LTTEಗೆ ಮರುಜೀವ ನೀಡಲು ದಾವೂದ್ ಆಪ್ತನಿಂದ ಭಾರಿ ಸಂಚು: ಲಂಕೆಗೆ ಅಪಾರ ಶಸ್ತ್ರಾಸ್ತ್ರ, ಡ್ರಗ್ಸ್ ಸಾಗಣೆ
ಕರಾಚಿ ಮೂಲದ ಗ್ಯಾಂಗ್‌ಸ್ಟರ್ ಹಾಗೂ ಪಾಕಿಸ್ತಾನದಿಂದ ಹಿಂದೂ ಮಹಾಸಾಗರದವರೆಗೆ ಭರ್ಜರಿ ಡ್ರಗ್ಸ್ ಕಳ್ಳ ಸಾಗಣೆಯಲ್ಲಿ ತೊಡಗಿಸಿಕೊಂಡಿರುವ ಹಾಜಿ ಸಲೀಂ ಎಂಬಾತ ಇಂತಹದ್ದೊಂದು ಭಯಾನಕ ಸಂಚು ರೂಪಿಸಿದ್ದಾನೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದಾನೆ ಎಂದು ವರದಿಯಾಗಿದೆ.
ನವದೆಹಲಿ (ಜೂನ್ 26, 2023): ದಶಕಗಳ ಕಾಲ ಶ್ರೀಲಂಕಾದಲ್ಲಿ ರಕ್ತದೋಕುಳಿ ಹರಿಸಿದ್ದ ಹಾಗೂ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ್ದ ತಮಿಳು ಬಂಡುಕೋರ ಸಂಘಟನೆ ಎಲ್‌ಟಿಟಿಇಗೆ ಮರುಜೀವ ನೀಡುವ ಪ್ರಯತ್ನವೊಂದು ಆರಂಭವಾಗಿದೆ ಎಂಬ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆ ನಂಟು ಹೊಂದಿರುವ ಪಾಕಿಸ್ತಾನದ ಗ್ಯಾಂಗ್‌ಸ್ಟರ್‌ವೊಬ್ಬ ಈ ಕೆಲಸ ಆರಂಭಿಸಿದ್ದಾನೆ ಎಂದು ವರದಿಗಳು ತಿಳಿಸಿವೆ.
ಕರಾಚಿ ಮೂಲದ ಗ್ಯಾಂಗ್‌ಸ್ಟರ್ ಹಾಗೂ ಪಾಕಿಸ್ತಾನದಿಂದ ಹಿಂದೂ ಮಹಾಸಾಗರದವರೆಗೆ ಭರ್ಜರಿ ಡ್ರಗ್ಸ್ ಕಳ್ಳ ಸಾಗಣೆಯಲ್ಲಿ ತೊಡಗಿಸಿಕೊಂಡಿರುವ ಹಾಜಿ ಸಲೀಂ ಎಂಬಾತ ಇಂತಹದ್ದೊಂದು ಭಯಾನಕ ಸಂಚು ರೂಪಿಸಿದ್ದಾನೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದಾನೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ಇದನ್ನು ಓದಿ: ಎಲ್‌ಟಿಟಿಇ ನಾಯಕ ಪ್ರಭಾಕರನ್ ಇನ್ನೂ ಜೀವಂತ: ನೆಡುಮಾರನ್ ಸ್ಫೋಟಕ ಮಾಹಿತಿ
ಕರಾಚಿಯ ಕ್ಲಿಫ್ಟನ್ ರಸ್ತೆಯಲ್ಲಿರುವ ದಾವೂದ್ ನಿವಾಸದಲ್ಲಿ ಈತ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದಾನೆ. ಇದರಿಂದಾಗಿ ಇಬ್ಬರೂ ತಮಗೆ ಸ್ಮಗ್ಲಿಂಗ್ ಚಟುವಟಿಕೆಯಲ್ಲಿರುವ ಸಂಪನ್ಮೂಲಗಳನ್ನು ಪರಸ್ಪರ ಬಳಸಿಕೊಳ್ಳುತ್ತಿರಬಹುದು ಎಂಬ ಅನುಮಾನ ವ್ಯಕ್ತವಾಗಲು ಕಾರಣವಾಗಿದೆ. ಈ ಇಬ್ಬರ ಕೃತ್ಯಗಳಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಆಶೀರ್ವಾದವಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಸಲೀಂನ ಭಾರತೀಯ ಸಹವರ್ತಿಗಳನ್ನು ಗುರುತಿಸಿ, ಆತನ ಕ್ರಿಮಿನಲ್ ಜಾಲವನ್ನು ನಾಶಗೊಳಿಸಲು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಕಂದಾಯ ಮತ್ತು ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ಗಳು ಒಗ್ಗೂಡಿ ಕಾರ್ಯನಿರ್ವಹಿಸುತ್ತಿವೆ. ಈ ಮೂರೂ ಸಂಘಟನೆಗಳ ಜಂಟಿ ಕಾರ್ಯಾಚರಣೆಯಿಂದಾಗಿ ಇತ್ತೀಚೆಗೆ ಹಿಂದೂ ಮಹಾಸಾಗರದಲ್ಲಿ ದಾಖಲೆಯ 12 ಸಾವಿರ ಕೋಟಿ ರೂ. ಮೌಲ್ಯದ 2500 ಕೆ.ಜಿ. ಮೆಥಾಂಫೆಂಟಮಿನ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆಗಲೇ ಪಾಕಿಸ್ತಾನವು ಎಲ್‌ಟಿಟಿಇ ಪುನರುತ್ಥಾನಕ್ಕೆ ಸಂಚು ನಡೆದ ಶಂಕೆ ಉಂಟಾಗಿತ್ತು.
