ಮನೆಯಲ್ಲಿ ಅಥವಾ ಇನ್ಯಾವುದೇ ಕಡೆ ಹಾವು ಕಂಡ ತಕ್ಷಣ ಆತಂಕ ಬೇಡ. ಉರಗ ತಜ್ಞರ ನಂಬರ್ ಪಡೆದು ಕರೆ ಮಾಡಿ ಅವರು ಸ್ಥಳಕ್ಕೆ ಆಗಮಿಸುವಷ್ಟರಲ್ಲೇ ಅವಾಂತರಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಹೊಸ ಶಿವಾ ಆ್ಯಪ್ ಬಿಡುಗಡೆ ಮಾಡಲಾಗಿದೆ.
ಭೋಪಾಲ್ (ಆ.22) ಮಳೆಗಾಲ ಸೇರಿದಂತೆ ಕೆಲ ಋತುವಿನಲ್ಲಿ ಹಾವುಗಳ ಉಪಟಳ ಹೆಚ್ಚು. ಹಾವು ಕಡಿತ, ಮನೆಯಲ್ಲಿ ಹಾವು ಪ್ರತ್ಯಕ್ಷ, ಎಲ್ಲೆಡೆ ಹಾವುಗಳು ಕಾಣಿಸಿಕೊಳ್ಳುವುದು ಸ್ವಾಭಾವಿಕವಾಗಿ ಆತಂಕ ಹೆಚ್ಚಿಸುತ್ತದೆ. ಮನೆಯಲ್ಲಿ ಹಾವು ಪ್ರತ್ಯಕ್ಷಗೊಂಡಾಗ ಹೊರಹಾಕಲು ಹರಹಾಸ ಪಡುವುದು ಸಾಮಾನ್ಯ. ಇನ್ನು ಉರಗ ತಜ್ಞರ ನಂಬರ್ ಕಲೆ ಹಾಕಿ ಅವರನ್ನು ಕರೆಯಿಸಿಕೊಳ್ಳುವ ಹೊತ್ತಿಗೆ ಅಪಾಯ ಹೆಚ್ಚಾಗಲಿದೆ. ಇದಕ್ಕೆ ಪರಿಹಾರ ಒದಗಿಸಲು ಇದೀಗ ಕ್ಯಾಬ್ ಬುಕ್ ಮಾಡುವ ರೀತಿ ಹಾವಿನ ರಕ್ಷಣೆಗೆ ಶಿವಾ ಅನ್ನೋ ಆ್ಯಪ್ ಬರುತ್ತಿದೆ. ಆ್ಯಪ್ ಮೂಲಕ ಕೇವಲ ಒಂದೇ ಟಚ್‌ನಲ್ಲಿ ಆತಂಕದಿಂದ ದೂರವಾಗಬಹುದು.
ಹೊಸ ಶಿವಾ ಆ್ಯಪ್ ಮೂಲಕ ಹಾವಿನ ರಕ್ಷಣೆ
ಮಧ್ಯಪ್ರದೇಶದಲ್ಲಿ ಶಿವಾ ಆ್ಯಪ್ ಬಿಡುಗಡೆ ಮಾಡಲು ಅರಣ್ಯ ಸಚಿವಾಲಯ ಮುಂದಾಗಿದೆ. ವನ್ಯಜೀವಿ ಸಪ್ತಾಹ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ 2 ರಿಂದ ಅಕ್ಟೋಬರ್ 8ರೊಳಗೆ ಈ ಶಿವಾ ಆ್ಯಪ್ ಬಿಡುಗಡೆ ಮಾಡಲು ಮಧ್ಯಪ್ರದೇಶ ಅರಣ್ಯ ಸಚಿವಾಲಯ ಮುಂದಾಗಿದೆ. ಹಾವು ಕಡಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸುಲಭವಾಗಿ ಹಾಗೂ ಸುರಕ್ಷಿತವಾಗಿ ಹಾವುಗಳ ರಕ್ಷಣೆಗೆ ಮಧ್ಯಪ್ರದೇಶ ಶಿವಾ ಆ್ಯಪ್ ಬಿಡುಗಡೆ ಮಾಡುತ್ತಿದೆ.
