ಇತ್ತೀಚೆಗೆ ಜೋಡಿಯೊಂದು ಮಾಡಿದ ವಿವಾಹಪೂರ್ವ ಫೋಟೋಶೂಟ್ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಜೋಡಿಯು ನೀರಿನ ಮೇಲೆ ಶವದಂತೆ ತೇಲುತ್ತಾ ಫೋಸ್ ನೀಡಿದ್ದು, ಈ ವಿಲಕ್ಷಣ ಫೋಟೋಶೂಟ್‌ ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಜನರು ಇದನ್ನು 'ಫ್ರೀ ಡೆತ್‌ಶೂಟ್' ಎಂದು ಕರೆದಿದ್ದಾರೆ.

ಜೋಡಿಯ ವಿಚಿತ್ರ ವಿವಾಹಪೂರ್ವ ಫೋಟೋಶೂಟ್

ಇತ್ತೀಚೆಗೆ ಮದುವೆ ಪೂರ್ವ ಫೋಟೋ ಶೂಟ್‌ಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ವಿವಾಹವಾಗುವ ಜೋಡಿಗಳು ಹಿಂದೆಂದೂ ಯಾರೂ ಮಾಡಿರದಂತಹ ಫೋಟೋ ಶೂಟ್‌ಗಳನ್ನು ಮಾಡುವುದಕ್ಕೆ ಮುಂದಾಗುತ್ತಾರೆ. ಅನೇಕರು ಹೊಸ ಹೊಸ ಕ್ರಿಯೇಟಿವಿ ಜೊತೆ ಫೋಟೋ ಶೂಟ್ ಮಾಡುತ್ತಾರೆ. ಒಂದೊಂದು ಫೋಟೋ ಶೂಟ್ ಒಂದಕ್ಕಿಂತ ಒಂದು ಭಿನ್ನ ಹೀಗೆ ವಿಚಿತ್ರವಾಗಿ ಫೋಟೋ ಶೂಟ್ ಮಾಡಲು ಹೋಗಿ ಮದುವೆಯಾಗುವ ಬದಲು ಮಸಣ ಸೇರಿದ ಘಟನೆಯೂ ಈ ಹಿಂದೆ ನಡೆದಿದೆ. ಅದರೂ ಜನರ ಹುಚ್ಚುತನಕ್ಕೆ ಮಿತಿ ಇಲ್ಲ, ಮೊದಲೆಲ್ಲಾ ಮದುವೆಯಲ್ಲೊಂದು ಫೋಟೋ ತೆಗೆದರೆ ಅದುವೇ ನೆನಪಿಗಾಗಿ ಹಲವು ವರ್ಷಗಳ ಕಾಲ ಶಾಶ್ವತವಾಗಿ ಇರುತ್ತಿತ್ತು. ಈಗ ಹಾಗಲ್ಲ, ಮದುವೆಯಲ್ಲಿ ಫೋಟೋಶೂಟ್‌ ವೀಡಿಯೋಗ್ರಾಫಿಗಾಗಿಯೇ ಜನ ಸಾವಿರ ಲಕ್ಷಗಟ್ಟಲೇ ಹಣವನ್ನು ತೆಗೆದಿಡುತ್ತಾರೆ. ಹಾಗೂ ಎಲ್ಲರಿಗಿಂತ ವಿಭಿನ್ನವಾದ ಎಂದೂ ಯಾರು ಮಾಡದ ಫೋಟೋ ಶೂಡ್ ಮಾಡಲು ಬಯಸುತ್ತಾರೆ. ಹಾಗೆಯೇ ಜೋಡಿಯೊಂದು ಮಾಡಿದ ವಿಭಿನ್ನ ಎನಿಸಿದ ವಿವಾಹ ಪೂರ್ವ ಫೋಟೋಶೂಟ್ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.

