ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ನಡೆದ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಆರು ಸಶಸ್ತ್ರ ಪಡೆಗಳ ಸಿಬ್ಬಂದಿ ಹೆಸರುಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ವೀರ ಯೋಧರ ಹೆಸರುಗಳನ್ನು ನವದೆಹಲಿಯ ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ಕೆತ್ತಿಸಿ ಗೌರವಿಸಲಾಗುವುದು.

ನವದೆಹಲಿ (ಜೂ.26): ಪಹಲ್ಗಾಮ್ ಉಗ್ರರ ದಾಳಿಗೆ ಭಾರತೀಯ ಸೇನೆಯು ನೀಡಿದ್ದ ಭೀಕರ ಸೇನಾ ಪ್ರತ್ಯುತ್ತರವಾದ 'ಆಪರೇಷನ್ ಸಿಂದೂರ್' (Operation Sindoor) ಕಾರ್ಯಾಚರಣೆಯ ಅವಧಿಯಲ್ಲಿ ವೀರಮರಣ ಹೊಂದಿದ ಆರು ಜನ ಸಶಸ್ತ್ರ ಪಡೆಗಳ ಸಿಬ್ಬಂದಿ ಹೆಸರುಗಳನ್ನು ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಅಮರ ಯೋಧರ ತ್ಯಾಗದ ಗೌರವಾರ್ಥವಾಗಿ ಅವರ ಹೆಸರುಗಳನ್ನು ನವದೆಹಲಿಯಲ್ಲಿರುವ ರಾಷ್ಟ್ರೀಯ ಸಮರ ಸ್ಮಾರಕದಲ್ಲಿ (National War Memorial) ಕೆತ್ತಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆದು ಒಂದು ವರ್ಷಕ್ಕೂ ಅಧಿಕ ಸಮಯ ಕಳೆದ ನಂತರ, ಪಾಕಿಸ್ತಾನದ ವಿರುದ್ಧದ ಈ ಮಿಲಿಟರಿ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡ ಆರು ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಯ ಗುರುತನ್ನು ಕೇಂದ್ರ ಸರ್ಕಾರ ಈಗ ಅಧಿಕೃತವಾಗಿ ಜಗತ್ತಿಗೆ ತಿಳಿಸಿದೆ. ಇಲ್ಲಿಯವರೆಗೆ, ಸರ್ಕಾರವು ಈ ಕಾರ್ಯಾಚರಣೆಯಲ್ಲಿ ಸಂಭವಿಸಿದ ಮಿಲಿಟರಿ ಸಾವು-ನೋವುಗಳ ವಿವರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿರಲಿಲ್ಲ ಅಥವಾ ಅಧಿಕೃತವಾಗಿ ಒಪ್ಪಿಕೊಂಡಿರಲಿಲ್ಲ. ಹಾಗಾಗಿ, ಈಗ ಅವರನ್ನು ರಾಷ್ಟ್ರೀಯ ಸ್ಮಾರಕದ 'ರೋಲ್ ಆಫ್ ಆನರ್' (Roll of Honour) ಗೆ ಸೇರ್ಪಡೆಗೊಳಿಸಿರುವುದು ಅವರ ಬಲಿದಾನಕ್ಕೆ ಸಿಕ್ಕ ಮೊದಲ ಅಧಿಕೃತ ಮನ್ನಣೆಯಾಗಿದೆ.

ಹುತಾತ್ಮರಾದ ಆರು ವೀರ ಯೋಧರು ಯಾರು?

ಈ ಕಾರ್ಯಾಚರಣೆಯಲ್ಲಿ ಭಾರತೀಯ ಭೂಸೇನೆಯ ಐವರು ಮತ್ತು ವಾಯುಸೇನೆಯ ಒಬ್ಬರು ವೀರರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಅವರೆಂದರೆ, ಸುಬೇದಾರ್ ಮೇಜರ್ ಪವನ್ ಕುಮಾರ್ (ಭೂಸೇನೆ), ರೈಫಲ್‌ಮ್ಯಾನ್ ಸುನಿಲ್ ಕುಮಾರ್ (ಭೂಸೇನೆ), ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ (ಭೂಸೇನೆ), ಅಗ್ನಿವೀರ್ ಮೂಡ್ ಮುರಳಿ ನಾಯಕ್ (ಭೂಸೇನೆ), ಹವಾಲ್ದಾರ್‌ ಸುನಿಲ್ ಕುಮಾರ್ ಸಿಂಗ್ (ಭೂಸೇನೆ) ಹಾಗೂ ಸರ್ಜೆಂಟ್ ಸುರೇಂದ್ರ ಕುಮಾರ್ (ಭಾರತೀಯ ವಾಯುಸೇನೆ) ಹುತಾತ್ಮರಾಗಿದ್ದರು.

