ಎಲ್‌ಟಿಟಿಇ ನಾಯಕ ಪ್ರಭಾಕರನ್ ಇನ್ನೂ ಜೀವಂತ: ನೆಡುಮಾರನ್ ಸ್ಫೋಟಕ ಮಾಹಿತಿ
ವಿಶ್ವದ ತಮಿಳರೆಲ್ಲ ಪ್ರಭಾಕರನ್ ಪರವಾಗಿ ನಿಲ್ಲಬೇಕೆಂದೂ ತಂಜಾವೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನೆಡುಮಾರನ್ ಮನವಿ ಮಾಡಿಕೊಂಡಿದ್ದಾರೆ.
ತಂಜಾವೂರು (ಫೆಬ್ರವರಿ 13, 2023): ತಮಿಳುನಾಡಿನಲ್ಲಿ, ಶ್ರೀಲಂಕಾದಲ್ಲಿ ಕೆಲ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಎಲ್‌ಟಿಟಿಇ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಸದ್ಯ ಎಲ್‌ಟಿಟಿಇ ಅನ್ನು ವಿಸರ್ಜಿಸಲಾಗಿದೆ. ಇದಕ್ಕೆ ಕಾರಣ ಅದರ ನಾಯಕ ಪ್ರಭಾಕರನ್ ಹತ್ಯೆಯಾಗಿದ್ದಾರೆ ಎಂಬ ವರದಿ. ಆದರೆ, ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ ಎಂದು ತಮಿಳರ ರಾಷ್ಟ್ರೀಯವಾದಿ ಚಳುವಳಿಯ ನಾಯಕ ನೆಡುಮಾರನ್ ಘೋಷಣೆಯೊಂದನ್ನು ಮಾಡಿದ್ದಾರೆ. ತಂಜಾವೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನೆಡುಮಾರನ್, ಎಲ್‌ಟಿಟಿಇ ನಾಯಕರಾಗಿದ್ದ ವೇಳುಪಿಳ್ಳೈ ಪ್ರಭಾಕರನ್ ಇನ್ನೂ ಜೀವಂತವಾಗಿದ್ದು, ಅವರು ಸೂಕ್ತ ಸಮಯದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ಹೇಳಿದ್ದಾರೆ.
ವಿಶ್ವ ತಮಿಳರ ಒಕ್ಕೂಟದ ಸ್ಥಾಪಕ ಹಾಗೂ ತಮಿಳರ ರಾಷ್ಟ್ರೀಯವಾದಿ ಚಳುವಳಿಯ ಮುಖ್ಯಸ್ಥ, ಜತೆಗೆ ರಾಜಕಾರಣಿಯೂ ಆಗಿದ್ದ ನೆಡುಮಾರನ್ ತಂಜಾವೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ಪ್ರಮುಖವಾದ ಮಾಹಿತಿ ನೀಡಿದ್ದಾರೆ. ಪ್ರಭಾಕರನ್ ಆರೋಗ್ಯವಾಗೇ ಇದ್ದು, ಅವರ ಕುಟುಂಬ ಸದಸ್ಯರ ಜತೆ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ. ಆದರೆ, ಸದ್ಯ ಪ್ರಭಾಕರನ್ ಯಾವ ಸ್ಥಳದಲ್ಲಿದ್ದಾರೆ ಎಂಬ ಬಗ್ಗೆ ಮಾತ್ರ ನೆಡುಮಾರನ್ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಇದನ್ನು ಓದಿ: ತಂದೆಯ ಸಾವಿನ ಬಗ್ಗೆ ವೆಲ್ಲೂರು ಜೈಲಲ್ಲಿ ಪ್ರಿಯಾಂಕಾ ನನ್ನ ಪ್ರಶ್ನೆ ಮಾಡಿದ್ದರು: ನಳಿನಿ ಶ್ರೀಹರನ್!
