Mango Quality Checking: ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ಸಿಹಿಯಾದ ಮಾವುಗಳನ್ನು ಆಯ್ಕೆ ಮಾಡುವುದು ಹೇಗೆಂದು ತಿಳಿಯಿರಿ. ಮಾವುಗಳನ್ನು ಸಂಗ್ರಹಿಸುವ ಬಗೆ ಮತ್ತು ಅವುಗಳನ್ನು ಹೆಚ್ಚು ಕಾಲ ತಾಜಾವಾಗಿಡುವ ಸಲಹೆಗಳನ್ನೂ ತಿಳಿದುಕೊಳ್ಳಿ.

ರುಚಿಯಾದ, ಅತ್ಯಂತ ಸಿಹಿಯಾದ ಮಾವು ಆಯ್ಕೆ ಮಾಡೋದು ಹೇಗೆ? ಇಲ್ಲಿವೆ ನೋಡಿ ಸಿಂಪಲ್ ಟಿಪ್ಸ್ 

ಬೇಸಿಗೆಗಾಲ ಅಂದ್ರೆ ನೆನಪಾಗೋದು ಮಾವು. ಮಾರುಕಟ್ಟೆಗೆ ಹೋದ್ರೆ ಸಿಹಿಯಾದ ಮಾವಿನ ಪರಿಮಳ ನಿಮ್ಮನ್ನು ಸೆಳೆಯುತ್ತದೆ. ಒಂದಲ್ಲ, ಎರಡಲ್ಲ ಮಾರುಕಟ್ಟೆಯಲ್ಲಿ ಬಗೆಬಗೆಯ ಮಾವು ಸಿಗುತ್ತವೆ. ಆದ್ರೆ ಬಹುತೇಕರಿಗೆ ಸಿಹಿಯಾದ ಮಾವು ಹೇಗೆ ಖರೀದಿಸಬೇಕು ಎಂದು ಗೊತ್ತಾಗಲ್ಲ. ಕೆಲ ವ್ಯಾಪಾರಿಗಳು ರುಚಿಗೆ ಬೇರೆ ಹಣ್ಣು ನೀಡುತ್ತಾರೆ. ನಂತರ ಕೊಡುವಾಗ ಬೇರೆ ಹಣ್ಣುಗಳನ್ನು ನೀಡಿ ಯಾಮರಿಸುತ್ತಾರೆ. ಆದ್ದರಿಂದ ಯಾವ ಹಣ್ಣು ಖರೀದಿಸುತ್ತಿದ್ದೇವೆ ಮತ್ತು ವ್ಯಾಪಾರಿ ಯಾವುದನ್ನು ಬ್ಯಾಗ್‌ನೊಳಗೆ ಹಾಕುತ್ತಿದ್ದಾನೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಕೆಲವು ವಿಶೇಷ ವಿಧಾನಗಳ ಮೂಲಕ ಸಿಹಿಯಾದ ಮಾವು ಪತ್ತೆ ಮಾಡಬಹುದಾಗಿದೆ. ಆ ವಿಧಾನಗಳು ಯಾವವು ಎಂದು ನೋಡೋಣ ಬನ್ನಿ. 

1.ಮಾವಿನ ಸ್ಪರ್ಶ
ಅನುಭವಿಗಳಿಗೆ ಮಾವಿನ ಸ್ಪರ್ಶದಿಂದಲೇ ಅದು ಸಿಹಿಯಾಗಿದೆಯೋ ಇಲ್ಲವೋ ಎಂಬುವುದು ಗೊತ್ತಾಗುತ್ತದೆ. ಮಾವಿನ ಹಣ್ಣಿನ ಸಿಪ್ಪೆ ಮೃದುವಾಗಿದ್ರೆ ಅದು ಸಿಹಿಯಾಗಿದೆ ಎಂದು ಜಡ್ಜ್ ಮಾಡಬಹುದು. ಮಾವು ತೆಗೆದುಕೊಂಡಲೇ ಬೆರಳುಗಳಿಂದ ಮೇಲ್ಭಾಗವನ್ನು ಮೃದುವಾಗಿ ಒತ್ತಬೇಕು. ಸಿಪ್ಪೆ ಸಾಫ್ಟ್ ಆಗಿದ್ರೆ ಒಳಗಿನ ಭಾಗ ಸಂಪೂರ್ಣವಾಗಿ ಹಣ್ಣಾಗಿದೆ ಎಂದರ್ಥ. ಕೆಲವರು ಅವಧಿಗೂ ಮುನ್ನವೇ ಮಾವು ಕಟಾವು ಮಾಡಿ, ರಾಸಾಯನಿಕ ಪದಾರ್ಥ ಬಳಸಿ ಮಾವು ಹಣ್ಣು ಮಾಡುತ್ತಾರೆ. ಈ ರೀತಿಯಾಗಿ ಹಣ್ಣಾದ ಮಾವಿನ ಸಿಪ್ಪೆ ಮೃದುವಾಗಿರಲ್ಲ. ನೈಸರ್ಗಿಕವಾಗಿ ಹಣ್ಣಾದ ಮಾವಿನ ಸಿಪ್ಪೆ ಮೃದುವಾಗಿರುತ್ತದೆ. 

