ಪಾಸ್‌ಪೋರ್ಟ್ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹೊಸ ನಿಯಮ ಈಗಾಗಲೇ ಜಾರಿಗೆ ಬಂದಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಸ್‌ಪೋರ್ಟ್‌ಗೆ ಹೊಸ ನಿಯಮ, ವಯಸ್ಕರ ಶುಲ್ಕ ಹೆಚ್ಚಳ ಸೇರಿದಂತೆ ಬದಲಾವಣೆ ಡಿಟೇಲ್ಸ್ ಇಲ್ಲಿದೆ.
ನವದೆಹಲಿ (ಸೆ.18) ಕೇಂದ್ರ ಸರ್ಕಾರ ಪಾಸ್‌ಪೋರ್ಟ್ ನಿಯಮದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಮಕ್ಕಳ ಪಾಸ್‌ಪೋರ್ಟ್, ವಯಸ್ಕರ ಪಾಸ್‌ಪೋರ್ಟ್ ಶುಲ್ಕ, ಅರ್ಜಿ ಶುಲ್ಕ ನಿಯಮದಲ್ಲೂ ಬದಲಾವಣೆ ಮಾಡಲಾಗಿದೆ. ಹೊಸ ನಿಯಮ ಈಗಾಗಲೇ ಜಾರಿಗೊಂಡಿದೆ. ಹೀಗಾಗಿ ಪಾಸ್‌ಪೋರ್ಟ್ ಮಾಡಿಸುವಾಗ ಹೊಸ ನಿಯಮಗಳು ಅನ್ವಯವಾಗಲಿದೆ. ಕೇಂದ್ರ ವಿದೇಶಾಂಗ ಇಲಾಖೆ ಪಾಸ್‌ಪೋರ್ಟ್ ತಿದ್ದುಪಡಿ ನಿಯಮ 2026 ಅಧಿಸೂಚಿಸಿದೆ. ಪ್ರಮುಖವಾಗಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಸ್‌ಪೋರ್ಟ್ ನಿಯಮದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ.
ಮಕ್ಕಳ ಪಾಸ್‌ಪೋರ್ಟ್ ನಿಯಮ
15 ವರ್ಷದೊಳಗಿನ ಮಕ್ಕಳ ಪಾಸ್‌ಪೋರ್ಟ್ ನಿಯಮದಲ್ಲಿ ಹೊಸ ನೀತಿ ತರಲಾಗಿದೆ. ಪ್ರಮುಖವಾಗಿ ಮಕ್ಕಳ 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ 5 ವರ್ಷದವರೆಗೆ ಅಥವಾ ಮಕ್ಕಳಿಗೆ 18 ವರ್ಷ ತುಂಬುವವರಿಗೆ ಮಾನ್ಯವಾಗಿರಲಿದೆ. ಈ ಪೈಕಿ ಯಾವುದು ಮೊದಲು ಅಂದರೆ ಪಾಸ್‌ಪೋರ್ಟ್ ಅವಧಿ 5 ವರ್ಷ ಅಥವಾ ಮಕ್ಕಳ ವಯಸ್ಸು 18 ವರ್ಷ ಮೊದಲು ಆಗುತ್ತದೋ ಅದೇ ಅಂತಿಮ ಮಾನ್ಯತಾ ಅವಧಿಯಾಗಿರುತ್ತದೆ.
ಅರ್ಜಿ ಶುಲ್ಕ ನಿಯಮದಲ್ಲೂ ಬದಲಾವಣೆ
ಪಾಸ್‌ಪೋರ್ಟ್‌ಗಳ ಪೈಕಿ ತತ್ಕಾಲ್ ಹಾಗೂ ಸಾಮಾನ್ಯ ಪಾಸ್‌ಪೋರ್ಟ್ ಅರ್ಜಿ ಶುಲ್ಕ ಹೆಚ್ಚಿಸಲಾಗಿದೆ. ಇನ್ನು 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರ ಹೊಸ ಪಾಸ್‌ಪೋರ್ಟ್ ಅರ್ಜಿಯಲ್ಲಿ ಶೇಕಡಾ 10 ರಷ್ಟು ಶುಲ್ಕ ವಿನಾಯಿತಿ ನೀಡಲಾಗಿದೆ. ಆದರೆ ಇಲ್ಲಿ ಮರುಪಾಸ್‌ಪೋರ್ಟ್ ಅರ್ಜಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ.
ವಯಸ್ಕರ 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ ಹೊಸ ಅರ್ಜಿ ಹಾಗೂ ನವೀಕರಣ ಶುಲ್ಕವನ್ನು 1,500 ರೂಪಾಯಿಯಿಂದ 2,500 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು 60 ಪುಟುಗಳ ವಯಸ್ಕರ ಪಾಸ್‌ಪೋರ್ಟ್ ಶುಲ್ಕವನ್ನು 2,000 ರೂಪಾಯಿಯಿಂದ 3,500 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು ಮಕ್ಕಳ 36 ಪುಟಗಳ ಸಾಮಾನ್ಯ ಅಥವಾ ಹೊಸ ಮರುಪಾಸ್‌ಪೋರ್ಟ್ ಅರ್ಜಿ ಶುಲ್ಕ 1,000 ರೂಪಾಯಿಯಿಂದ 1,750 ರೂಪಾಯಿಗೆ ಏರಿಕೆ ಮಾಡಲಾಗಿದೆ. ಮಕ್ಕಳ ತತ್ಕಾಲ್ ಪಾಸ್‌ಪೋರ್ಟ್ ಶುಲ್ಕಕ್ಕೆ 3,000 ರೂಪಾಯಿಯಿಂದ 4,220 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಸೆಪ್ಟೆಂಬರ್ 17 ರಿಂದಲೇ ಪಾಸ್‌ಪೋರ್ಟ್ ಹೊಸ ನಿಯಮ ಜಾರಿಯಾಗಿದೆ. ಹೀಗಾಗಿ ಹೊಸದಾಗಿ ಪಾಸ್‌ಪೋರ್ಚ್ ಅಥವಾ ಮರು ಪಾಸ್‌ಪೋರ್ಟ್ ಅರ್ಜಿ ಹಾಕುವಾಗ ಹೊಸ ನಿಯಮದ ಬಗ್ಗೆ ತಿಳಿದಿರಲಿ.