ಆದರೆ, ಪ್ರಭಾಕರನ್ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ನಾನು ಈ ಮಾಹಿತಿ ನೀಡುತ್ತಿದ್ದೇನೆ ಎಂದು ಲೇಖಕರೂ ಆಗಿರುವ ನೆಡುಮಾರನ್ ತಿಳಿಸಿದ್ದಾರೆ. ಸದ್ಯ, ಶ್ರೀಲಂಕಾದಲ್ಲಿನ ಪರಿಸ್ಥಿತಿ, ಪ್ರತಿಭಟನೆಗಳ ಕಾರಣದಿಂದ ಅವರು ಕಾಣಿಸಿಕೊಳ್ಳುತ್ತಿಲ್ಲ ಎಂದು ಎಲ್‌ಟಿಟಿಇ ಬೆಂಬಲಿಗರೂ ಆಗಿರುವ ನೆಡುಮಾರನ್ ಹೇಳಿದ್ದಾರೆ. ಈ ಹಿನ್ನೆಲೆ ಅವರು ಸೂಕ್ತ ಸಮಯದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದು, ತಮಿಳು ಈಳಂ ಅನ್ನು ಸ್ಥಾಪಿಸಲು ತಮ್ಮ ವಿವರವಾದ ಯೋಜನೆಯನ್ನು ಘೋಷಿಸಲಿದ್ದಾರೆ ಎಂದೂ ನೆಡುಮಾರನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನು ನಾನು ವಿಶ್ವದ ಎಲ್ಲ ತಮಿಳರಿಗೆ ಘೋಷಿಸುತ್ತಿದ್ದೇನೆ. ಈ ಮೂಲಕ ವ್ಯವಸ್ಥಿತ ಷಡ್ಯಂತ್ರ ಹಾಗೂ ಊಹಾಪೋಹಗಳಿಗೆ ತೆರಬೀಳಲಿದೆ ಎಂದೂ ನೆಡುಮಾರನ್ ಹೇಳಿದ್ದಾರೆ. ಅಲ್ಲದೆ, ವಿಶ್ವದ ತಮಿಳರೆಲ್ಲ ಪ್ರಭಾಕರನ್ ಪರವಾಗಿ ನಿಲ್ಲಬೇಕೆಂದೂ ತಂಜಾವೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನೆಡುಮಾರನ್ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತ-ಶ್ರೀಲಂಕಾ ಗೆ ಸಂಬಂಧಿಸಿದ ರಹಸ್ಯ ಕಡತ ನಾಶ
ಹಾಗೆ, ಚೀನಾ ಪ್ರಸ್ತುತ ಶ್ರೀಲಂಕಾದಲ್ಲಿ ಆಳವಾದ ನೆಲೆಯನ್ನು ಸ್ಥಾಪಿಸಲು ಮತ್ತು ಅದನ್ನು ಭಾರತ ವಿರೋಧಿ ನೆಲೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಮತ್ತು ಹಿಂದೂ ಮಹಾಸಾಗರದ ಪ್ರಾಬಲ್ಯವು ಚೀನಾದ ಹಿಡಿತಕ್ಕೆ ಸಿಲುಕುವ ಅಪಾಯವಿದೆ ಎಂದು ಪರಿಗಣಿಸಿ, ಭಾರತ ಸರ್ಕಾರವು ಅದನ್ನು ತಡೆಯುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ವಿನಂತಿಸುತ್ತೇವೆ. ಈ ಸಂದಿಗ್ಧ ಅವಧಿಯಲ್ಲಿ ತಮಿಳುನಾಡು ಸರ್ಕಾರ, ತಮಿಳುನಾಡಿನ ಎಲ್ಲಾ ಪಕ್ಷಗಳು ಮತ್ತು ತಮಿಳುನಾಡಿನ ಜನರು ಒಗ್ಗಟ್ಟಾಗಿ ನಿಂತು ತಮಿಳು ಈಳಂ ರಾಷ್ಟ್ರೀಯ ನಾಯಕ ಪ್ರಭಾಕರನ್ ಅವರನ್ನು ಬೆಂಬಲಿಸಬೇಕು ಎಂದು ಪಾಲಾ.ನೆಡುಮಾರನ್ ವಿನಂತಿಸಿದ್ದಾರೆ.
ಮೇ 2009 ರಲ್ಲಿ ಶ್ರೀಲಂಕಾ ಮಿಲಿಟರಿ ಪ್ರಭಾಕರನ್ ಹತ್ಯೆ ಬಗ್ಗೆ ಮಾಹಿತಿ ನೀಡಿತ್ತು. ಆ ವೇಳೆ ಶ್ರೀಲಂಕಾ ತಮಿಳರು ಯುದ್ಧ ನಡೆಸಿದ್ದು, ಈ ವೇಳೆ ಹಲವು ತಮಿಳರನ್ನು ಹತ್ಯೆ ಮಾಡಲಾಗಿತ್ತು. ವಿಶ್ವದ ಅನೇಕ ದೇಶಗಳ ತಮಿಳರು ಸಹ ಇದನ್ನು ಖಂಡಿಸಿದ್ದರು. ಅಲ್ಲದೆ, ಶ್ರೀಲಂಕಾದ ಅಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕೆಂದೂ ಅವರು ಒತ್ತಾಯಿಸಿದ್ದರು.
ಈ ಮಧ್ಯೆ, ಪ್ರಭಾಕರನ್ ಮೃತದೇಹ ಎಂದು ಶ್ರೀಲಂಕಾ ಸರ್ಕಾರ ಘೋಷಿಸಿತ್ತಾದ್ರೂ, ಅದು ಅವರದ್ದೇ ಎಂದು ಇನ್ನೂ ಸಾಬೀತಾಗಿಲ್ಲ ಎಂದು ಶ್ರೀಲಂಕಾದ ಮಾಜಿ ಸಂಸದ ಶಿವಾಜಿಲಿಂಗಂ ಹೇಳಿದ್ದಾರೆ.