ಭಾರತದಲ್ಲಿ ಗರಿಷ್ಠ ಹಾವು ಕಡಿತ ಪ್ರಕರಣ ದಾಖಲಾದ ಕೆಲ ರಾಜ್ಯಗಳ ಪೈಕಿ ಮಧ್ಯಪ್ರದೇಶ ಕೂಡ ಒಂದು. ಮಧ್ಯಪ್ರದೇಶ ನಾಗರೀಕರು ಹಾವಿನ ಭಯದಿಂದ ಮುಕ್ತವಾಗಿರಲು ಹಾಗೂ ಹಾವು ಕಡಿತದಿಂದ ಜೀವ ಕಳೆದುಕೊಳ್ಳದಿರಲು ಆ್ಯಪ್ ನೆರವಾಗಲಿದೆ ಎಂದು ಮಧ್ಯಪ್ರದೇಶ ಸರ್ಕಾರ ಹೇಳಿದೆ. ಎಲ್ಲೇ ಹಾವು ಕಂಡರೂ ಆ್ಯಪ್ ಮೂಲಕ ವರದಿ ಮಾಡಿದರೆ ಉರಗ ತಜ್ಞರು ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡಲಿದ್ದಾರೆ. ಹೀಗೆ ರಕ್ಷಣೆ ಮಾಡಿದ ಹಾವುಗಳನ್ನು ದಟ್ಟ ಅರಣ್ಯದಲ್ಲಿ ಬಿಡಲಾಗುವುದು. ಇದರಿಂದ ಮತ್ತೆ ಮತ್ತೆ ಹಾವುಗಳು ನಗರ, ಜನನಿಬಿಡಿದ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಲಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಇದೇ ವೇಳೆ ಹಾವು ಕಡಿತ ಸೇರಿದಂತೆ ಹಲವು ರೀತಿಯ ಮಾರ್ಗದರ್ಶನಗಳನ್ನು ಈ ಆ್ಯಪ್‌ನಲ್ಲಿ ನೀಡಲಾಗಿದೆ. ಹಾವು ಕಡಿತದ ಬಳಿಕ ಪ್ರಥಮ ಚಿಕಿತ್ಸೆ, ಮಾಡಬೇಕಾದ ಪ್ರಮುಖ ಜವಾಬ್ದಾರಿಗಳು, ಮಾಡಬಾರದ ಕೆಲಸಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಹಾವು ಕಡಿತಕ್ಕೆ ಸಮೀಪದಲ್ಲಿ ಆ್ಯಂಟಿ ಸ್ನೇಕ್ ವೆನಮ್ ಇಂಜೆಕ್ಷನ್ ಲಭ್ಯವಿರುವ ಆಸ್ಪತ್ರೆಗಳ ವಿವರಗಳು ಇದರಲ್ಲಿ ಲಭ್ಯವಿದೆ. ಚಿಕಿತ್ಸೆ ಪಡೆಯಲು ಎದುರಾಗುವ ಸವಾಲು, ವಿಳಂಬಗಳನ್ನು ಈ ಆ್ಯಪ್ ತಡೆಯಲಿದೆ.
ಆ್ಯಪ್‌ನಲ್ಲಿ ನೋಂದಾಯಿತ ಉರಗ ತಜ್ಞರ ಇರಲಿದ್ದಾರೆ. ಅವರಿಗೆ ಮಧ್ಯಪ್ರದೇಶ ಅರಣ್ಯ ಇಲಾಖೆಯಿಂದ ಸರ್ಟಿಫಿಕೇಶನ್ ಪಡೆದ ಉರಗ ತಜ್ಞರು ಆಗಿರುತ್ತಾರೆ. ಹೀಗಾಗಿ ಹೆಚ್ಚು ಹೊಣೆಗಾರಿಕೆಯಲ್ಲಿ ಹಾವುಗಳ ರಕ್ಷಣೆಯಾಗಲಿದೆ ಎಂದು ಅರಣ್ಯ ಇಲಾಖೆ ಹೇಳಿದೆ.