ನೀರಿನ ಮೇಲೆ ಶವದಂತೆ ತೇಲಿದ ಜೋಡಿ

ಹೌದು ಫೋಟೋ ಶೂಟ್‌ಗಾಗಿ ಇಲ್ಲೊಂದು ಜೋಡಿ ಅಕ್ಷರಶಃ ನೀರಿನ ಮೇಲೆ ತೇಲುವ ಶವದಂತೆ ಮಲಗಿದ್ದಾರೆ. ಫೋಟೋಗ್ರಾಫರ್‌ಗಳು ಇಲ್ಲದೇ ಹೋದರೆ ಇವರನ್ನು ನೀರು ಕುಡಿದು ತೇಲುತ್ತಿರುವ ಶವಗಳೇನೋ ಎಂದು ಜನ ಅನುಮಾನದಿಂದ ನೋಡಿದರು ತಪ್ಪೇನಿಲ್ಲ, ಹಾಗಿದೆ ಈ ಫೋಟೋ ಶೂಟ್. Rosy (@rose_k01) ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಬರುಬರುತ್ತಾ ವಿವಾಹಪೂರ್ವ ಫೋಟೋಶೂಟ್‌ಗಳು ವಿಲಕ್ಷಣವಾಗುತ್ತಿವೆ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋ ನೋಡಿದ ಅನೇಕರು ಆಘಾತ ವ್ಯಕ್ತಪಡಿಸಿ ಹಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ನೆಟ್ಟಿಗರಿಂದ ಸಿಕ್ಕಾಪಟ್ಟೆ ಕಾಮೆಂಟ್

ಇದು ತುಂಬಾ ವಿಚಿತ್ರವಾದ ಜೋಡಿಯ ಆತ್ಮ*ಹತ್ಯೆ ಒಪ್ಪಂದದಂತೆ ಕಾಣುತ್ತಿದೆ. ನೀವು ಎಂದಾದರೂ ಈ ರೀತಿಯ ಪ್ರಿ-ವೆಡ್ಡಿಂಗ್ ಶೂಟ್ ಮಾಡಿದ್ದೀರಾ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. 11 ಸೆಕೆಂಡ್‌ಗಳ ಈ ವೀಡಿಯೋವನ್ನು ವ್ಯಾಪಕವಾಗಿ ಹಲವು ಸೋಶಿಯಲ್ ಮೀಡಿಯಾ ಸೈಟ್‌ಗಳಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಇದು ಪ್ರೀ ವೆಡ್ಡಿಂಗ್ ಫೋಟೋಶೂಟ್ ಅಥವಾ ಫ್ರೀ ಡೆತ್‌ಶೂಟಾ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇವರು ಸಾಯುವುದಕ್ಕೆ ಅಭ್ಯಾಸ ಮಾಡುತ್ತಿದ್ದಾರೆಯೇ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಜನರು ಇದನ್ನು ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಎಂದು ನೋಡಲು ಸಾಧ್ಯವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಫೋಟೋಶೂಟ್‌ಗೆ ಇಷ್ಟೊಂದು ಹಣ ವೆಚ್ಚ ಮಾಡುವ ಬದಲು ಎಐ ಮೂಲಕ ನಿಮ್ಮ ಫೋಟೋಗಳನ್ನು ನಿಮಗೆ ಬೇಕಾದಂತೆ ಎಡಿಟ್‌ ಮಾಡುವುದಕ್ಕೆ ಎಐಗೆ ಕೇಳಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಂದೊಳ್ಳೆ ವಿಭಿನ್ನವಾದ ಫೋಟೋಗಾಗಿ ಜನ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಕೇವಲ ಕೆಲವೇ ವರ್ಷಗಳಲ್ಲಿ ವಿಚ್ಚೇದನ ಪಡೆಯುವುದಕ್ಕೆ ಇದೆಲ್ಲಾ ಅವತಾರಗಳು ಬೇಕಾ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಎರಡು ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋ ವೀಕ್ಷಿಸಿದ್ದಾರೆ.