ಕಲೀಮ್ ಉಲ್ಲಾ ಖಾನ್, 'ಭಾರತದ ಮಾವಿನ ಮನುಷ್ಯ' ಎನಿಸಿಕೊಂಡಿದ್ದಾರೆ. ಒಂದೇ ಮಾವಿನ ಮರದಲ್ಲಿ 300 ವಿವಿಧ ಜಾತಿಯ ಮಾವಿನ ಹಣ್ಣುಗಳನ್ನು ಬೆಳೆದು ಇತಿಹಾಸ ಸೃಷ್ಟಿಸಿದ್ದಾರೆ. ಅದೂ 120 ವರ್ಷ ಹಳೆಯ ಮರ. ಪ್ರತಿಯೊಂದು ಹಣ್ಣು ತನ್ನದೇ ಆದ ವಿಶಿಷ್ಟ ರುಚಿ, ಆಕಾರ ಮತ್ತು ಬಣ್ಣವನ್ನು ಹೊಂದಿದೆ.

ಭಾರತವೇ ಮಾವಿನ ಹಣ್ಣಿನ ತವರು, ನೂರಾರು ಜಾತಿಯ ಮಾವಿನ ಹಣ್ಣುಗಳನ್ನು ಉತ್ಪಾದಿಸಿದ್ದೂ ನಮ್ಮವರೇ. ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣು ಇರೋದೂ ನಮ್ಮಲ್ಲೇ. ಇಂದು ಇತರ ಕೆಲವು ದೇಶಗಳು ಮಾವಿನ ಉತ್ಪಾದನೆಯಲ್ಲಿ ನಮ್ಮ ಜೊತೆಗೆ ಪೈಪೋಟಿ ಕೊಡಲು ನಿಂತಿದ್ದರೂ, ಅತ್ಯಂತ ರುಚಿಯ ಒರಿಜಿನಲ್‌ ಹಾಗೂ ಕಸಿ ಮಾವಿನ ಹಣ್ಣುಗಳು ಸಿಗೋದು ನಮ್ಮಲ್ಲೇ. ಮಾವಿನ ಋತು ಆರಂಭವಾದ ಕೂಡಲೆ ಮಾರುಕಟ್ಟೆಗಳು ಲೆಕ್ಕವಿಲ್ಲದಷ್ಟು ಮಾವಿನ ಪ್ರಭೇದಗಳಿಂದ ತುಂಬಿ ಹೋಗಿ ಎಲ್ಲಾ ವಯಸ್ಸಿನ ಜನರನ್ನು ಆಕರ್ಷಿಸುತ್ತವೆ. ಆದರೆ ಈ ಹಣ್ಣಿನ ಮೇಲಿನ ಆಳವಾದ ಪ್ರೀತಿಗಾಗಿ ಒಬ್ಬ ವ್ಯಕ್ತಿ ಎದ್ದು ಕಾಣುತ್ತಾರೆ: ಅವರೇ ಕಲೀಮ್ ಉಲ್ಲಾ ಖಾನ್. ʼಭಾರತದ ಮಾವಿನ ಮನುಷ್ಯʼ ಎಂದೇ ಇವರು ಪ್ರಸಿದ್ಧರಾಗಿದ್ದಾರೆ. ಇವರು ಒಂದೇ ಮಾವಿನ ಮರದಲ್ಲಿ 300 ಜಾತಿಯ ಮಾವಿನ ಹಣ್ಣುಗಳನ್ನು ಬೆಳೆದಿದ್ದಾರೆ! ನಂಬಲಿಕ್ಕೆ ಕಷ್ಟ, ಆದರೆ ನಿಜ.

ಕಲೀಮ್ ಉಲ್ಲಾ ಖಾನ್ ಉತ್ತರ ಪ್ರದೇಶದ ಮಲಿಹಾಬಾದ್‌ನಲ್ಲಿ ವಾಸಿಸುವವರು. ಈ ಊರೇ ಮಾವಿನಹಣ್ಣುಗಳಿಗೆ ಹೆಸರುವಾಸಿ. ಕಲೀಮ್‌ ಅವರು ಒಂದು ಸಾಮಾನ್ಯವಾಗಿ ಕಾಣುವ, 120 ವರ್ಷ ಹಳೆಯ ಮಾವಿನ ಮರವನ್ನು ತಮ್ಮ ಕಸಿ ಕಟ್ಟುವ ಮ್ಯಾಜಿಕ್‌ ಮೂಲಕ ಜೀವಂತ ಅದ್ಭುತವನ್ನಾಗಿ ಪರಿವರ್ತಿಸಿದರು. ಈಗ ಅದರಲ್ಲಿ 300ಕ್ಕೂ ಹೆಚ್ಚು ವಿವಿಧ ಜಾತಿಯ ಮಾವಿನಹಣ್ಣುಗಳು ಬೆಳೆಯುತ್ತವೆ. ಪ್ರತಿಯೊಂದು ವಿಧವೂ ತನ್ನದೇ ಆದ ರುಚಿ, ಆಕಾರ ಮತ್ತು ಬಣ್ಣವನ್ನು ಹೊಂದಿದೆ. ಈ ಅಸಾಮಾನ್ಯ ಮರವು ತಜ್ಞರು ಮತ್ತು ಹಣ್ಣಿನ ಅಭಿಮಾನಿಗಳ ಗಮನ ಸೆಳೆದಿದೆ.

