ಬೇಸಿಗೆಯಲ್ಲಿ ಮಾವಿನಕಾಯಿಯಿಂದ ರುಚಿಕರ ಮಂದನ ಗೊಜ್ಜು ತಯಾರಿಸಿ. ಬೇಯಿಸಿದ ಮಾವಿನಕಾಯಿ, ಬೆಳ್ಳುಳ್ಳಿ-ಮೆಣಸಿನಕಾಯಿ ಪೇಸ್ಟ್, ಒಗ್ಗರಣೆ, ಬೆಲ್ಲ ಬಳಸಿ ಸುಲಭವಾಗಿ ಮಾಡಬಹುದು. ವಿಟಮಿನ್ ಗಳಿಂದ ಸಮೃದ್ಧ ಮಾವಿನಕಾಯಿ ಆರೋಗ್ಯಕ್ಕೆ ಉತ್ತಮ. ರೋಗನಿರೋಧಕ ಶಕ್ತಿ ಹೆಚ್ಚಿಸಿ, ನಿರ್ಜಲೀಕರಣ ತಡೆಯುತ್ತದೆ.

ಇದು ಮಾವಿ (Mango)ನ ಋತು. ಎಲ್ಲಿ ನೋಡಿದ್ರೂ ಮಾವಿನ ಹಣ್ಣು, ಮಾವಿನ ಕಾಯಿ ಸಿಗ್ತಿದೆ. ಮಾವಿನ ಘಮ ಎಲ್ಲ ಕಡೆ ಬರ್ತಿದೆ. ಈ ಋತುವಿನಲ್ಲಿ ಮನೆಯಲ್ಲಿ ಒಂದಾದ್ರೂ ಮಾವಿನ ಪದಾರ್ಥ ಇದ್ದೇ ಇರುತ್ತೆ. ಮಾವಿನ ಕಾಯಿ ಚಟ್ನಿ, ಮಾವಿನ ಕಾಯಿ ತಂಬುಳಿ, ಮಾವಿನಕಾಯಿ ಚಿತ್ರಾನ್ನ ಮಾಡಿ ಬೋರ್ ಆಗಿದೆ, ಮಾವಿನ ಕಾಯಿಯಿಂದ ಇನ್ನೇನು ಮಾಡ್ಬಹುದು ಅಂತ ಆಲೋಚನೆ ಮಾಡ್ತಿದ್ರೆ ಇಲ್ಲೊಂದು ಹೊಸ ರೆಸಪಿ ಇದೆ. ನೀವು ಕೆಲವೇ ಕೆಲವು ಪದಾರ್ಥ ಬಳಸಿ, ರುಚಿಯಾದ ಮಾವಿನ ರೆಸಿಪಿ ತಯಾರಿಸಬಹುದು. ಕೆಲವೇ ನಿಮಿಷದಲ್ಲಿ ಈ ರೆಸಿಪಿ ಸಿದ್ಧವಾಗುತ್ತೆ. ಬಿಸಿ ಬಿಸಿ ಅನ್ನದ ಜೊತೆ ಇದನ್ನು ಬೆರೆಸಿ ತಿಂದ್ರೆ ಮಜವೇ ಬೇರೆ. ನಾವಿಂದು ಮಾವಿನ ಕಾಯಿಯ ಮಂದನ ಗೊಜ್ಜು ಮಾಡೋದು ಹೇಗೆ ಅಂತಾ ತಿಳಿಸ್ತೇವೆ. 

ಮಂದನ ಗೊಜ್ಜು (mandana gojju) ಮಾಡೋಕೆ ಬೇಕಾಗುವ ಸಾಮಾಗ್ರಿ :  ನೀರು, ಉಪ್ಪು, ಎರಡು ಮಾವಿನ ಕಾಯಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ರುಚಿಗೆ ತಕ್ಕಷ್ಟು ಬೆಲ್ಲ.