ಈ ವೀರರಲ್ಲಿ, ರೈಫಲ್‌ಮ್ಯಾನ್ ಸುನಿಲ್ ಕುಮಾರ್ ಅವರಿಗೆ ಮರಣೋತ್ತರವಾಗಿ ಅವರ ಅಪ್ರತಿಮ ಶೌರ್ಯಕ್ಕಾಗಿ 'ವೀರ ಚಕ್ರ' (Vir Chakra) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನು ವಾಯುಸೇನೆಯ ಸರ್ಜೆಂಟ್ ಸುರೇಂದ್ರ ಕುಮಾರ್ ಅವರಿಗೆ 'ವಾಯು ಸೇನಾ ಪದಕ' (Vayu Medal) ನೀಡಿ ಸನ್ಮಾನಿಸಲಾಗಿದೆ.

ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ಶಾಶ್ವತ ಸ್ಥಾನ

ಈ ಆರು ಯೋಧರ ಹೆಸರುಗಳನ್ನು ನವದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ರಾಷ್ಟ್ರೀಯ ಸಮರ ಸ್ಮಾರಕದ ವಿಶೇಷ ಗ್ರಾನೈಟ್ ಫಲಕಗಳ ಮೇಲೆ ಕೆತ್ತಲಾಗುತ್ತದೆ.. ಇದರೊಂದಿಗೆ ಪ್ರತಿಯೊಬ್ಬ ಯೋಧನಿಗೂ ಸ್ಮಾರಕದ 'ತ್ಯಾಗ ಚಕ್ರ'ದಲ್ಲಿ (Circle of Sacrifice) ಪ್ರತ್ಯೇಕ ಗ್ರಾನೈಟ್ ಇಟ್ಟಿಗೆಯ ಗೌರವ ಸಿಗಲಿದೆ. ತ್ಯಾಗ ಚಕ್ರವು ಗ್ರಾನೈಟ್‌ನಿಂದ ಮಾಡಲ್ಪಟ್ಟ 16 ವೃತ್ತಾಕಾರದ ಗೋಡೆಗಳನ್ನು ಹೊಂದಿದೆ. ಈ ಗೋಡೆಗಳ ಮೇಲೆ ಸಾವಿರಾರು ಗ್ರಾನೈಟ್ ಇಟ್ಟಿಗೆಗಳಿದ್ದು, ಪ್ರತಿ ಇಟ್ಟಿಗೆಯ ಮೇಲೂ 1947 ರ ಭಾರತದ ಸ್ವಾತಂತ್ರ್ಯದ ನಂತರ ದೇಶದ ಸೇವೆಯಲ್ಲಿ ಹುತಾತ್ಮರಾದ ಯೋಧರ ಹೆಸರು, ಹುದ್ದೆ (Rank) ಮತ್ತು ಅವರು ಸೇವೆ ಸಲ್ಲಿಸಿದ ಮಿಲಿಟರಿ ಘಟಕದ (Unit) ಹೆಸರನ್ನು ಕೆತ್ತಲಾಗಿರುತ್ತದೆ.

ಆಪರೇಷನ್ ಸಿಂಧೂರ್ ಕಾರ್ಯಾಚರಣೆ

2025 ರ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 26 ಜನ ಅಮಾಯಕ ನಾಗರಿಕರು ಸಾವನ್ನಪ್ಪಿದ್ದರು. ಈ ಕ್ರೂರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು 2025 ರ ಮೇ 7 ರಂದು 'ಆಪರೇಷನ್ ಸಿಂಧೂರ್' ಅನ್ನು ಪ್ರಾರಂಭಿಸಿದ್ದವು. ಈ ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಸಕ್ರಿಯವಾಗಿದ್ದ ಉಗ್ರರ ತರಬೇತಿ ಶಿಬಿರಗಳ ಮೇಲೆ ಭಾರತೀಯ ಸೇನೆ ನಿಖರವಾದ ದಾಳಿಗಳನ್ನು (Precision Strikes) ನಡೆಸಿತ್ತು. ಈ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಯಶಸ್ವಿಯಾಗಿ ಮಟ್ಟಹಾಕಲಾಗಿದೆ ಎಂದು ಸಶಸ್ತ್ರ ಪಡೆಗಳು ತಿಳಿಸಿದ್ದವು.

ಹತರಾದವರಲ್ಲಿ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸಿರ್ ಅಹ್ಮದ್ ಸೇರಿದ್ದಾರೆ, ಅತ್ಯಂತ ಹಿರಿಯ ಹಾಗೂ ಪ್ರಮುಖ ಉಗ್ರಗಾಮಿಗಳು ಎಂದು ಪರಿಗಣಿಸಲಾಗಿತ್ತು. ಈ ಕಾರ್ಯಾಚರಣೆಯು ಪಾಕಿಸ್ತಾನದ ಮಿಲಿಟರಿ ಮತ್ತು ಅಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳಿಗೆ ಭಾರಿ ಹಾನಿಯನ್ನುಂಟು ಮಾಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಮಿಲಿಟರಿ ಸಂಘರ್ಷವು, ಎರಡೂ ದೇಶಗಳು ಶಸ್ತ್ರಸಂಘರ್ಷವನ್ನು ನಿಲ್ಲಿಸಲು ಒಪ್ಪಿಕೊಂಡ ನಂತರ 2025 ರ ಮೇ 10 ರಂದು ಕೊನೆಗೊಂಡಿತ್ತು.