ಮಾವು ಖರೀದಿಸುವಾಗ ಅದನ್ನು ಸಂಪೂರ್ಣವಾಗಿ ನೋಡಬೇಕು. ಯಾವುದಾದರೂ ಒಂದು ಭಾಗದಲ್ಲಿ ಅದು ಕೆಟ್ಟಿರಬಹುದು ಅಥವಾ ಅದಕ್ಕೆ ಪೆಟ್ಟು ಬಿದ್ದಿರಬಹುದು. ಇದರಿಂದ ಮಾವು ಕಡಿಮೆ ಸಮಯದಲ್ಲಿ ಕೊಳೆಯುವ ಸಾಧ್ಯತೆ ಇರುತ್ತದೆ. ಪೆಟ್ಟು ಬೀಳದ ಮಾವು ಇದ್ರೆ ಅದನ್ನು ನಾಲ್ಕರಿಂದ ಐದು ದಿನ ಸಂಗ್ರಹಿಸಿಡಬಹುದು. 

2.ವಾಸನೆಯಿಂದ ಮಾವು ಆಯ್ಕೆ ಮಾಡೋದು 
ವಾಸನೆಯಿಂದ ರುಚಿಯಾದ ಮಾವು ಪತ್ತೆ ಮಾಡಬಹುದು. ಬಹುತೇಕ ಎಲ್ಲರೂ ವಾಸನೆಯಿಂದಲೇ ಮಾವು ಆಯ್ಕೆ ಮಾಡಿಕೊಳ್ಳುತ್ತಾರೆ. ಹಣ್ಣಿನ ಪರಿಮಳ ಎಷ್ಟು ಸುಮಧುರವಾಗಿರುತ್ತೋ ಆ ಹಣ್ಣು ಅಷ್ಟು ರುಚಿಯಾಗಿರುತ್ತದೆ. ವಾಸನೆಯ ಮೂಲಕವೂ ಮಾವು ಆಯ್ಕೆ ಮಾಡುವ ಒಂದು ವಿಧಾನವಾಗಿದೆ. 

3.ಬಣ್ಣದಿಂದ ಗುರುತಿಸುವಿಕೆ
ಇನ್ನು ಕೆಲವರು ಮಾವಿನ ಹಣ್ಣಿನ ಬಣ್ಣ ನೋಡಿ ಖರೀದಿಸುತ್ತಾರೆ. ಆದ್ರೆ ಇದು ಸರಿಯಾದ ಕ್ರಮವಲ್ಲ ಎಂದು ವ್ಯಾಪಾರಿಗಳೇ ಹೇಳುತ್ತಾರೆ. ವಿವಿಧ ತಳಿಯ ಮಾವುಗಳು ಹಸಿರು, ಕೇಸರಿ, ಹಳದಿ ಬಣ್ಣಗಳನ್ನು ಹೊಂದಿರುತ್ತವೆ. ಹಾಗಾಗಿ ಎಲ್ಲಾ ಮಾವುಗಳನ್ನು ಬಣ್ಣಗಳ ಮೇಲೆ ಅದು ಸಿಹಿಯಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: ರಾತ್ರಿ ಅಥವಾ ಬೆಳಗ್ಗೆ ಖರ್ಜೂರ ಯಾವಾಗ ತಿನ್ನೋದು ಉತ್ತಮ?

ನೀರಿನಲ್ಲಿ ನೆನಸೋದು!
ಮಾರುಕಟ್ಟೆಯಿಂದ ಮಾವಿನ ಹಣ್ಣುಗಳನ್ನು ತಂದ ಕೂಡಲೇ 10 ನಿಮಿಷಗಳ ಕಾಲ ನೀರಿನಲ್ಲಿ ನೆನಸಿಡಬೇಕು. ಈ ವಿಧಾನ ಮಾವುಗಳಲ್ಲಿ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ನೀರಿನಲ್ಲಿ ಮಾವುಗಳನ್ನ ಇರಿಸೋದರಿಂದ ಅವುಗಳ ಶಾಖ ಕಡಿಮೆಯಾಗುತ್ತದೆ. ಹೀಗೆ ಮಾಡೋದರಿಂದ ಜೀರ್ಣಕಾರಿ ಸಮಸ್ಯೆಗಳು ಎದುರಾಗಲ್ಲ. 

ಮನೆಯಲ್ಲಿ ಮಾವು ಸಂಗ್ರಹಿಸೋದು ಹೇಗೆ?
ಮಾರುಕಟ್ಟೆಯಿಂದ ತಂದ ಮಾವುಗಳನ್ನು 5 ರಿಂದ 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಅವುಗಳನ್ನು ಬಟ್ಟೆಯಿಂದ ಒರೆಸಿ ಗಾಳಿಯಾಡುವ ಪ್ರದೇಶದಲ್ಲಿ ಸಂಗ್ರಹಿಸಿಡಬೇಕು. ಹೀಗೆ ಮಾಡಿದ್ರೆ ಮಾವು 4 ರಿಂದ 5 ದಿನ ತಾಜಾ ಆಗಿರುತ್ತದೆ. ಇನ್ನು ಬಲಿಯದ ಹಣ್ಣಾಗಿದ್ರೆ ಅದನ್ನು ಪೇಪರ್ ಅಥವಾ ಕಾಟನ್ ಬಟ್ಟೆಯಲ್ಲಿ ಸುತ್ತಿ ಕೋಣೆಯ ಉಷ್ಣಾಂಶದಲ್ಲಿರಿಸಬೇಕು. ಇದರಿಂದ ಮಾವು ಹಣ್ಣಾಗುತ್ತದೆ. ಫ್ರಿಡ್ಜ್‌ನಲ್ಲಿ ಮಾವು ಇರಿಸಿದ್ರೆ ಅದರ ರುಚಿ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಬೇಸಗೆಯಲ್ಲಿ ಪ್ರತಿದಿನ ಮೊಟ್ಟೆ ತಿನ್ನುತ್ತೀರಾ? ಈ ವಿಷಯ ತಿಳ್ಕೊಳ್ಳಿ!