್‌ 2022ರ ನಂತರ ಪೇಟೆಯ ಪಾಲಿಗೆ ಅತಿ ಕರಾಳ ವಾರವಾಗಿದೆ ಹಾಗೂ ಒಂದೇ ವಾರದಲ್ಲಿ ಹೂಡಿಕೆದಾರರ 19 ಲಕ್ಷ ಕೋಟಿ ರು. ಕರಗಿದೆ. ಮೇಲಾಗಿ ಯುದ್ಧ ಆರಂಭವಾದ 14 ದಿನದಲ್ಲಿ 33.68 ಲಕ್ಷ ಕೋಟಿ ರು. ಪೇಟೆಯ ಸಂಪತ್ತು ಇಳಿಕೆಯಾಗಿದೆ.

ಶುಕ್ರವಾರ ಸೆನ್ಸೆಕ್ಸ್‌, ಮಧ್ಯಂತರದಲ್ಲಿ 1,579.82 ಅಂಕ ಅಥವಾ ಶೇ.2ರಷ್ಟು ಕುಸಿತ ಕಂಡು 74,454.60 ಕ್ಕೆ ತಲುಪಿತ್ತು. ಅಂತಿಮವಾಗಿ 1,470.50 ಅಂಕ ಅಥವಾ ಶೇ.1.93 ರಷ್ಟು ಕುಸಿತ ಕಂಡು 74,563.92 ಕ್ಕೆ ತಲುಪಿತು. ಇದರಿಂದ ಹೂಡಿಕೆದಾರರು ಒಂದೇ ದಿನ 9.08 ಲಕ್ಷ ಕೋಟಿ ರು. ಹಾನಿ ಅನುಭವಿಸಿದರು.

ಇನ್ನು ರಾಷ್ಟ್ರೀಯ ಷೇರುಪೇಟೆ ನಿಫ್ಟಿ 488.05 ಅಂಕ ಅಥವಾ ಶೇ. 2.06 ರಷ್ಟು ಕುಸಿತ ಕಂಡು 23,151.10 ಕ್ಕೆ ತಲುಪಿತು.

ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಮಾರಾಟ, ವಿದೇಶಿ ನಿಧಿಯ ನಿರಂತರ ಹೊರಹರಿವು ಮತ್ತು ರುಪಾಯಿ ದುರ್ಬಲತೆಯು ಹೂಡಿಕೆದಾರರ ಆತ್ಮವಿಶ್ವಾಸವನ್ನು ಕುಗ್ಗಿಸಿತು.