ಇದನ್ನೂ ಓದಿ: ಪತಿಯನ್ನು ಯುಕೆಗೆ ಕಳಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡುತ್ತೇನೆ: ನಳಿನಿ ಶ್ರೀಹರನ್
ಎಲ್‌ಟಿಟಿಇ ನಾಯಕ ಇನ್ನೂ ಜೀವಂತ?
ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ ಎಂದು ತಮಿಳರ ರಾಷ್ಟ್ರೀಯವಾದಿ ಚಳುವಳಿಯ ನಾಯಕ ನೆಡುಮಾರನ್ ಫೆಬ್ರವರಿಯಲ್ಲಿ ಘೋಷಣೆಯೊಂದನ್ನು ಮಾಡಿದ್ದರು. ತಮಿಳುನಾಡಿನ ತಂಜಾವೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನೆಡುಮಾರನ್, ಎಲ್‌ಟಿಟಿಇ ನಾಯಕರಾಗಿದ್ದ ವೇಳುಪಿಳ್ಳೈ ಪ್ರಭಾಕರನ್ ಇನ್ನೂ ಜೀವಂತವಾಗಿದ್ದು, ಅವರು ಸೂಕ್ತ ಸಮಯದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದರು.
ವಿಶ್ವ ತಮಿಳರ ಒಕ್ಕೂಟದ ಸ್ಥಾಪಕ ಹಾಗೂ ತಮಿಳರ ರಾಷ್ಟ್ರೀಯವಾದಿ ಚಳುವಳಿಯ ಮುಖ್ಯಸ್ಥ, ಜತೆಗೆ ರಾಜಕಾರಣಿಯೂ ಆಗಿದ್ದ ನೆಡುಮಾರನ್ ತಂಜಾವೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ಪ್ರಮುಖವಾದ ಮಾಹಿತಿ ನೀಡಿದ್ದರು. ಪ್ರಭಾಕರನ್ ಆರೋಗ್ಯವಾಗೇ ಇದ್ದು, ಅವರ ಕುಟುಂಬ ಸದಸ್ಯರ ಜತೆ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ. ಆದರೆ, ಸದ್ಯ ಪ್ರಭಾಕರನ್ ಯಾವ ಸ್ಥಳದಲ್ಲಿದ್ದಾರೆ ಎಂಬ ಬಗ್ಗೆ ಮಾತ್ರ ನೆಡುಮಾರನ್ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.
ಇದನ್ನೂ ಓದಿ: ಪಾಕ್ ಗಡಿಯಲ್ಲಿ ಭಾರತದ ವಿರುದ್ಧ ಚೀನಾ ಮಸಲತ್ತು: ಟೆಲಿಕಾಂ ಟವರ್, ಭೂಗತ ಬಂಕರ್ ನಿರ್ಮಾಣ
ಈ ನಡುವೆ ಎಲ್‌ಟಿಟಿಇಗೆ ಮರುಜೀವ ನೀಡುವ ಪ್ರಯತ್ನ ಆರಂಭವಾಗಿದೆ ಎಂಬ ವರದಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಗಡಿ ಒಳನುಸುಳುವಿಕೆ ಹೆಚ್ಚಿಸಲು ಪಾಪಿ Pakistan ಪ್ಲ್ಯಾನ್: ಗುಪ್ತಚರ ಸಂಸ್ಥೆ ಎಚ್ಚರಿಕೆ