ಖಾನ್ ಕೇವಲ 17 ವರ್ಷದವರಿದ್ದಾಗ ಮಾವಿನ ತೋಟಗಾರಿಕೆಯಲ್ಲಿ ತಮ್ಮ ಪ್ರಯಾಣ ಪ್ರಾರಂಭಿಸಿದರು. ಮಾವಿನ ಮರಗಳೊಂದಿಗೆ ತಮ್ಮ ಸಮಯವನ್ನು ಕಳೆದರು. ಸದಾ ಕುತೂಹಲದಿಂದ ಕೂಡಿದ್ದ ಅವರು ಯಾವಾಗಲೂ ಹೊಸದನ್ನು ಬೆಳೆಸಲು ಪ್ರಯತ್ನಿಸುತ್ತಿದ್ದರು. ಕಾಲಾನಂತರದಲ್ಲಿ ಮಾವು ಮತ್ತು ಇತರ ಹಣ್ಣುಗಳನ್ನು ಕಸಿ ಮಾಡುವ ಅವರ ಕೌಶಲ್ಯ ಬೆಳೆಯಿತು. ಅವರು ಅದರಲ್ಲಿ ಪ್ರವೀಣರಾದರು.

2008ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀಯನ್ನು ಅವರಗೆ ಕೊಡಲಾಯಿತು. ಇದು ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ದೊರೆತ ಪ್ರತಿಫಲ. ವಿಶೇಷವಾಗಿ ಒಂದೇ ಮರಕ್ಕೆ ಬಹು ಮಾವಿನ ಪ್ರಭೇದಗಳನ್ನು ಕಸಿ ಮಾಡುವ ಅವರ ಪ್ರತಿಭೆಗೆ ನೀಡಿದ ಗೌರವ. 

ಭಾರತದಲ್ಲಿ ಹಲವು ಪ್ರಸಿದ್ಧ ಮಾವಿನ ವಿಧಗಳಿವೆ: ತೋತಾಪುರಿ, ರಸಪೂರಿ, ಆಲ್ಫಾನ್ಸೋ, ದಸರಾ, ಕೇಸರಿ, ಲಂಗ್ರಾ, ಚೌಸಾ ಮತ್ತಿತರ. ಆದರೆ ಕಲೀಮ್ ಉಲ್ಲಾ ಖಾನ್ ಒಂದು ಹೆಜ್ಜೆ ಮುಂದೆ ಹೋದರು. ಅವರು ತಮ್ಮ ಕೆಲವು ಮಾವಿನ ಪ್ರಭೇದಗಳಿಗೆ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ಇಟ್ಟರು. ಮೊದಲನೆಯದು ಐಶ್ವರ್ಯ, 1994ರಲ್ಲಿ ನಟಿ ಐಶ್ವರ್ಯ ರೈ ಬಚ್ಚನ್ ಅವರು ವಿಶ್ವ ಸುಂದರಿಯಾದಾಗ ಅವರ ಹೆಸರನ್ನು ಇಡಲಾಯಿತು. ಇಂಥ ಇತರ ಹೆಸರುಗಳಲ್ಲಿ ಅನಾರ್ಕಲಿ, ಸಚಿನ್ ತೆಂಡೂಲ್ಕರ್ ಮತ್ತು ನರೇಂದ್ರ ಮೋದಿ ಕೂಡ ಸೇರಿದ್ದಾರೆ. ಈ ವಿಶೇಷ ಸ್ಪರ್ಶ ಅವರ ಕೆಲಸವನ್ನು ಇನ್ನಷ್ಟು ಅನನ್ಯ ಮತ್ತು ಅರ್ಥಪೂರ್ಣವಾಗಿಸಿತು.

ರುಚಿಯಾದ, ಅತ್ಯಂತ ಸಿಹಿಯಾದ ಮಾವು ಆಯ್ಕೆ ಮಾಡೋದು ಹೇಗೆ? ಇಲ್ಲಿವೆ ನೋಡಿ ಸಿಂಪಲ್ ಟಿಪ್ಸ್

ಖಾನ್ ಅವರ ಕಥೆಯ ಅತ್ಯಂತ ಸ್ಪೂರ್ತಿದಾಯಕ ಭಾಗವೆಂದರೆ ಅವರು 7ನೇ ತರಗತಿಯ ನಂತರ ಎಂದಿಗೂ ಅಧ್ಯಯನ ಮಾಡಲಿಲ್ಲ! ಅವರಿಗೆ ಶಾಲೆಯ ಕಲಿಕೆ ಇಷ್ಟವಿರಲಿಲ್ಲ. ಆದರೆ ಅವರು ತಮ್ಮ ನಿಜವಾದ ಶಿಕ್ಷಣವನ್ನು ಹೊಲಗಳು ಮತ್ತು ನರ್ಸರಿಗಳಲ್ಲಿ ಕಲಿತರು. ಅವರು ತಮ್ಮ ತಂದೆಯೊಂದಿಗೆ ಅವರ ನರ್ಸರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು 17 ನೇ ವಯಸ್ಸಿನಲ್ಲಿ ತಮ್ಮ ಮೊದಲ ಕಸಿ ಪ್ರಯೋಗ ಮಾಡಿದರು. ಭಾರೀ ಮಳೆಯಿಂದಾಗಿ ಮೊದಲ ಮರ ಸತ್ತರೂ, ಅವರು ಬಿಟ್ಟುಕೊಡಲಿಲ್ಲ. ಪ್ರತಿ ತಪ್ಪಿನಿಂದಲೂ ಕಲಿತರು ಮತ್ತು ನಿಧಾನವಾಗಿ ಪರಿಣತರಾದರು.

ಮಾವಿನ ಹಣ್ಣು ತಿನ್ನೋದ್ರಿಂದ ಸಿಗುತ್ತೆ ಸಿಕ್ಕಾಪಟ್ಟೆ ಪ್ರಯೋಜನ