ಮಂದನ ಗೊಜ್ಜು ಮಾಡುವ ವಿಧಾನ : ಮೊದಲು ಒಂದು ಪಾತ್ರೆಗೆ ನೀರನ್ನು ಹಾಕಿ ಬಿಸಿ ಮಾಡಿಕೊಳ್ಳಿ. ನಂತ್ರ ಅದಕ್ಕೆ ಉಪ್ಪನ್ನು ಹಾಕಿ. ನೀರು ಕುದಿಯಲು ಶುರು ಆಗ್ತಿದ್ದಂತೆ ಮಾವಿನ ಕಾಯಿ ಹಾಕಿ ಬೇಯಿಸಿಕೊಳ್ಳಿ. ಮಾವಿನ ಕಾಯಿ ಬೆಂದ ನಂತ್ರ ಸಿಪ್ಪೆ ತೆಗೆದು ಅದನ್ನು ಕಿವುಚಿಕೊಳ್ಳಿ. ಇನ್ನೊಂದು ಕಡೆ ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿಯನ್ನು ಕುಟ್ಟಿ ಪೇಸ್ಟ್ ಮಾಡಿಕೊಳ್ಳಿ. ಇನ್ನೊಂದು ಬಾಣೆಲೆಗೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿ ಆಗ್ತಿದ್ದಂತೆ ಅದಕ್ಕೆ ಸಾಸಿವೆ, ಉದ್ದಿನ ಬೇಳೆ ಹಾಕಿಕೊಳ್ಳಿ. ಅದು ಸಿಡಿದ ನಂತ್ರ ಅದಕ್ಕೆ ಹಸಿಮೆಣಸಿನ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಆ ನಂತ್ರ ಮಾವಿನ ಕಾಯಿ ಮಿಶ್ರಣವನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ. ಅದಕ್ಕೆ ಮಾವಿನ ಕಾಯಿ ಬೇಯಿಸಿದ ನೀರನ್ನು ಕೂಡ ಹಾಕಿ. ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಬೇಯಿಸಿಕೊಳ್ಳಿ. ಈಗ ಮಂದನ ಗೊಜ್ಜು ಸಿದ್ಧ. ಬಿಸಿ ಅನ್ನಕ್ಕೆ ನೀವು ಮಂದನ ಗೊಜ್ಜು ಹಾಕಿ, ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿ ತಿನ್ನಬೇಕು. 15 ದಿನಗಳ ಕಾಲ ನೀವು ಈ ಗೊಜ್ಜನ್ನು ಹಾಗೆ ಇಡಬಹುದು. 

ಮಾವಿನ ಕಾಯಿಯಿಂದ ಅನೇಕ ರೆಸಿಪಿ ಮಾಡ್ಬಹುದು. ಮಾವಿನ ಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಕಬ್ಬಿಣ, ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕವಿದೆ. ಈ ಎಲ್ಲಾ ಪೋಷಕಾಂಶಗಳು ದೇಹವನ್ನು ಆರೋಗ್ಯವಾಗಿಡುತ್ತವೆ ಮತ್ತು ಬೇಸಿಗೆಯಲ್ಲಿ ಅನೇಕ ರೋಗಗಳಿಂದ ರಕ್ಷಿಸುತ್ತವೆ. ಮಾವಿನಕಾಯಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಬೇಸಿಗೆಯಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಾವಿನ ಕಾಯಿ ಮಾಂತ್ರಿಕ ಪರಿಣಾಮವನ್ನು ಬೀರುತ್ತದೆ. ಮಾವಿನ ಕಾಯಿ ಕೇವಲ 60 ಕ್ಯಾಲೊರಿಗಳನ್ನು ಹೊಂದಿದೆ. ಈ ಮಾವಿನ ಸೇವನೆಯು ನಿರ್ಜಲೀಕರಣವನ್ನು ತಡೆಯುತ್ತದೆ. ಮಾವಿನ ಕಾಯಿ ಸೇವಿಸುವುದರಿಂದ ಆಮ್ಲೀಯತೆ, ಎದೆಯುರಿ, ಬೆಳಗಿನ ಬೇನೆ, ಅಜೀರ್ಣ ಮತ್ತು ಹೊಟ್ಟೆಯ ಉಷ್ಣತೆ ಕಡಿಮೆ ಆಗುತ್ತದೆ. ಮಾವಿನ ಕಾಯಿ ವಾಂತಿಯನ್ನು ನಿಯಂತ್ರಿಸಲು ತುಂಬಾ ಪ್ರಯೋಜನಕಾರಿ. ಮಾವಿನ ಕಾಯಿ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಮಾವಿನ ಕಾಯಿ ಕ್ಯಾನ್ಸರ್ ನಂತಹ ಅಪಾಯವನ್ನು ಕಡಿಮೆ ಮಾಡುತ್ತದೆ. ಋತುವಿನಲ್ಲಿ ಮಾವಿನಕಾಯಿ ಸೇವನೆ ಹೆಚ್ಚು ಪ್ರಯೋಜನಕಾರಿ ಎಂದು ತಜ್ಞರು ಹೇಳ್ತಾರೆ.